×
Ad

ಡೆಂಗ್ ತಡೆಗೆ ಆರೋಗ್ಯ ಇಲಾಖೆಯಿಂದ ಮನೆ ಮನೆ ಭೇಟಿ: ಡಾ.ಪ್ರೇಮಾನಂದ್

Update: 2018-05-25 19:11 IST

ಉಡುಪಿ, ಮೇ 25: ಬೇಸಿಗೆಯಲ್ಲಿ ಜಿಲ್ಲೆಯನ್ನು ಕಾಡುವ ಡೆಂಗ್ ಜ್ವರ ಪ್ರಕರಣಗಳು, ಆರೋಗ್ಯ ಇಲಾಖೆಯ ನಿರಂತರ ಕ್ರಮಗಳಿಂದ ಕಳೆದ ವರ್ಷಕ್ಕೆ ಹೋಲಿಸಿದರೆ ಪ್ರಸಕ್ತ ಸಾಲಿನಲ್ಲಿ ಕಡಿಮೆಯಾಗಿದೆ ಎಂದು ಜಿಲ್ಲಾ ಮಲೇರಿಯಾ ನಿಯಂತ್ರಣ ಅಧಿಕಾರಿ ಡಾ.ಪ್ರೇಮಾನಂದ ಹೇಳಿದ್ದಾರೆ.

ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್ ಅಧ್ಯಕ್ಷತೆಯಲ್ಲಿ ನಡೆದ ಆರೋಗ್ಯ ಇಲಾಖೆಯ ಪ್ರಗತಿ ಪರಿಶೀಲನಾ ಸಭೆಯಲ್ಲಿ ಈ ಮಾಹಿತಿ ನೀಡಿದ ಡಾ.ಪ್ರೇಮಾನಂದ್, ಇಲಾಖೆಯ ಮುನ್ನೆಚ್ಚರಿಕೆ ಕ್ರಮಗಳಿಂದ ಕಳೆದ ಸಾಲಿಗೆ ಹೋಲಿಸಿದರೆ ಈ ಬಾರಿ ಮೇ 21ರವರೆಗೆ 36 ಪ್ರಕಣಗಳಷ್ಟೇ ವರದಿ ಯಾಗಿವೆ ಎಂದರು. ಉಡುಪಿ ನಗರ ವ್ಯಾಪ್ತಿಯಲ್ಲಿ 5 ಪ್ರಕರಣಗಳು ಕುಂಜಿಬೆಟ್ಟು, ಅಂಬಲಪಾಡಿ, ಗೋಪಾಲಪುರ ವಾರ್ಡ್‌ಗಳಿಂದ ವರದಿಯಾಗಿದೆ. ನಿಟ್ಟೂರಿನಲ್ಲಿ ಈ ಬಾರಿ ಯಾವುದೇ ಪ್ರಕರಣ ವರದಿಯಾಗಿಲ್ಲ. ಗ್ರಾಮೀಣ ಪ್ರದೇಶಗಳಲ್ಲಿ 22 ಪ್ರಕರಣಗಳು ಪತ್ತೆಯಾಗಿದೆ. ಕಾರ್ಕಳದ 4 ಪ್ರಕರಣಗಳು ಮಾಳ, ನಂದಳಿಕೆ, ಬೈಲೂರುಗಳಿಂದ ವರದಿಯಾಗಿದೆ. ಕುಂದಾಪುರದಲ್ಲಿ 5 ಪ್ರಕರಣಗಳು ಸಿದ್ದಾಪುರ, ಬೈಂದೂರು, ಹಾಲಾಡಿ, ಕುಂದಾಪುರಗಳಿಂದ ವರದಿಯಾಗಿವೆ ಎಂದ ಅವರು, ಕಳೆದ ಸಾಲಿನಲ್ಲಿ ಜಿಲ್ಲೆಯಲ್ಲಿ ಒಟ್ಟು 383 ಪ್ರಕರಣಗಳು ವರದಿಯಾಗಿದ್ದು, ಈ ಸಾಲಿನಲ್ಲಿ ಪ್ರಮಾಣ ಭಾರೀ ಕಡಿಮೆಯಾಗಿದೆ ಎಂದು ವಿವರಿಸಿರು.

