ಆವಿಷ್ಕಾರದಲ್ಲಿ ಬಿಎಸ್ಸೆನ್ನೆಲ್ ಖಾಸಗಿಗಿಂತ ಬಹಳ ಹಿಂದೆ: ಗುಂಡಣ್ಣ
ಉಡುಪಿ, ಮೇ 25: ಬಿಎಸ್ಸೆನ್ನೆಲ್ 4ಜಿ ಪರಿಚಯ ಮಾಡುವ ವೇಳೆ ಜಿಯೋ ಕಂಪೆನಿಯವರು 5ಜಿ, 6ಜಿ, ನ್ಯಾನೋಗೆ ಹೋಗಿರುತ್ತಾರೆ. ನಾವು ಆಗ 4ಜಿಯನ್ನು ಪರಿಚಯ ಮಾಡಿ ಏನು ಪ್ರಯೋಜನ. ಬಿಎಸ್ಸೆನ್ನೆಲ್ ಆವಿಷ್ಕಾರದಲ್ಲಿ ಬಹಳಷ್ಟು ಹಿಂದೆ ಬಿದ್ದಿದೆ. ನಾವು ಆವಿಷ್ಕಾರದಲ್ಲಿ ಮುಂದೆ ಸಾಗದಿದ್ದರೆ ಗ್ರಾಹಕರನ್ನು ಕಳೆದುಕೊಳ್ಳಬೇಕಾಗುತ್ತದೆ ಎಂದು ಬಿಎಸ್ಸೆನ್ನೆಲ್ ಎಂಪ್ಲಾಯಿಸ್ ಯೂನಿಯನ್ ಕರ್ನಾಟಕ ವೃತ್ತದ ಕಾರ್ಯದರ್ಶಿ ಸಿ.ಕೆ.ಗುಂಡಣ್ಣ ಹೇಳಿದ್ದಾರೆ.
ಬಿಎಸ್ಸೆನ್ನೆಲ್ ಎಂಪ್ಲಾಯಿಸ್ ಯೂನಿಯನ್ ವತಿಯಿಂದ ಶುಕ್ರವಾರ ಬನ್ನಂಜೆ ಶ್ರೀನಾರಾಯಣ ಗುರು ಸಭಾಭವನದ ಶಿವಗಿರಿ ಹಾಲ್‌ನಲ್ಲಿ ಆಯೋಜಿಸಲಾದ ಎಂಟನೆ ಜಿಲ್ಲಾ ಸಮ್ಮೇಳನದಲ್ಲಿ ಭಾಗವಹಿಸಿ ಅವರು ಮಾತನಾಡುತಿದ್ದರು.
ಗ್ರಾಹಕರನ್ನು ಉಳಿಸಿಕೊಳ್ಳಬೇಕು ಎಂದು ಹೇಳಿ ಬಿಎಸ್ಸೆನ್ನೆಲ್‌ನಿಂದ ಮೇಳ ಗಳನ್ನು ಮಾಡಲಾಗುತ್ತಿದೆ. ಮೇಳದಲ್ಲಿ ಬಿಎಸ್ಸೆನ್ನೆಲ್ ಮೇಲಿನ ನಂಬಿಕೆಯಿಂದ ಸಿಮ್ ಖರೀದಿಸಿದ ಗ್ರಾಹಕ, ಆ ಸಿಮ್ ಕೆಲಸ ಮಾಡದಿದ್ದಾಗ ಬಿಎಸ್ಸೆನ್ನೆಲ್ ಮೇಲಿನ ನಂಬಿಕೆಯನ್ನೇ ಕಳೆದುಕೊಳ್ಳಬೇಕಾಗುತ್ತದೆ. ಅಲ್ಲದೆ ಆ ಸಿಮ್‌ನ್ನು ಎಸೆಯಬೇಕಾದ ಪರಿಸ್ಥಿತಿ ಎದುರಾಗುತ್ತದೆ ಎಂದರು.
ಗುತ್ತಿಗೆ ಆಧಾರಿತ ನೌಕರರಿಗೆ ಕನಿಷ್ಠ ವೇತನ 18ಸಾವಿರ ರೂ. ನೀಡುವಂತೆ ಬೇಡಿಕೆ ಇಟ್ಟಿದ್ದೇವೆ. ಕೆಲವು ಶಾಖೆಗಳಲ್ಲಿ ಸಿಬ್ಬಂದಿಗಳು, ಅಧಿಕಾರಿಗಳೇ ಇಲ್ಲ. ಅಲ್ಲಿನ ಗುತ್ತಿಗೆ ಆಧಾರಿತ ನೌಕರರೇ ಆ ಶಾಖೆಯನ್ನು ನಡೆಸಿಕೊಂಡು ಹೋಗುತ್ತಿದ್ದಾರೆ. ಇಂತಹ ದಾರುಣ ಪರಿಸ್ಥಿತಿಯ ಪರಿಚಯ ಇರುವ ಆಡಳಿತ ಮಂಡಳಿ ಕಣ್ಣು ಮುಚ್ಚಿ ಕುಳಿತು, ಆರ್ಥಿಕ ಅಡಚಣೆಯ ಕಾರಣವೊಡ್ಡಿ ಗುತ್ತಿಗೆ ಆಧಾರಿತ ನೌಕರನ್ನು ಕೆಲಸದಿಂದ ತೆಗೆದು ಹಾಕುತ್ತಿದೆ ಎಂದವರು ದೂರಿದರು.
