ಉಳ್ಳಾಲ ಬ್ಲಾಕ್ ಕಾಂಗ್ರೆಸ್ ಕಚೇರಿ ಉದ್ಘಾಟನೆ
ಉಳ್ಳಾಲ, ಮೇ 26: ಈ ಬಾರಿಯ ಚುನಾವಣೆಯಲ್ಲಿ ಜಿಲ್ಲೆಯಲ್ಲಿ ಬೀಸಿದ ಸುಂಟರಗಾಳಿಯಲ್ಲಿ ಮಂಗಳೂರು ಕ್ಷೇತ್ರ ಮಾತ್ರ ಉಳಿದಿದೆ. ಇದಕ್ಕೆ ಮುಖ್ಯ ಕಾರಣ ಕಾಂಗ್ರೆಸ್ ಕಾರ್ಯಕರ್ತರ ಪ್ರಾಮಾಣಿಕ ಪ್ರಯತ್ನ ಮತ್ತು ಕ್ಷೇತ್ರದ ಎಲ್ಲಾ ಜಾತಿ ವರ್ಗದ ಜನರ ಬೆಂಬಲ ಕಾರಣವಾಗಿದ್ದು 20 ಸಾವಿರ ಅಧಿಕ ಮತಗಳಿಂದ ವಿಜಯಿಯಾಗಲು ಸಾದ್ಯವಾಗಿದೆ. ಅಭಿವೃದ್ಧಿಯೇ ಬೇರೆ, ಚುನಾವಣೆಯೇ ಬೇರೆಯಾಗಿದ್ದು, ಅಭಿವೃದ್ಧಿ ಮಾಡಿದ್ಧೇವೆ ಚುನಾವಣೆಯಲ್ಲಿ ಜನರು ಕೈ ಹಿಡಿಯುತ್ತಾರೆ ಎಂದು ಚುನಾವಣೆಯನ್ನು ಹಗುರವಾಗಿ ತೆಗೆದುಕೊಂಡರೆ ಏನಾಗುತ್ತದೆ ಎನ್ನುವುದು ಈ ಬಾರಿಯ ಚುನಾವಣೆ ಪಾಠವಾಗಿದ್ದು, ಮುಂದಿನ ಚುನಾವಣೆಗೆ ಈಗಿಂದಲೇ ಕಾರ್ಯಕರ್ತರು ಬೂತ್ ಮಟ್ಟದಿಂದಲೇ ಪಕ್ಷವನ್ನು ಬಲಗೊಳಿಸಲು ಪ್ರಯತ್ನಿಸಬೇಕು ಎಂದು ಮಂಗಳೂರು ವಿಧಾನಸಭಾ ಕ್ಷೇತ್ರದ ಶಾಸಕ ಯು.ಟಿ. ಖಾದರ್ ಅಭಿಪ್ರಾಯಿಸಿದ್ದಾರೆ.
ಅವರು ತೊಕ್ಕೊಟ್ಟು ಜಂಕ್ಷನ್ ಬಳಿ ಉಳ್ಳಾಲ ಬ್ಲಾಕ್ ಕಾಂಗ್ರೆಸ್ ಕಚೇರಿ ಉದ್ಘಾಟಿಸಿದ ಬಳಿಕ ನಡೆದ ಕಾರ್ಯಕರ್ತರ ಸಭೆಯನ್ನು ಉದ್ಧೇಶಿಸಿ ಮಾತನಾಡಿದರು.
