ಮೂಡುಬಿದಿರೆ: ಗ್ರಾಮೀಣ ಅಂಚೆ ನೌಕರರಿಂದ ಮುಷ್ಕರ
ಮೂಡುಬಿದಿರೆ, ಮೇ 26 : ಕೇಂದ್ರ ಸರಕಾರವು ಗ್ರಾಮೀಣ ಅಂಚೆ ನೌಕರರ ವಿವಿಧ ಬೇಡಿಕೆಗಳನ್ನು ಈಡೇರಿಸಬೇಕೆಂದು ಒತ್ತಾಯಿಸಿ ಅಖಿಲ ಭಾರತ ಗ್ರಾಮೀಣ ಅಂಚೆ ನೌಕರರ ಸಂಘವು ಕರೆಕೊಟ್ಟಿರುವ ಹಿನ್ನೆಲೆಯಲ್ಲಿ ಪುತ್ತೂರು ವಿಭಾಗದ ವತಿಯಿಂದ ಮೂಡುಬಿದಿರೆ ಅಂಚೆ ಕಚೇರಿ ಎದುರು ಶನಿವಾರ ಗ್ರಾಮೀಣ ಅಂಚೆ ನೌಕರರು ಮುಷ್ಕರ ನಡೆಸಿದರು.
ಕೇಂದ್ರ ಸರಕಾರವು ನೇಮಿಸಿದ ಕಮಲೇಶ್ಚಂದ್ರ ವರದಿಗೆ ಹಣಕಾಸು ಇಲಾಖೆಯು ಅನುಮೋದನೆ ನೀಡಿದ್ದು ಈ ವರದಿಗೆ ಸಚಿವ ಸಂಪುಟ ಅನುಮೋದನೆ ಮಾಡಿ ವರದಿಯನ್ನು ಜಾರಿಗೊಳಿಸುವ ಮೂಲಕ ಗ್ರಾಮೀಣ ಅಂಚೆ ನೌಕರರಿಗೆ ನ್ಯಾಯವನ್ನು ಒದಗಿಸಬೇಕು. ಕಳೆದ ಐದು ದಿನಗಳಿಂದ ಮುಷ್ಕರ ನಡೆಸುತ್ತಿದ್ದು ಸೋಮವಾರದಿಂದ ಉಪವಾಸ ಸತ್ಯಾಗ್ರಹ ನಡೆಸುವುದಾಗಿ ಎಚ್ಚರಿಸಿದರು.
ಸಂಘದ ಪುತ್ತೂರು ವಿಭಾಗದ ಅಧ್ಯಕ್ಷ ವಿಠಲ ಎಸ್ ಪೂಜಾರಿ, ಕಾರ್ಯದರ್ಶಿ ಸುನಿಲ್ ದೇವಾಡಿಗ, ಕೋಶಾಧಿಕಾರಿ ಶಕಿಲಾ, ಮೂಡುಬಿದಿರೆ ವಲಯದ ಅಧ್ಯಕ್ಷ ಬಾಬು ಎಚ್, ಕಾರ್ಯದರ್ಶಿ ಮನೋಹರ ಕುಟಿನ್ಹಾ, ಜೊತೆ ಕಾರ್ಯದರ್ಶಿ ಶ್ಯಾಮಸುಂದರ, ಹಾಗೂ ಸದಸ್ಯರು ಈ ಮುಷ್ಕರದಲ್ಲಿ ಪಾಲ್ಗೊಂಡಿದ್ದರು.