×
Ad

ಹಲ್ಲೆ ಪ್ರಕರಣ: ಇಬ್ಬರು ಅಪರಾಧಿಗಳಿಗೆ ಶಿಕ್ಷೆ

Update: 2018-05-26 20:44 IST

ಮಂಗಳೂರು, ಮೇ 26: ಕಳೆದ ವರ್ಷದ ಜ.12ರಂದು ಸೋಮೇಶ್ವರ ಗ್ರಾಮದ ಪೆರಿಬೈಲ್ ಬೀಚ್ ಬಳಿ ನಡೆದ ಹಲ್ಲೆ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರು ಇಬ್ಬರು ಅಪರಾಧಿಗಳಿಗೆ 26 ದಿನ ಜೈಲು ಶಿಕ್ಷೆ ಹಾಗೂ ತಲಾ 10 ಸಾವಿರ ರೂ. ದಂಡ ವಿಧಿಸಿ ಶುಕ್ರವಾರ ತೀರ್ಪು ನೀಡಿದ್ದಾರೆ.

ಸೋಮೇಶ್ವರ ದ್ವಾರಕ ನಗರ ಸರಸ್ವತಿ ಕಾಲೋನಿ ನಿವಾಸಿಗಳಾದ ಗುರುರಾಜ್ (25) ಹಾಗೂ ಜಾನ್ ಬ್ಯಾಪ್ಟಿಸ್ಟ್ (22) ಶಿಕ್ಷೆಗೊಳಗಾದ ಅಪರಾಧಿಗಳು. ದಂಡ ತೆರಲು ತಪ್ಪಿದರೆ ಮತ್ತೆ 3 ತಿಂಗಳು ಸಾದಾ ಶಿಕ್ಷೆ ಅನುಭವಿಸುವಂತೆ ಹಾಗೂ ದಂಡದ ಮೊತ್ತದಲ್ಲಿ ಅರ್ಧದಷ್ಟು ಗಾಯಾಳುವಿಗೆ ಪರಿಹಾರ ರೂಪದಲ್ಲಿ ನೀಡಬೇಕು ಎಂದು ನ್ಯಾಯಾಧೀಶ ಕೆ.ಎಸ್.ಬೀಳಗಿ ತೀರ್ಪಿನಲ್ಲಿ ಆದೇಶಿಸಿದ್ದಾರೆ.

ಘಟನೆ ಹಿನ್ನಲೆ: ಸೋಮೇಶ್ವರ ಗ್ರಾಮದ ಪೆರಿಬೈಲ್ ಬಳಿ ವಾಲಿಬಾಲ್ ಆಟ ಆಡಲು ತೆರಳಿದ್ದ ಮುಹಮ್ಮದ್ ಇಕ್ಬಾಲ್ ತನ್ನ ಪರಿಚಯದ ಮನ್ಸೂರ್ ಎಂಬವರ ಜತೆ ಮಾತನಾಡುತ್ತಿದ್ದರು. ಈ ಸಂದರ್ಭ ಅಲ್ಲಿಗೆ 2 ಬೈಕ್‌ಗಳಲ್ಲಿ ಆಗಮಿಸಿದ ಗುರುರಾಜ್ ಮತ್ತು ಜಾನ್ ಬ್ಯಾಪ್ಟಿಸ್ಟ್ ಎಂಬವರು ಮುಹಮ್ಮದ್ ಇಕ್ಬಾಲ್‌ರಿಗೆ ಅವಾಚ್ಯ ಶಬ್ದಗಳಿಂದ ಬೈದಿದ್ದರಲ್ಲದೆ ಇಕ್ಬಾಲ್‌ರನ್ನು ಕೊಲೆ ಮಾಡುವ ಉದ್ದೇಶದಿಂದ ಕಬ್ಬಿಣದ ರಾಡ್‌ನಿಂದ ಹೊಡೆದು ಮಾರಣಾಂತಿಕ ಹಲ್ಲೆ ಮಾಡಿದ್ದರು ಎಂದು ದೂರಲಾಗಿತ್ತು.

ಮುಹಮ್ಮದ್ ಇಕ್ಬಾಲ್ ತನ್ನನ್ನು ರಕ್ಷಿಸಿಕೊಳ್ಳಲು ಬೊಬ್ಬೆ ಹೊಡೆದಾಗ ಸ್ಥಳೀಯರು ಓಡಿ ಬರುವುದನ್ನು ಕಂಡು ಆರೋಪಿಗಳು ಪರಾರಿಯಾಗಿದ್ದರು. ಈ ಬಗ್ಗೆ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಹಲ್ಲೆ ಹಾಗೂ ಕೊಲೆಯತ್ನ ಪ್ರಕರಣ ದಾಖಲಾಗಿತ್ತು. ಆದರೆ ಸಾಕ್ಷ್ಯಾಧಾರದ ಕೊರತೆಯಿಂದ ಕೊಲೆಯತ್ನ ಪ್ರಕರಣ ಖುಲಾಸೆಯಾಗಿದೆ.
ಉಳ್ಳಾಲ ಠಾಣೆಯ ಅಂದಿನ ಎಸ್ಸೈ ರಾಜೇಂದ್ರ ಪ್ರಕರಣದ ತನಿಖೆ ನಡೆಸಿ ನ್ಯಾಯಾಲಯಕ್ಕೆ ಆರೋಪ ಪಟ್ಟಿ ಸಲ್ಲಿಸಿದ್ದರು. ಸರಕಾರದ ಪರವಾಗಿ ಪಬ್ಲಿಕ್ ಪ್ರಾಸಿಕ್ಯೂಟರ್ ಕುದ್ರಿಯ ಪುಷ್ಪರಾಜ ಅಡ್ಯಂತಾಯ ವಾದಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News