ಮಳೆ ಬಿಟ್ಟು ಬಿಟ್ಟು ಬರುತ್ತಿರುವುದರಿಂದ ಸೊಳ್ಳೆಗಳ ಉತ್ಪತ್ತಿ ಹೆಚ್ಚುತ್ತಿದ್ದು, ಜನರು ನೀರನ್ನು ಅವೈಜ್ಞಾನಿಕವಾಗಿ ಸಂಗ್ರಹಿಸಿಡುತ್ತಿರುವುದರಿಂದ ಸೊಳ್ಳೆಗಳು ಹೆಚ್ಚಾಗುತ್ತಿವೆ. ಸೊಳ್ಳೆಗಳಿಂದ ಸಂಭವಿಸುತ್ತಿರುವ ವಿವಿಧ ಜ್ವರಗಳ ಬಗ್ಗೆ ಮನೆ ಮನೆ ಭೇಟಿ ವೇಳೆ ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆ ಯರು, ಕಿರಿಯ ಮಹಿಳಾ ಮತ್ತು ಪುರುಷ ಆರೋಗ್ಯ ಸಹಾಯಕರು ಮಾಹಿತಿಗಳನ್ನು ನೀಡುತಿದ್ದಾರೆ ಎಂದವರು ಹೇಳಿದರು.

ನಗರದಲ್ಲಿ ವಸತಿರಹಿತರಿಗೆ ಬೀಡಿನಗುಡ್ಡೆಯಲ್ಲಿ ನೈಟ್‌ಶೆಲ್ಟರ್ ಒದಗಿಸಿದ್ದು, ರಂಗಮಂದಿರದ ಎದುರು ಇದು ಉತ್ತಮವಾಗಿ ನಿರ್ವಹಿಸಲ್ಪಡುತ್ತಿದೆ. ರಾತ್ರಿ ವೇಳೆ ಮಲಗಲು ಅಗತ್ಯವುಳ್ಳ ನಿರಾಶ್ರಿತರು ಇದನ್ನು ಬಳಸಿಕೊಳ್ಳಬಹುದಾಗಿದೆ ಎಂದು ಜಿಲ್ಲಾಧಿಕಾರಿ ಪ್ರಿಯಾಂಕ ಹೇಳಿದರು. ನೈಟ್‌ಶೆಲ್ಟರ್‌ಗೆ ಸೊಳ್ಳೆ ಪರದೆ ಒದಗಿಸುವಂತೆ ಅವರು ವೈದ್ಯರಿಗೆ ಸೂಚಿಸಿದರು.

ಕುಂದಾಪುರದಲ್ಲಿ ನೈಟ್‌ಶೆಲ್ಟರ್ ಅಗತ್ಯವಿದ್ದು, ಈ ನಿಟ್ಟಿನಲ್ಲಿ ಕ್ರಮ ತೆಗೆದುಕೊಳ್ಳುವಂತೆ ಜಿಲ್ಲಾಧಿಕಾರಿ ಸಂಬಂಧಿತ ಅಧಿಕಾರಿಗೆ ಸೂಚಿಸಿದರು. ಈಗಾಗಲೇ ನಗರದಲ್ಲಿ ವಿತರಿಸಲಾಗಿರುವ ಸೊಳ್ಳೆ ಪರದೆ ಸದ್ಬಳಕೆಯ ಬಗ್ಗೆಯೂ ಜಿಲ್ಲಾಧಿಕಾರಿ ಮಾಹಿತಿಯನ್ನು ಪಡೆದರು. ಸೊಳ್ಳೆ ಉತ್ಪತ್ತಿಯ ಬಗ್ಗೆ ಕೀಟಶಾಸ್ತ್ರಜ್ಞೆ ಮುಕ್ತ ಸಭೆಗೆ ನೀಡಿದ ಮಾಹಿತಿ ಆಧಾರದಲ್ಲಿ ಎಲ್ಲ ಕಟ್ಟಡ ನಿರ್ಮಾಣಕಾರರು ಕಾರ್ಮಿಕರಿಗೆ ಮೂಲ ಸೌಕರ್ಯ ಒದಗಿಸುವ ಜೊತೆಗೆ ಪರಿಸರದಲ್ಲಿ ಬಳಸಿದ ನೀರು ನಿಲ್ಲದಂತೆ ಸೂಕ್ತ ಕ್ರಮಕೈಗೊಳ್ಳಲು ಸೂಚನೆ ನೀಡುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದರು.

ಬೇರೆ ಜಿಲ್ಲೆಗಳಿಂದ ಬರುವ ಕಾರ್ಮಿಕರ ಮೇಲೆ ನಿಗಾ ಇರಿಸಲು ಅವರು ಕಾರ್ಮಿಕ ಕಲ್ಯಾಣ ಅಧಿಕಾರಿಗೆ ಸೂಚಿಸಿದರು.ಮುಖ್ಯಾಧಿಕಾರಿಗಳು, ಆರೋಗ್ಯ ನಿರೀಕ್ಷಕರು ಹೆಚ್ಚಿನ ಮುತುವರ್ಜಿ ವಹಿಸುವುದರಿಂದ ರೋಗ ನಿಯಂತ್ರಣ ಸಾಧ್ಯವಿದೆ ಎಂದು ಜಿಲ್ಲಾಧಿಕಾರಿ ಅಭಿಪ್ರಾಯಪಟ್ಟರು. 
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ರೋಹಿಣಿ ಹಾಗೂ ಇತರ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News