ಭಾರತ ಕ್ರಿಕೆಟ್ ತಂಡ ಆಟವಾಡಿದ್ದ ಮೂರು ಪಂದ್ಯಗಳು ಫಿಕ್ಸ್: ಆರೋಪ

Update: 2018-05-27 08:57 GMT

ಹೊಸದಿಲ್ಲಿ, ಮೇ 27: ಕಳೆದ ಎರಡು ವರ್ಷಗಳಲ್ಲಿ ಭಾರತ ತಂಡವಿದ್ದ ಮೂರು ಕ್ರಿಕೆಟ್ ಟೆಸ್ಟ್ ಪಂದ್ಯಗಳಲ್ಲಿ ಮ್ಯಾಚ್‍ಫಿಕ್ಸಿಂಗ್ ನಡೆದಿದೆ ಎಂದು ಕ್ರಿಕೆಟ್ ಭ್ರಷ್ಟಾಚಾರದ ಬಗೆಗಿನ 'ಅಲ್ ಜಝೀರಾ' ತನಿಖಾ ತಂಡ ಸಿದ್ಧಪಡಿಸಿದ ಸಾಕ್ಷ್ಯಚಿತ್ರವೊಂದರಲ್ಲಿ ಪ್ರತಿಪಾದಿಸಲಾಗಿದೆ. ದೋಹಾ ಮೂಲದ ಟಿವಿ ಚಾನಲ್, ಈ ಸಂಬಂಧ ವಿಶೇಷ ದೃಶ್ಯಾವಳಿಯ ತುಣುಕನ್ನು 'ಹಿಂದೂಸ್ತಾನ್ ಟೈಮ್ಸ್' ಜತೆಗೆ ಹಂಚಿಕೊಂಡಿದೆ.

ಮುಂಬೈ ಮೂಲದ ಮಾಜಿ ಪ್ರಥಮದರ್ಜೆ ಕ್ರಿಕೆಟರ್, ಯುಎಇನಲ್ಲಿದ್ದ ಭಾರತದ ಜಾಹೀರಾತು ಎಕ್ಸಿಕ್ಯೂಟಿವ್ ಹಾಗೂ ಡಿ-ಕಂಪನಿ ಸದಸ್ಯರು ಕ್ರಿಕೆಟ್‍ ಸಂಸ್ಥೆಗಳ ಜತೆ ಮತ್ತು ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ) ಜತೆಗೆ ಇರುವ ತಮ್ಮ ಸಂಪರ್ಕವನ್ನು ಬಳಸಿಕೊಂಡು, ಪಂದ್ಯದ ಫಲಿತಾಂಶವನ್ನು ನಿರ್ಧರಿಸಿದ್ದಾರೆ ಎಂದು ಚಾನಲ್ ಪ್ರತಿಪಾದಿಸಿದೆ.

ಮ್ಯಾಚ್‍ಫಿಕ್ಸಿಂಗ್ ಮಾಡುವ ವ್ಯಕ್ತಿಗಳು ಹೇಗೆ ಕ್ಯುರೇಟರ್ ಗಳು, ಹಾಲಿ ಹಾಗೂ ಮಾಜಿ ಕ್ರಿಕೆಟರ್ ