ಮಹಿಳೆಯ ಕೊಲೆಯತ್ನ: ಆರೋಪಿ ಬಂಧನ
ಗಂಗೊಳ್ಳಿ, ಮೇ 25: ಜಾಗದ ವಿವಾದಕ್ಕೆ ಸಂಬಂಧಿಸಿ ಮಹಿಳೆಯೊಬ್ಬರನ್ನು ಕತ್ತಿಯಿಂದ ಕಡಿದು ಕೊಲೆಗೆ ಯತ್ನಿಸಿದ ಘಟನೆ ಮೇ 25ರಂದು ಬೆಳಗ್ಗೆ ನಾಡಾ ಗ್ರಾಮದ ಪಡುಕೋಣೆ ಎಂಬಲ್ಲಿ ನಡೆದಿದೆ.
ಪಡುಕೋಣೆಯ ರುಕ್ಕು ಪೂಜಾರ್ತಿ(75) ಹಲ್ಲೆಗೆ ಒಳಗಾಗಿ ಉಡುಪಿ ಜಿಲ್ಲಾ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಆರೋಪಿ ಹೊಸಾಡು ಗ್ರಾಮದ ಕಂಚಗೋಡು ಭರತ್‌ನಗರದ ಸಂದೀಪ್(25) ಎಂಬಾತನನ್ನು ಪೊಲೀಸರು ಬಂಧಿಸಿದ್ದು, ಕುಂದಾಪುರ ನ್ಯಾಯಾಲಯವು ಆರೋಪಿಗೆ 15 ದಿನಗಳ ಕಾಲ ನ್ಯಾಯಾಂಗ ಬಂಧನ ವಿಧಿಸಿದೆ.
ಇವರಿಬ್ಬರ ಮಧ್ಯೆ ಜಾಗದ ವಿಚಾರದಲ್ಲಿ ತಕರಾರು ಇದ್ದು, ಇದೇ ಕಾರಣ ಕ್ಕಾಗಿ ತಮ್ಮ ಮನೆಯ ಬಾವಿಯ ಕಟ್ಟೆ ಬಳಿ ಇದ್ದ ರುಕ್ಕು ಪೂಜಾರ್ತಿಯನ್ನು ಆರೋಪಿ ಕೊಲೆ ಮಾಡುವ ಉದ್ದೇಶದಿಂದ ಕತ್ತಿಯಿಂದ ತಲೆಗೆ ಬೆನ್ನಿಗೆ ಕಡಿದು ಪರಾರಿಯಾಗಿದ್ದನು. ತೀವ್ರವಾಗಿ ಗಾಯಗೊಂಡಿದ್ದ ರುಕ್ಕು ಪೂಜಾರ್ತಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ತನಿಖೆ ನಡೆಸಿದ ಪೊಲೀಸರು ಆರೋಪಿ ಸಂದೀಪ್‌ನನ್ನು ಬಂಧಿಸಿದ್ದಾರೆ. ಈ ಬಗ್ಗೆ ಗಂಗೊಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.