'ರೈತರ ಸಾಲ ಮನ್ನಾ' ಉನ್ನತ ಮಟ್ಟದ ತನಿಖೆಗೆ ಆಗ್ರಹ: ಬಳಕೆದಾರರ ಹಿತರಕ್ಷಣಾ ವೇದಿಕೆಯಿಂದ ಸಿಎಂಗೆ ಮನವಿ
ಪುತ್ತೂರು, ಮೇ 26: ಚುನಾವಣಾ ಪ್ರಣಾಳಿಕೆಯಲ್ಲಿ ಘೋಷಣೆ ಮಾಡಿದಂತೆ ರೈತರ ಸಾಲ ಮನ್ನಾ ಮಾಡುವ ವಿಚಾರ ಅತ್ಯಂತ ಯಶಸ್ವಿ ಯೋಜನೆಯಾಗಿದ್ದರೂ, ಸರ್ಕಾರದ ಹಣ ಪೋಲಾಗುವುದನ್ನು ತಡೆಯಲು ಈ ವಿಚಾರದಲ್ಲಿ ಉನ್ನತ ಮಟ್ಟದ ತನಿಖೆ ನಡೆಸಿದ ಬಳಿಕವೇ ಕ್ರಮಕೈಗೊಳ್ಳಬೇಕು. ಇತರ ಬ್ಯಾಂಕ್‌ಗಳಲ್ಲಿ ಠೇವಣಿ ಇಟ್ಟಿರುವ ರೈತನ ಸಾಲ ಮನ್ನಾ ಮಾಡದೆ ನಿಜವಾದ ಸಂಕಷ್ಟದಲ್ಲಿರುವ ರೈತರ ಸಾಲವನ್ನು ಮಾತ್ರ ಮನ್ನಾ ಮಾಡಬೇಕು ಎಂದು ಆಗ್ರಹಿಸಿ ಪುತ್ತೂರಿನ ಸರ್ವೆ ಬಳಕೆದಾರರ ಹಿತರಕ್ಷಣಾ ವೇದಿಕೆಯ ಅಧ್ಯಕ್ಷ ಚಾಲಚಂದ್ರ ಸೊರಕೆ ಅವರು ಮುಖ್ಯಮಂತ್ರಿ ಎಚ್.ಡಿ.ಕುಮಾರ ಸ್ವಾಮಿ ಅವರಿಗೆ ಲಿಖಿತ ಮನವಿ ಸಲ್ಲಿಸಿದ್ದಾರೆ.
ಸಂಕಷ್ಟದಲ್ಲಿರುವ ರೈತರ ಸಾಲ ಮನ್ನಾ ಮಾಡುವುದು ಅತ್ಯಂತ ಸೂಕ್ತವಾದರೂ ಕೆಲವೊಂದು ಸಂದರ್ಭದಲ್ಲಿ ಜನರ ತೆರಿಗೆಯ ಸರ್ಕಾರದ ಹಣ ವ್ಯರ್ಥವಾಗಿ ಪೋಲಾಗುವ ಸಂದರ್ಭಗಳಿರುತ್ತದೆ. ಕೆಲವೊಂದು ಕಡೆಗಳಲ್ಲಿ ಸಹಕಾರ ಸಂಘಗಳ ಮತ್ತು ಬ್ಯಾಂಕ್‌ಗಳ ಮೂಲಕ ಬಡ್ಡಿರಹಿತವಾಗಿ ಮತ್ತು ಸರಳ ಬಡ್ಡಿಯಲ್ಲಿ ಸಿಗುವ ಸಾಲ ಸೌಲಭ್ಯಗಳನ್ನು ಪಡೆದವರು, ಆ ಹಣವನ್ನು ಹೆಚ್ಚಿನ ಬಡ್ಡಿ ಪಡೆಯುವ ಉದ್ದೇಶದಿಂದ ಇತರ ಬ್ಯಾಂಕ್‌ಗಳಲ್ಲಿ ಠೇವಣಿ (ಡಿಪಾಸಿಟ್) ಇರಿಸಿರುವ ಇಲ್ಲವೇ ಅನ್ಯ ಕಾರ್ಯಗಳಿಗೆ ಬಳಸಿರುವ ಸಂಭವವಿದೆ ಎಂದು ಅವರು ಮನವಿಯಲ್ಲಿ ತಿಳಿಸಿದ್ದಾರೆ.
ಸಾಲ ಮನ್ನಾ ಸವಲತ್ತು ನಿಜವಾಗಿ ಸಂಕಷ್ಟದಲ್ಲಿರುವ ರೈತರಿಗೆ ಸಿಗಬೇಕು. ಆದ್ದರಿಂದ ಸಾಲಮನ್ನಾ ಮಾಡುವ ಮೊದಲು ಸರ್ಕಾರದ ಹಣ ವ್ಯರ್ಥವಾಗಿ ಪೋಲಾಗುವುದನ್ನು ತಡೆಯಲು ಸೂಕ್ತ ತನಿಖೆ ನಡೆಸಬೇಕು.ಇತರ ಬ್ಯಾಂಕ್‌ಗಳಲ್ಲಿ ಠೇವಣಿ ಇಟ್ಟಿರುವ ರೈತರ ಸಾಲ ಮನ್ನಾ ಮಾಡದೆ, ಸಕಾಲಕ್ಕೆ ಮಳೆ ಬಾರದೆ ಇಲ್ಲವೇ ಇನ್ನಿತರ ಪ್ರಾಕೃತಿಕ ವಿಕೋಪಗಳಿಂದಾಗಿ ಬೆಳೆ ನಾಶಗೊಂಡು ಸಂಕಷ್ಟದಲ್ಲಿರುವ ರೈತರ ಸಾಲವನ್ನು ಮಾತ್ರ ಮನ್ನಾ ಮಾಡಬೇಕು ಎಂದು ಅವರು ಆಗ್ರಹಿಸಿದ್ದಾರೆ.
ರೈತರ ಕೃಷಿಗೆ ನೀಡಿದ ಉಚಿತ ವಿದ್ಯುತ್ ಹೆಚ್ಚಿನ ಕಡೆಗಳಲ್ಲಿ ದುರ್ಬಳಕೆಯಾಗುತ್ತಿದೆ. ಕೆಲವೊಂದು ಕಡೆಗಳಲ್ಲಿ ದಿನದ 24 ಗಂಟೆಗಳ ಕಾಲವೂ ಪಂಪ್ ಚಾಲು ಮಾಡುವುದರಿಂದ ವಿದ್ಯುತ್ ವ್ಯರ್ಥವಾಗಿ ಪೋಲಾಗುತ್ತಿದೆ ಮಾತ್ರವಲ್ಲದೆ ನೀರು ಬರಿದಾಗುತ್ತಿದೆ, ಅಂತರ್ಜಲ ಕುಸಿಯುತ್ತಿದೆ. ನೀರಿನ ವ್ಯರ್ಥ ಬಳಕೆಯನ್ನು ತಪ್ಪಿಸುವ ಹಾಗೂ ವಿದ್ಯುತ್ ಪೋಲಾಗುವುದನ್ನು ತಡೆಯುವ ನಿಟ್ಟಿನಲ್ಲಿ ಸೂಕ್ತಕ್ರಮಕೈಗೊಳ್ಳಬೇಕು. ರೈತರ ಜಮೀನಿಗೆ ಅನುಗುಣವಾಗಿ ನಿರ್ಧಿಷ್ಟ ಪ್ರಮಾಣದಲ್ಲಿ ಉಚಿತ ವಿದ್ಯುತ್ ನೀಡಬೇಕು. ಹೆಚ್ಚುವರಿ ಬಳಕೆಯ ವಿದ್ಯುತ್‌ಗೆ ಯುನಿಟ್‌ಗೆ ದರ ನಿಗದಿಗೊಳಿಸುವ ಮೂಲಕ ಉಚಿತ ವಿದ್ಯುತ್ ವ್ಯವಸ್ಥೆಯಲ್ಲಿ ಸರ್ಕಾರದ ಹಣ ಪೋಲಾಗುವುದನ್ನು ತಡೆಯಬೇಕು ಎಂದು ಬಾಲಚಂದ್ರ ಸೊರಕೆ ಅವರು ಮನವಿ ಮೂಲಕ ಆಗ್ರಹಿಸಿದ್ದಾರೆ.