ಮೂರನೆ ವೇತನ ಆಯೋಗದ ವರದಿಯ ಪರಿಷ್ಕರಣೆಗೆ ಸಚಿವ ಸಂಪುಟದ ಅನುಮೋದನೆ ಶೀಘ್ರದಲ್ಲೇ ದೊರೆಯುವ ವಿಶ್ವಾಸ ಇದೆ. ಆರ್ಥಿಕ ಅಡಚಣೆ ಹಾಗೂ ದುಂದುವೆಚ್ಚದ ನೆಪವೊಡ್ಡಿ ಪಿಂಚಣಿದಾರರ ಮೇಲೆ ಆಡಳಿತ ಮಂಡಳಿ ಪ್ರಹಾರ ನಡೆಸುತ್ತಿದೆ. ಪಿಂಚಣಿದಾರರು ವೈದ್ಯಕೀಯ ಬಿಲ್ ಪಾವತಿಯಾಗದೆ ಆತಂಕಕ್ಕೆ ಒಳಗಾಗಿದ್ದಾರೆ ಎಂದು ಅವರು ಆರೋಪಿಸಿದರು.
ಸಮ್ಮೇಳನವನ್ನು ದಕ್ಷಿಣ ಕನ್ನಡ ಟೆಲಿಕಾಂ ಜಿಲ್ಲೆಯ ಪ್ರಧಾನ ಮಹಾ ಪ್ರಬಂಧಕ ಜಿ.ಆರ್.ರವಿ ಉದ್ಘಾಟಿಸಿದರು. ಅಧ್ಯಕ್ಷತೆಯನ್ನು ಜಿಲ್ಲಾಧ್ಯಕ್ಷ ಬಿ.ಕೃಷ್ಣ ವಹಿಸಿ ದ್ದರು. ಸಿಐಟಿಯು ಜಿಲ್ಲಾ ಉಪಾಧ್ಯಕ್ಷ ಬಾಲಕೃಷ್ಣ ಶೆಟ್ಟಿ, ಡಿಕೆಟಿಡಿಯ ಉಪ ಮಹಾಪ್ರಬಂಧಕರುಗಳಾದ ಎಂ.ಎಚ್.ಪ್ರಕಾಶ್, ಕೆ.ಶಿವರಾಮ ಕಾರಂತ್, ಉಡುಪಿ ಉಪಮಹಾಪ್ರಬಂಧಕಿ ರೇಖಾ ಭಟ್, ಯೂನಿಯನ್ ಕರ್ನಾಟಕ ವೃತ್ತದ ಪೋಷಕ ಬಿ.ಪಿ.ನಾರಾಯಣ, ಸಹಾಯಕ ಕಾರ್ಯದರ್ಶಿ ಪಿ.ಡೀಕಯ್ಯ, ಸಂಘಟನಾ ಕಾರ್ಯದರ್ಶಿ ಗುರುರಾಜ್ ಮುಖ್ಯ ಅತಿಥಿಗಳಾಗಿದ್ದರು.
ವೇದಿಕೆಯಲ್ಲಿ ತುಮಕೂರು ಜಿಲ್ಲಾಧ್ಯಕ್ಷ ನಾಗೇಶ್, ಹರೀಶ್‌ಚಂದ್ರ ಬಾಬು, ಎಚ್.ಡಿ.ಪೈ, ವಿಶ್ವನಾಥ್ ಉಪಸ್ಥಿತರಿದ್ದರು. ಜಿಲ್ಲಾ ಕಾರ್ಯದರ್ಶಿ ತನ್ವೀರ್ ಪಾಷ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಶಿಧರ್ ಗೊಲ್ಲ ಸ್ವಾಗತಿಸಿದರು. ಗಣೇಶ್ ಭಟ್ ಕಾರ್ಯಕ್ರಮ ನಿರೂಪಿಸಿದರು.