ಅಧಿಕಾರದಲ್ಲಿದ್ದಾಗ ನನ್ನಿಂದ ಸಹಾಯ ಪಡೆದವರು ಚುನಾವಣೆ ಸಂದರ್ಭದಲ್ಲಿ ತೊಂದರೆ ನೀಡಿದ್ದಾರೆ. ಯಾರು ಪ್ರಯೋಜನ ಪಡೆದಿಲ್ಲ ಅವರು ಪಕ್ಷಕ್ಕಾಗಿ ದುಡಿದಿದ್ದಾರೆ. ಈ ನಿಟ್ಟಿನಲ್ಲಿ ಅಭಿವೃದ್ಧಿಗೆ ಮತ್ತು ಚುನಾವಣೆಗೆ ತಳುಕು ಹಾಕುವುದು ಸರಿಯಲ್ಲ. ಈಗಿನಿಂದಲೇ ಮುಂದೆ ಬರುವ ವಿಧಾನಪರಿಷತ್, ನಗರಸಭೆ, ಲೋಕಸಭೆ ಚುನಾವಣೆಗೆ ಪಕ್ಷವನ್ನು ಸಂಘಟಿಸುವ ನಿಟ್ಟಿನಲ್ಲಿ ಕಾರ್ಯ ಆರಂಭಿಸಬೇಕಾಗಿದ್ದು, ದಿನದ 24 ಗಂಟೆ ಜನರೊಂದಿಗೆ ಬೆರೆತು ಅವರ ಕಷ್ಟಗಳಿಗೆ ಸ್ಪಂದಿಸಿದರೆ ಖಂಡಿತವಾಗಿಯೂ ನಮ್ಮನ್ನು ನೆನಪಿನಲ್ಲಿ ಇಡುವ ಕಾರ್ಯ ಮಾಡುತ್ತಾರೆ ಎಂದರು.
ಪ್ರತಿಪಕ್ಷಕ್ಕೆ ಸ್ಪಷ್ಟ ಸಂದೇಶ : ಕೊಡಗು, ಉಡುಪಿ, ಉತ್ತರ ಕನ್ನಡದಲ್ಲಿ ಕಾಂಗ್ರೆಸ್‌ಗೆ ಸೋಲಾಗಿರಬಹುದು. ಜಿಲ್ಲೆಯಲ್ಲಿ ಮಂಗಳೂರು ಕ್ಷೇತ್ರವನ್ನು ಮುಟ್ಟಲು ಸಾಧ್ಯವಾಗಿಲ್ಲ. ಈ ನಿಟ್ಟಿನಲ್ಲಿ ಮುಂದಿನ ದಿನಗಳಲ್ಲಿ ಈ ಕ್ಷೇತ್ರದಲ್ಲಿ ಪ್ರತಿಪಕ್ಷಕ್ಕೆ ಕಾಂಗ್ರೆಸ್ಸನ್ನು ಅಲುಗಾಡಿಸಲು ಸಾಧ್ಯವಿಲ್ಲ ಎನ್ನುವುದು ಸ್ಪಷ್ಟ ಸಂದೇಶ ನೀಡಿದಂತಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಕೆಪಿಸಿಸಿ ಚುನಾವಣಾ ಸಂಚಾಲಕ ಈಶ್ವರ್ ಉಳ್ಳಾಲ್ ಮಾತನಾಡಿ ಕೇಂದ್ರದಲ್ಲಿ ಬಂದಂತಹ ಬಿಜೆಪಿ ಸರಕಾರದಂತಹ ಕೆಟ್ಟ ಸರಕಾರ ಈ ಹಿಂದೆ ಬಂದಿಲ್ಲ. ಇನ್ನು ಮುಂದಕ್ಕೂ ಬರಲು ಸಾಧ್ಯವಿಲ್ಲ. ಕಳೆದ ನಾಲ್ಕು ವರ್ಷದ ಅವಧಿಯಲ್ಲಿ ಸಾಧನೆ ಶೂನ್ಯ. ಉದ್ಯೋಗ ನೀಡುತ್ತವೆ ಎಂದು ಉದ್ಯೋಗ ನೀಡಿಲ್ಲ , ಮನೆ ನೀಡುತ್ತೇವೆ ಎಂದು ಮನೆ ನೀಡಿಲ್ಲ. ನೋಟ್ ಬ್ಯಾನ್ ಮಾಡಿ ಬಡವರ ಕೆಲಸವನ್ನು ಕಸಿದುಕೊಂಡಿದ್ದಾರೆ ಎಂದ ಅವರು ಸಿದ್ದರಾಮಯ್ಯ ನೇತೃತ್ವದ ಸರಕಾರ ಅಭಿವೃದ್ಧಿ ಮಾಡಿದರೂ ಚುನಾವಣೆಯಲ್ಲಿ ಜನರ ದಾರಿ ತಪ್ಪಿಸುವ ಕಾರ್ಯದಲ್ಲಿ ಬಿಜೆಪಿ ಯಶಸ್ವಿಯಾಗಿದ್ದು, ಮುಂದಿನ ದಿನಗಳಲ್ಲಿ ಪಕ್ಷವನ್ನು ಇನ್ನಷ್ಟು ಬಲಿಷ್ಠಗೊಳಿಸುವ ಕಾರ್ಯದಲ್ಲಿ ನಾಯಕ ರೊಂದಿಗೆ ಕಾರ್ಯಕರ್ತರು ತೊಡಗಿಸಿಕೊಂಡು ಬೂತ್ ಮಟ್ಟದಲ್ಲಿ ಸಂಘಟನೆಯನ್ನು ಬಲಗೊಳಿಸಬೇಕು ಎಂದರು.
ಉಳ್ಳಾಲ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಂತೋಷ್ ಕುಮಾರ್ ಶೆಟ್ಟಿ ಅಸೈಗೋಳಿ, ಮುಡಿಪು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪ್ರಶಾಂತ್ ಕಾಜವ, ಮಂಗಳೂರು ತಾಲೂಕು ಪಂಚಾಯತ್ ಅಧ್ಯಕ್ಷ ಮಹಮ್ಮದ್ ಮೋನು, ಉಳ್ಳಾಲ ನಗರಸಭಾ ಅಧ್ಯಕ್ಷ ಹುಸೈನ್ ಕುಂಇಮೋನು, ಉಪಾಧ್ಯಕ್ಷೆ ಚಿತ್ರಾ ಚಂದ್ರಕಾಂತ್, ಜಿಲ್ಲಾ ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಎನ್.ಎಸ್. ಕರೀಂ, ಉಳ್ಳಾಲ ನಗರ ಕಾಂಗ್ರೆಸ್ ಅಧ್ಯಕ್ಷ ಬಾಝಿಲ್ ಡಿ.ಸೋಜ, ಉಳ್ಳಾಲ ಬ್ಲಾಕ್ ಕಾಂಗ್ರೆಸ್ ಉಪಾಧ್ಯಕ್ಷರಾದ ಸುರೇಶ್ ಭಟ್ನಗರ, ಮಹಮ್ಮದ್ ಮುಸ್ತಾಫ ಹರೇಕಳ, ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಆಲ್ವಿನ್ ಡಿ.ಸೋಜ, ತಾ. ಪಂ. ಸದಸ್ಯೆ ಪದ್ಮಾವತಿ ಪೂಜಾರಿ,ಸುರೇಖಾ ಚಂದ್ರಹಾಸ್ , ವಿಲ್ಮಾ ವಿಲ್‌ಪ್ರೆಡ್ ಡಿ.ಸೋಜ, ಮುಖಂಡರಾದ ದಿನೇಶ್ ರೈ ಉಳ್ಳಾಲಗುತ್ತು, ಪಿ.ಎಂ.ಕುಂಇ, ಉಮೇಶ್ ಗಾಂಭೀರ್, ಉಮ್ಮರ್ ಫಜೀರು, ಜಲೀಲ್ ಮೋಂಟುಗೋಳಿ. ರಝೀಯಾ ಇಬ್ರಾಹಿಂ, ಸುಕುಮಾರ್, ಶೌಕತ್ ಆಲಿ, ನಝರ್ ಷಾ ಪಟ್ಟೋರಿ ಮತ್ತಿತರರು ಉಪಸ್ಥಿತರಿದ್ದರು.