ಠೇವಣಿ ಹಿಂತಿರುಗಿಸದೆ ಲಕ್ಷಾಂತರ ರೂ. ವಂಚನೆ ಪ್ರಕರಣ: ‘ಶರ್ಮಾನ್’ನ ಅಧ್ಯಕ್ಷ, ಕಾರ್ಯದರ್ಶಿಗೆ ನ್ಯಾಯಾಂಗ ಬಂಧನ
ಪುತ್ತೂರು, ಮೇ 25: ಲಕ್ಷಾಂತರ ರೂ. ಠೇವಣಿ ಇಟ್ಟ ಗ್ರಾಹಕರೊಬ್ಬರಿಗೆ ಹಣ ಹಿಂತಿರುಗಿಸದೆ ವಂಚಿಸಿದ ಆರೋಪದಲ್ಲಿ ಪುತ್ತೂರು ನಗರ ಪೊಲೀಸರಿಂದ ಬಂಧನ ಕ್ಕೋಳಗಾಗಿದ್ದ ಪುತ್ತೂರಿನ ಎಪಿಎಂಸಿ ರಸ್ತೆಯ ಕ್ರಿಸ್ತೋಫರ್ ಕಟ್ಟಡದಲ್ಲಿ ಪ್ರಧಾನ ಕಚೇರಿ ಹೊಂದಿ ಕಾರ್ಯಾಚರಿಸುತ್ತಿದ್ದ ಶರ್ಮಾನ್ ವಿವಿಧೋದ್ದೇಶ ಸೌಹಾರ್ದ ಸಹಕಾರಿ ಸಂಘದ ಅಧ್ಯಕ್ಷ ಮತ್ತು ಕಾರ್ಯದರ್ಶಿಗೆ ಪುತ್ತೂರು ನ್ಯಾಯಾಲಯ ನ್ಯಾಯಾಂಗ ಬಂಧನ ವಿಧಿಸಿದೆ.
ವಂಚನೆಗೊಳಗಾಗಿದ್ದ ಠೇವಣಿದಾರ ಮಂಗಳೂರು ತಾಲ್ಲೂಕಿನ ಯಯ್ಯಡಿ ನಿವಾಸಿ ಶ್ರೀಶ ಕೇಶವ ಅವರು ನೀಡಿದ ದೂರಿನಂತೆ ಪುತ್ತೂರು ನಗರ ಪೊಲೀಸರು ಸಂಘದ ಅಧ್ಯಕ್ಷರಾದ ಪುತ್ತೂರು ತಾಲ್ಲೂಕಿನ ಬೆಳ್ಳಿಪ್ಪಾಡಿ ಗ್ರಾಮದ ಬೇರಿಕೆ ಸಮೀಪದ ಕಾರ್ನೋಜಿ ನಿವಾಸಿ ಗಿರೀಶ್‌ಕುಮಾರ್ ಮತ್ತು ಸಂಘದ ಕಾರ್ಯದರ್ಶಿಯಾಗಿರುವ ಪುತ್ತೂರು ನಗರದ ಹೊರವಲಯದ ಚಿಕ್ಕಮುಡ್ನೂರು ಗ್ರಾಮದ ತಾರಿಗುಡ್ಡೆ ನಿವಾಸಿ ಕೇಶವ ಡಿ.ಅಂಚನ್ ಅವರನ್ನು ಕಳೆದ ಮೇ17ರಂದು ಬಂಧಿಸಿದ್ದರು.
ಆರೋಪಿಗಳಾದ ಗಿರೀಶ್‌ಕುಮಾರ್ ಮತ್ತು ಕೇಶವ ಡಿ.ಅಂಚನ್ ಅವರನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದ ಪೊಲೀಸರು ಹೆಚ್ಚಿನ ತನಿಖೆಯ ಹಿನ್ನಲೆಯಲ್ಲಿ ಮತ್ತೆ ಅವರನ್ನು ಪೊಲೀಸ್ ಕಸ್ಟಡಿಗೆ ತೆಗೆದುಕೊಂಡು ವಿಚಾರಣೆಗೊಳಪಡಿಸಿದ್ದು, ಈ ನಡುವೆ ವಂಚನೆಗೊಳಗಾಗಿದ್ದ ಇನ್ನೂ 10 ಮಂದಿ ಠೇವಣಿದಾರರು ಠಾಣೆಗೆ ಬಂದು ಶರ್ಮಾನ್ ವಿವಿಧೋದ್ದೇಶ ಸೌಹಾರ್ದ ಸಹಕಾರಿ ಸಂಘದ ವಿರುದ್ದ ವಂಚನೆ ದೂರು ನೀಡಿರುವುದಾಗಿ ತಿಳಿದು ಬಂದಿದೆ.
