ಬಸ್ಸಿನಲ್ಲೇ ಹೃದಯಾಘಾತಕ್ಕೀಡಾಗಿ ಪ್ರಯಾಣಿಕ ಮೃತ್ಯು
Update: 2018-05-26 21:35 IST
ಮಂಗಳೂರು, ಮೇ 26: ಬೆಂಗಳೂರಿನಿಂದ ಮಂಗಳೂರಿಗೆ ಚಲಿಸುತ್ತಿದ್ದ ಸರಕಾರಿ ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ ಅಪರಿಚಿತ ವ್ಯಕ್ತಿಯೊಬ್ಬ ಹೃದಯಾಘಾತಕ್ಕೀಡಾಗಿ ಮೃತಪಟ್ಟ ಘಟನೆ ಶನಿವಾರ ಬೆಳಗ್ಗೆ ಬೆಳಕಿಗೆ ಬಂದಿದೆ.
ಶುಕ್ರವಾರ ರಾತ್ರಿ ಬೆಂಗಳೂರಿನಿಂದ ಮಂಗಳೂರಿಗೆ ಬರುತ್ತಿದ್ದ ಬಸ್‌ನಲ್ಲಿ ಈ ಅಪರಿಚಿತ ವ್ಯಕ್ತಿ ಸಂಚರಿಸುತ್ತಿದ್ದ ಎನ್ನಲಾಗಿದೆ. ಸೀಟಿನಲ್ಲಿ ಮಲಗಿದ್ದ ಈತ ನಿದ್ದೆ ಹೋಗಿರಬಹುದೆಂದು ಎಲ್ಲರೂ ಭಾವಿಸಿದ್ದರು. ಆದರೆ ಬಸ್ ಬಿಜೈ ಕೆಎಸ್ಸಾರ್ಟಿಸಿ ನಿಲ್ದಾಣಕ್ಕೆ ಬಂದ ನಂತರವೂ ಎಲ್ಲ ಪ್ರಯಾಣಿಕರು ಇಳಿದರೂ ಕೂಡ ಈತ ಮಾತ್ರ ಮಲಗಿದ ಸ್ಥಿತಿಯಲ್ಲಿದ್ದ. ಇದನ್ನು ಕಂಡು ಬಸ್ಸಿನ ಸಿಬ್ಬಂದಿ ಎಬ್ಬಿಸಲು ಹೋದಾಗ ಯಾವುದೇ ಚಲನೆ ಕಂಡು ಬರಲಿಲ್ಲ. ಮತ್ತಷ್ಟು ತಪಾಸಣೆ ನಡೆಸಿದಾಗ ಮೃತಪಟ್ಟಿರುವುದು ಕಂಡು ಬಂತು. ಈತ ಹೃದಯಾಘಾತಕ್ಕೀಡಾಗಿ ಮೃತಪಟ್ಟಿರಬೇಕು ಎಂದು ಶಂಕಿಸಲಾಗಿದೆ.
ಅಪರಿಚಿತ ವ್ಯಕ್ತಿಯಾದ ಕಾರಣ ಈತನ ವಿಳಾಸ ಪತ್ತೆಗೆ ಪ್ರಯತ್ನಿಸಲಾಗುತ್ತಿದೆ. ಬರ್ಕೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.