ಬಂಟ್ವಾಳ: ಗ್ರೀನ್‌ವುಡ್ ಫಾರ್ಮ್ಸ್‌ನಲ್ಲಿ ಚಿಣ್ಣರಿಗೆ ಹಳ್ಳಿ ಬದುಕಿನ ಪಾಠ!
ಬಂಟ್ವಾಳ, ಮೇ 24: ಚಿಣ್ಣರ ಬಳಗ ಮಂಗಳೂರು ಹಾಗೂ ಕಾಮಧೇನು ಗೋ ಆಶ್ರಮ ಟ್ರಸ್ಟ್ ವತಿಯಿಂದ ಮಂಗಳೂರು ನಗರದ ವಿವಿಧ ಶಾಲೆಗಳ ವಿದ್ಯಾರ್ಥಿಗಳಿಗೆ ‘ಪರಿಸರದೊಂದಿಗೆ ಚಿಣ್ಣರು ಹಾಗೂ ಹಳ್ಳಿಯಲ್ಲಿ ಚಿಣ್ಣರು’ ಕಾರ್ಯಕ್ರಮ ಬಂಟ್ವಾಳ ತಾಲೂಕಿನ ನೆಲ್ಲಿಗುಡ್ಡೆಯ ಗ್ರೀನ್‌ವುಡ್ ಫಾರ್ಮ್ಸ್‌ನಲ್ಲಿ ಗುರುವಾರ ನಡೆಯಿತು.
ದನ ಹಾಲು ಕೊಡುವುದು ಹೇಗೆ..?, ಭತ್ತದ ತೆನೆ ಅಕ್ಕಿಯಾಗುವುದು ಹೇಗೆ..?, ತರಕಾರಿ ಗಿಡಗಳು ಹೇಗಿರುತ್ತದೆ.. ಹೀಗೆ ಸಾಲು ಸಾಲು ಪ್ರಶ್ನೆಗಳಿಗೆ ವಿದ್ಯಾರ್ಥಿಗಳು ಈ ಶಿಬಿರದಲ್ಲಿ ಉತ್ತರ ಕಂಡುಕೊಂಡರು. ನಗರಪ್ರದೇಶದ ಕಾಂಕ್ರೀಟ್ ಕಾಡಿನ ನಡುವೆ ಬೆಳೆದ ಮಕ್ಕಳಿಗೆ ಗ್ರಾಮೀಣ ಪ್ರದೇಶದ ಒಂದು ದಿನದ ಒಡನಾಟ ಹತ್ತು ಹಲವು ಪರಿಸರದ ಪಾಠಗಳನ್ನು ಕಲಿಸಿಕೊಟ್ಟಿತು.
ಬೆಳಗ್ಗೆ ಆಗಮಿಸಿದ ಮಕ್ಕಳಿಗೆ ರಂಗ ನಿರ್ದೇಶಕ ವೌನೇಶ ವಿಶ್ವಕರ್ಮ ವಿವಿಧ ಆಟ, ಹಾಡು, ಕಥೆ ಹಾಗೂ ಚಟುವಟಿಕೆಗಳ ಮೂಲಕ ವ್ಯಕ್ತಿತ್ವ ವಿಕಸನ ಹಾಗೂ ಪರಿಸರದ ಪಾಠ ಮಾಡಿದರು. ಮಧ್ಯಾಹ್ನ 12:30ರ ಸುಮಾರಿಗೆ ಆಟ ಮುಗಿಸಿ ತೋಟ ಸುತ್ತಾಟಕ್ಕೆ ಹೊರಟ ಚಿಣ್ಣರು, ಅಡಿಕೆ, ತೆಂಗು, ತರಕಾರಿ ತೋಟದ ತಂಪಿನಲ್ಲಿ ಎಸಿ ರೂಮಿನ ಸುಖ ಕಂಡುಕೊಂಡರು. ಕೆಲ ಮಕ್ಕಳಂತೂ ಅಡಿಕೆ ಮರವೇರುವ ಪ್ರಯತ್ನಕ್ಕೇ ಕೈ ಹಾಕಿದರು.
ಪರಿಸರ ತಜ್ಞ ಅರವಿಂದ ಕುಡ್ಲ ಮಕ್ಕಳ ಜೊತೆಗೆ ಮಕ್ಕಳಾಗಿ ಮರ ಗಿಡಗಳ ಕುರಿತಾದ ಮಕ್ಕಳ ಪ್ರಶ್ನೆಗಳಿಗೆ ಉತ್ತರಿಸಿದರು. ಈ ಒಡನಾಟ ಮಕ್ಕಳಲ್ಲಿ ಪರಿಸರದ ಬಗೆಗಿನ ಕುತೂಹಲಗಳನ್ನು ಇಮ್ಮಡಿಗೊಳಿಸಿತು. ಬದನೆ, ಬೆಂಡೆಕಾಯಿ, ಹಾಗಲಕಾಯಿ, ತೊಂಡೆಕಾಯಿ, ಕಾಯಿಮೆಣಸು ಮಂತಾದ ತರಕಾರಿಗಳನ್ನು ಮಕ್ಕಳು ಗಿಡದಲ್ಲೇ ಕಂಡು ಸಂಭ್ರಮಪಟ್ಟರು. ಅಪರಾಹ್ನ ಅರವಿಂದ ಕುಡ್ಲ ನಡೆಸಿಕೊಟ್ಟ ಪಕ್ಷಿ ಪ್ರೀತಿಯ ತರಗತಿ ಮಕ್ಕಳನ್ನು ಪಕ್ಷಿ ಪ್ರಪಂಚದ ಹೊಸ ಲೋಕಕ್ಕೆ ಕೊಂಡೊಯ್ಯಿತು. ಪಕ್ಷಿಗಳ ಸಚಿತ್ರ ಮಾಹಿತಿಯ ಜೊತೆಗೆ ಅದರ ಚಲನವಲನ, ಗೂಡು ಕಟ್ಟುವಿಕೆ, ಆಹಾರ ಪದ್ಧತಿಗಳ ಬಗ್ಗೆ ಮಕ್ಕಳಿಗೆ ತಿಳಿಸಿಕೊಟ್ಟರು. ಈ ಸಂದರ್ಭ ಪಕ್ಷಿಗಳ ಜೊತೆಗಿನ ಒಡನಾಟ, ಪರಿಸರದ ಮೇಲಿನ ಪ್ರೀತಿಯನ್ನೂ ಹೆಚ್ಚಿಸುತ್ತದೆ ಎಂದು ಅರವಿಂದ ಕುಡ್ಲ ಮಕ್ಕಳಿಗೆ ಮನನ ಮಾಡಿದರು.