ಪೊಲೀಸ್ ಕಸ್ಟಡಿಯ ಅವಧಿ ಗುರುವಾರ ಪೂರ್ಣಗೊಂಡ ಹಿನ್ನಲೆಯಲ್ಲಿ ಪೊಲೀಸರು ಆರೋಪಿಗಳಾದ ಗಿರೀಶ್‌ಕುಮಾರ್ ಮತ್ತು ಕೇಶವ ಡಿ.ಅಂಚನ್ ಅವರನ್ನು ಗುರುವಾರ ಸಂಜೆ ಮತ್ತೆ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಲಯ ಅವರಿಬ್ಬರಿಗೆ ನ್ಯಾಯಾಂಗ ಬಂಧನ ವಿಧಿಸಿದೆ. ಹೆಚ್ಚಿನ ಮಂದಿಯಿಂದ ದೂರುಗಳು ಬಂದಿರುವ ಹಿನ್ನಲೆಯಲ್ಲಿ ಪೊಲೀಸರು ಮತ್ತೆ ಅವರನ್ನು ಪೊಲೀಸ್ ಕಸ್ಟಡಿಗೆ ಪಡೆದುಕೊಂಡು ವಿಚಾರಣೆ ನಡೆಸಲು ಮುಂದಾಗಿದ್ದಾರೆ.
ಪ್ರಕರಣದ ಹಿನ್ನಲೆ
ಮಂಗಳೂರಿನ ಯಯ್ಯಡಿಯ ನಿವಾಸಿ ಶ್ರೀಶ ಕೇಶವ ಅವರು ಶರ್ಮಾನ್ ವಿವಿಧೋದ್ದೇಶ ಸೌಹಾರ್ದ ಸಹಕಾರಿ ಸಂಘದಲ್ಲಿ ಕಳೆದ 2016ರಿಂತ ಹಂತ ಹಂತವಾಗಿ ಠೇವಣಿ ರೂಪದಲ್ಲಿ ಹಣ ತೊಡಗಿಸಿದ್ದು, ಅವರು ಒಟ್ಟು ರೂ.79 ಲಕ್ಷ ಹಣವನ್ನು ಈ ಸಂಘದಲ್ಲಿ ಠೇವಣಿ ಇರಿಸಿದ್ದರು. ಈ ಠೇವಣಿಯ ಪೈಕಿ ರೂ. 50 ಲಕ್ಷ ಠೇವಣಿಯ ಹಿಂತಿರುಗಿಸುವ ಅವಧಿ ಪೂರ್ಣಗೊಂಡಿದ್ದ ಹಿನ್ನಲೆಯಲ್ಲಿ ಶ್ರೀಶ ಕೇಶವ ಅವರು ಕಚೇರಿಗೆ ತೆರಳಿ ಠೇವಣಿ ಹಣ ಹಿಂತಿರುಗಿಸುವಂತೆ ಕೇಳಿಕೊಂಡಿದ್ದರೂ ಸಂಬಂಧಪಟ್ಟ ಕಚೇರಿಯಿಂದ ಸ್ಪಂದನೆ ಸಿಕ್ಕಿಲ್ಲ ಎಂಬ ಆರೋಪವಿತ್ತು.
ಶ್ರೀಶ ಕೇಶವ ಅವರು ಠೇವಣಿ ಹಣಕ್ಕಾಗಿ ಅಲೆದಾಟ ಆರಂಭಿಸಿದ ಬೆನ್ನಲ್ಲೇ ಹಣ ಹಿಂತಿರುಗಿಸಬೇಕಾದ ಜವಾಬ್ದಾರಿ ಹೊಂದಿರುವ ಸಂಘದ ಅಧ್ಯಕ್ಷ ಗಿರೀಶ್‌ಕುಮಾರ್ ಮತ್ತು ಕಾರ್ಯದರ್ಶಿ ಕೇಶವ ಡಿ.ಅಂಚನ್ ಅವರು ತಲೆಮರೆಸಿಕೊಂಡು ಹಿನ್ನಲೆಯಲ್ಲಿ ಅನುಮಾನಗೊಂಡ ಅವರು ಪುತ್ತೂರು ಠಾಣೆಗೆ ಆಗಮಿಸಿ ಸಂಸ್ಥೆಯ ವಿರುದ್ದ ವಂಚನೆ ದೂರು ನೀಡಿದ್ದರು.
ಶ್ರೀಶ ಕೇಶವ ಅವರ ದೂರಿನಂತೆ ಪ್ರಕರಣ ದಾಖಲಿಸಿಕೊಂಡ ಪುತ್ತೂರು ನಗರ ಪೊಲೀಸರು ಸಂಘದ ಅಧ್ಯಕ್ಷ ಗಿರೀಶ್‌ಕುಮಾರ್ ಮತ್ತು ಕಾರ್ಯದರ್ಶಿ ಕೇಶವ ಅಂಚನ್ ಅವರನ್ನು ಪತ್ತೆ ಮಾಡಿ ಬಂಧಿಸಿದ್ದರು.