×
Ad

ಕೊಲೆ ಬೆದರಿಕೆಗಳು ಮತ್ತಷ್ಟು ಹೆಚ್ಚಾಗಿವೆ: ಎನ್‌ಡಿಟಿವಿಯ ರವೀಶ್ ಕುಮಾರ್

Update: 2018-05-25 20:37 IST

ಹೊಸದಿಲ್ಲಿ, ಮೇ 25: ನಿಂದನೆ ಹಾಗೂ ಕೊಲೆ ಬೆದರಿಕೆ ಕರೆಗಳನ್ನು 2015ರಿಂದ ಸ್ವೀಕರಿಸುತ್ತಿದ್ದು, ಕಳೆದ ತಿಂಗಳಿಂದ ಇಂತಹ ಕರೆಗಳು ಹೆಚ್ಚಾಗಿವೆ ಎಂದು ಎನ್‌ಡಿಟಿವಿ ಪತ್ರಕರ್ತ ರವೀಶ್ ಕುಮಾರ್ ಆರೋಪಿಸಿದ್ದಾರೆ.

ಈ ಬೆದರಿಕೆ ಸರಣಿಯಲ್ಲಿ ಇತ್ತೀಚೆಗೆ ಮಾಜಿ ಸಿಐಎಸ್‌ಎಫ್ ಯೋಧ ವೀಡಿಯೊ ಸಂದೇಶವೊಂದನ್ನು ಕಳುಹಿಸಿ ಕಚೇರಿಯಲ್ಲೇ ಗುಂಡಿಟ್ಟು ಹತ್ಯೆಗೈಯಲಾಗುವುದು ಎಂದು ಬೆದರಿಕೆ ಒಡ್ಡಿದ್ದಾರೆ ಎನ್ನಲಾಗಿದೆ. ಉತ್ತರಪ್ರದೇಶದ ಜೌನ್‌ಪುರದ ಬಜರಂಗದಳದವನೆಂದು ಪ್ರತಿಪಾದಿಸಿದ್ದ ವ್ಯಕ್ತಿಯೋರ್ವ ರವೀಶ್ ಕುಮಾರ್ ರ ಮನೆಯ ವಿಳಾಸ, ಮನೆಯಿಂದ ಕಚೇರಿಗೆ ತೆರಳುವ ದಾರಿಯ ಖಚಿತ ವಿವರವನ್ನು ಕಳುಹಿಸಿದ್ದು, ಕೊಲ್ಲುವುದಾಗಿ ಹಾಗೂ ಕುಟುಂಬದ ಮಹಿಳೆಯರ ಮೇಲೆ ಅತ್ಯಾಚಾರ ಎಸಗುವುದಾಗಿ ಬೆದರಿಕೆ ಒಡ್ಡಿದ್ದಾನೆ ಎಂದು ಆರೋಪಿಸಲಾಗಿದೆ.

‘‘ಇದನ್ನು ಉತ್ತಮವಾಗಿ ಆಯೋಜಿಸಲಾಗಿದೆ ಹಾಗೂ ರಾಜಕೀಯವಾಗಿ ಅನುಮೋದಿಸಲಾಗಿದೆ’’ ಎಂದು ರವೀಶ್ ಕುಮಾರ್ ದಿನಪತ್ರಿಕೆಯೊಂದಕ್ಕೆ ತಿಳಿಸಿದ್ದಾರೆ. ಗಾಝಿಯಾಬಾದ್ ಹಾಗೂ ಗ್ರೇಟರ್ ಕೈಲಾಸ್ ಪೊಲೀಸರಿಗೆ ಅವರು ಲೆಕ್ಕವಿಲ್ಲದಷ್ಟು ದೂರು ಸಲ್ಲಿಸಿದ್ದಾರೆ. ಆದರೆ, ಪೊಲೀಸರು ಯಾವುದೇ ಕ್ರಮ ಕೈಗೊಂಡಿಲ್ಲ.

ಕಳೆದ ವರ್ಷ ಅವರು ಈ ವಿವರಗಳೊಂದಿಗೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಬಹಿರಂಗ ಪತ್ರ ಬರೆದಿದ್ದರು. ಆದರೆ, ಅವರಿಂದ ಯಾವುದೇ ಪ್ರತಿಕ್ರಿಯೆ ಬರಲಿಲ್ಲ. "ಪ್ರಧಾನಿ ಮೋದಿ ಅವರ ಗಮನಕ್ಕೆ ಈ ವಿಚಾರ ತರುವುದರಿಂದ ಬದಲಾವಣೆ ಆಗುತ್ತದೆ ಎಂದು ನಾನು ಭಾವಿಸುವುದಿಲ್ಲ. ಅವರು ನನ್ನನ್ನು ನಿಂದಿಸುತ್ತಿರುವ ಹಾಗೂ ಟೀಕಿಸುತ್ತಿರುವ ವ್ಯಕ್ತಿಗಳನ್ನು ಸಂತೋಷದಿಂದ ಅನುಸರಿಸಲು ಆರಂಭಿಸುತ್ತಾರೆ" ಎಂದಿದ್ದಾರೆ ರವೀಶ್.

ಇದೇ ರೀತಿ ಪತ್ರಕರ್ತ ರಾಣಾ ಅಯ್ಯೂಬ್ ಅವರ ವಿರುದ್ಧ ಆನ್‌ಲೈನ್ ಟೀಕೆ ಹಾಗೂ ನಿಂದನೆ ಪ್ರಕರಣಗಳಿಗೆ ಸಂಬಂಧಿಸಿ ವಿಶ್ವ ಸಂಸ್ಥೆಯ ಮಾನವ ಹಕ್ಕು ತಜ್ಞರು, ಗುರುವಾರ ಹೇಳಿಕೆ ನೀಡಿ ಅಯ್ಯೂಬ್‌ಗೆ ಕೂಡಲೇ ರಕ್ಷಣೆ ನೀಡಬೇಕು ಎಂದಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News