ದಿನವಿಡೀ ನಡೆದ ಶಿಬಿರಕ್ಕೆ ಪತ್ರಕರ್ತ, ಕ್ರೀಡಾ ಅಂಕಣಕಾರ ಜಗದೀಶ್ಚಂದ್ರ ಅಂಚನ್ ಆಗಮಿಸಿ, ಮಕ್ಕಳ ಚಟುವಟಿಕೆಗಳಿಗೆ ಹುರುಪು ತುಂಬಿದರು. ಗ್ರೀನ್ ವುಡ್ ಫಾರ್ಮ್ಸ್‌ನ ಮಾಲಕ, ಪತ್ರಕರ್ತ ಶ್ರೀನಿವಾಸ್ ನಾಯಕ್ ಇಂದಾಜೆ ಮಕ್ಕಳ ಆಸಕ್ತಿದಾಯಕ ಚಟುವಟಿಕೆಗಳಿಗೆ ಫಾರ್ಮ್ಸ್‌ನಲ್ಲಿ ಅವಕಾಶ ಒಡಗಿಸಿಕೊಡುವುದಾಗಿ ತಿಳಿಸಿದರು.
ಚಿಂತನ ಬಳಗದ ಅಧ್ಯಕ್ಷ ಇಸ್ಮಾಯೀಲ್, ಸುಖೇಶ್ ಶೆಟ್ಟಿ, ಪ್ರೇಮ್‌ನಾಥ್ ಮರ್ಣೆ, ಸಂಧ್ಯಾ ಪ್ರೇಮ್‌ನಾಥ್ ಮೊದಲಾದವರು ದಿನವಿಡೀ ನಡೆದ ಕಾರ್ಯಕ್ರಮಕ್ಕೆ ಸಾಥ್ ನೀಡಿದರು.
ಮಕ್ಕಳ ಸೃಜನಶೀಲ ಚಟುವಟಿಕೆಗಳಿಗೆ ಗ್ರೀನ್‌ವುಡ್ ಫಾರ್ಮ್ಸ್ ಸದಾ ತೆರೆದುಕೊಂಡಿರುತ್ತದೆ. ಮುಂದಿನ ವರ್ಷ ಬೇಸಿಗೆ ಶಿಬಿರವನ್ನು ಆಯೋಜನೆ ಮಾಡುತ್ತೇವೆ.
ಶ್ರೀನಿವಾಸ್ ನಾಯಕ್ ಇಂದಾಜೆ, ಗ್ರೀನ್‌ವುಡ್ ಫಾರ್ಮ್ಸ್, ನೆಲ್ಲಿಗುಡ್ಡೆ
ಪಕ್ಷಿಗಳ ಕಲರವದ ನಡುವೆ, ಹಚ್ಚ ಹಸಿರಿನ ಹಳ್ಳಿಯಲ್ಲಿ ಖುಷಿಯಿಂದ ದಿನ ಕಳೆದಿದ್ದೇವೆ. ಗೊತ್ತಿಲ್ಲದ ಅನೇಕ ಸಂಗತಿಗಳನ್ನು ತಿಳಿದುಕೊಂಡಿದ್ದೇವೆ. ಚಿಂತನ ಬಳಗಕ್ಕೆ ತುಂಬಾ ಥ್ಯಾಂಕ್ಸ್.
ಯಜ್ಞ, ಶಿಬಿರಾರ್ಥಿ, ಆಕಾಶಭವನ, ಮಂಗಳೂರು
ಕಾಂಕ್ರಿಟ್ ಕಾಡುಗಳ ಮಧ್ಯೆ ವಾಸಿಸುವ ನಗರ ಪ್ರದೇಶದ ವಿದ್ಯಾರ್ಥಿಗಳು ದಟ್ಟ ಕಾಡು ಪ್ರದೇಶದ ಮಧ್ಯೆ ಇರುವ ಗ್ರೀನ್‌ವುಡ್ ಫಾರ್ಮ್ಸ್‌ನಲ್ಲಿ ಹಸಿರು ಪರಿಸರ ದೊಂದಿಗೆ ಸಂತಸದ ದಿನವನ್ನು ಕಳೆದು ಸಂಭ್ರಮಪಟ್ಟಿದ್ದಾರೆ.
ಇಸ್ಮಾಯೀಲ್, ಅಧ್ಯಕ್ಷರು, ಚಿಂತನ ಬಳಗ ಮಂಗಳೂರು