ಕಾಂಪೋಸ್ಟ್ ಪೈಪ್ ಖರೀದಿ ಹಣ ದುರುಪಯೋಗ ಆರೋಪ
ಮಂಗಳೂರು, ಮೇ 25: ಕಾಂಪೋಸ್ಟ್ ಪೈಪ್ ಖರೀದಿಯಲ್ಲಿ ಹಣ ದುರುಪಯೋಗದ ಸಂಬಂಧ ದ.ಕ. ಜಿಲ್ಲೆಯ 6 ಗ್ರಾಪಂಗಳ ಅಧ್ಯಕ್ಷರು, ಪಿಡಿಒ ಹಾಗೂ ಸ್ವಚ್ಛತಾ ಆಂದೋಲನದ ಜಿಲ್ಲಾ ನೋಡಲ್ ಅಧಿಕಾರಿ ವಿರುದ್ಧ ಭ್ರಷ್ಟಾಚಾರ ನಿಗ್ರಹ ದಳದ ಜಿಲ್ಲಾ ಠಾಣೆಯಲ್ಲಿ ಶುಕ್ರವಾರ ಪ್ರಕರಣ ದಾಖಲಿಸಲಾಗಿದೆ.
ಪುತ್ತೂರು ತಾಲೂಕು ಕೋಡಿಂಬಾಡಿ ಗ್ರಾಪಂನಲ್ಲಿ 2015-16ನೇ ಸಾಲಿನಲ್ಲಿ ಕಾಂಪೋಸ್ಟ್ ಪೈಪ್ ಖರೀದಿಯಲ್ಲಿ ಹಣ ದುರುಪಯೋಗದ ಆರೋಪದಲ್ಲಿ ಗ್ರಾಪಂ ಅಧ್ಯಕ್ಷೆ ಸಂಧ್ಯಾ ರಾಮಚಂದ್ರ, ನಿವೃತ್ತ ಪಿಡಿಒ ದಾಮೋದರ ಗೌಡ ಮತ್ತು ಆರ್ಯಾಪು ಗ್ರಾಪಂ ಅಧ್ಯಕ್ಷೆ ಗೀತಾ, ಪಿಡಿಒ ಜಗದೀಶ್, ಬಿಳಿನೆಲೆ ಗ್ರಾಪಂ ಅಧ್ಯಕ್ಷೆ ಶಾರದಾ ಟಿ., ಪಿಡಿಒ ಆಗಿದ್ದ ಸರೋಜಾ, ಗ್ರಾಪಂ ಕಾರ್ಯದರ್ಶಿ ಆಗಿದ್ದ ರಮೇಶ.ಪಿ, ಕೊಲ ಗ್ರಾಪಂ ಅಧ್ಯಕ್ಷೆ ಮೀನಾಕ್ಷಿ ಬಿ., ಪಿಡಿಒ ಚಿತ್ರಾವತಿ, ಪೆರಾಬೆ ಗ್ರಾಪಂ ಅಧ್ಯಕ್ಷೆ ಬೇಬಿ ಸಿ. ಪಾಟಾಳಿ, ಪಿಡಿಒ ಜಿ.ಡಿ. ಲಲಿತಾ ಹಾಗೂ ಸುಳ್ಯ ತಾಲೂಕಿನ ಜಾಲ್ಸೂರು ಗ್ರಾಪಂ ಅಧ್ಯಕ್ಷೆ ಶಶಿಕಲಾ ಎಸ್. ನಾಯಕ್, ಪಿಡಿಒ ಶೀನ ಎ. ಅವರ ಮೇಲೆ ಪ್ರಕರಣ ದಾಖಲಾಗಿದೆ. ಈ ಎಲ್ಲಾ ಪ್ರಕರಣದಲ್ಲಿ ದ.ಕ.ಜಿಪಂನ ಸಂಪೂರ್ಣ ಸ್ವಚ್ಚತಾ ಅಂದೋಲನದ ನೋಡಲ್ ಅಧಿಕಾರಿ ಆಗಿದ್ದ ರೋಹಿತ್ ಎ.ಆರ್. ಅವರ ಮೇಲೂ ಪ್ರಕರಣ ದಾಖಲಾಗಿದೆ.
ಈ ಎಲ್ಲಾ ಪ್ರಕರಣಗಳನ್ನು ಭ್ರಷ್ಟಾಚಾರ ನಿಗ್ರಹ ದಳ ಪಶ್ಚಿಮ ವಲಯದ ಆರಕ್ಷಕ ಅಧೀಕ್ಷಕಿ ಶ್ರುತಿ ಎನ್.ಎಸ್. ಮಾರ್ಗದರ್ಶನದಲ್ಲಿ ಭ್ರಷ್ಟಾಚಾರ ನಿಗ್ರಹ ದಳದ ಡಿವೈಎಸ್ಪಿ ಸುಧೀರ್ ಹೆಗಡೆ ಪ್ರಕರಣ ದಾಖಲಿಸಿದ್ದು, ಪೊಲೀಸ್ ಇನ್‌ಸ್ಪೆಕ್ಟರ್ ಮೋಹನ್ ಕೊಟ್ಟಾರಿ ತನಿಖೆ ನಡೆಸಿರುತ್ತಾರೆ. ನಿಕಟಪೂರ್ವ ಇನ್‌ಸ್ಪೆಕ್ಟರ್ ಯೋಗೀಶ್ ಕುಮಾರ್ ಕೂಡಾ ಪ್ರಕರಣಗಳ ವಿಚಾರಣೆ ನಡೆಸಿದ್ದರು ಎಂದು ಎಸಿಬಿ ಪ್ರಕಟನೆ ತಿಳಿಸಿದೆ.