‘ಚುನಾವಣೆಗಾಗಿ ಕೇಂದ್ರದ ತಾರತಮ್ಯ’
4ಜಿ ಬಿಎಸ್‌ಎನ್‌ನಲ್ಲಿ ನಿಜವಾಗಿಯೂ ಬಂದಿದೆಯೇ, ಕರ್ನಾಟಕ ವೃತ್ತದಲ್ಲಿ ಅದು ಕೆಲಸ ಮಾಡುತ್ತಿದೆಯಾ ಎಂಬುದು ಪ್ರಶ್ನೆಯಾಗಿ ಉಳಿದಿದೆ. ಶಿವಮೊಗ್ಗ ಜಿಲ್ಲೆಯ ಶಿಕಾರಿಪುರದಲ್ಲಿ 4ಜಿ ಟವರ್ ಉದ್ಘಾಟನೆ ಮಾಡಿದ ಅರ್ಧ ಗಂಟೆ ಯಲ್ಲೇ ಬಂದ್ ಮಾಡಲಾಗಿದೆ. 4ಜಿ ಸ್ಪೆಕ್ಟ್ರೂಮ್ ಬಿಎಸ್‌ಎನ್‌ಎಲ್‌ನಲ್ಲಿ ಜೂನ್ ಅಥವಾ ಜುಲೈನಲ್ಲಿ ಬರುತ್ತದೆ ಎಂದು ಒಂದು ಮೂಲ ಹೇಳುತ್ತದೆ. ಹಾಗಿರುವಾಗ ಬೇರೆ ಜಿಲ್ಲೆಗಳನ್ನು ಬಿಟ್ಟು ಎಪ್ರಿಲ್ ತಿಂಗಳಲ್ಲಿನಲ್ಲಿಯೇ ಶಿಕಾರಿ ಪುರದಲ್ಲಿ 4ಜಿ ಟವರ್ ಉದ್ಘಾಟಿಸಿರುವ ಉದ್ದೇಶ ಏನು ಎಂಬುದು ಅರ್ಥ ಆಗಲ್ಲ. ಕೇಂದ್ರ ಸರಕಾರದ ಈ ಧೋರಣೆ ಕರ್ನಾಟಕದ ಚುನಾವಣೆಯ ಹಿನ್ನೆಲೆ ಯಲ್ಲಿ ನೋಡಿದರೆ ತಾರತಮ್ಯ ಎಂದು ಹೇಳಬೇಕಾಗುತ್ತದೆ ಎಂದು ಗುಂಡಣ್ಣ ಟೀಕಿಸಿದರು.
ಎರಡೂವರೆ ವರ್ಷಗಳಿಂದ ಮಣಿಪಾಲದಲ್ಲಿ ಟವರ್ ಇಲ್ಲ!
ಮಣಿಪಾಲದ ವ್ಯಾಲಿವ್ಯೆ ಹೊಟೇಲ್ ಸಮೀಪ ಬಿಎಸ್‌ಎನ್‌ಎಲ್ ಟವರ್ ಬಿದ್ದು ಎರಡೂವರೆ ವರ್ಷಗಳಾಗಿವೆ. ಇದರಿಂದ ಮಣಿಪಾಲ ಆಸ್ಪತ್ರೆ ಹಾಗೂ ಶಿಕ್ಷಣ ಸಂಸ್ಥೆಗಳಿಗೆ ಬರುವ ರಾಜ್ಯ ಹೊರರಾಜ್ಯಗಳ ಸಾವಿರಾರು ಸಂಖ್ಯೆಯ ಗ್ರಾಹಕರಿಗೆ ಬಿಎಸ್‌ಎನ್‌ಎಲ್ ನೆಟ್‌ವರ್ಕ್‌ಗಳೇ ಸಿಗುತ್ತಿಲ್ಲ. ಬಿದ್ದು ಹೋಗಿರುವ ಟವರ್ ಎರಡೂವರೆ ವರ್ಷವಾದರೂ ದುರಸ್ತಿಯಾಗಿಲ್ಲ. ಇದು ಬಿಎಸ್‌ಎನ್‌ಎಲ್ ಸಂಸ್ಥೆಗೆ ಶೋಭೆ ತರುವುದಿಲ್ಲ. ಆದುದರಿಂದ ಇದನ್ನು ಆದಷ್ಟು ತುರ್ತಾಗಿ ಸರಿಪಡಿಸಬೇಕು. ಸಂಸ್ಥೆಯನ್ನು ಮೇಲುಮಟ್ಟಕ್ಕೆ ತರಬೇಕಾ ದರೆ ಅಲ್ಲಿನ ಕುಂದುಕೊರತೆಗಳನ್ನು ಆದಷ್ಟು ಬೇಗ ನಿವಾರಿಸಬೇಕು ಎಂದು ಕಾರ್ಯದರ್ಶಿ ಸಿ.ಕೆ.ಗುಂಡಣ್ಣ ಒತ್ತಾಯಿಸಿದರು.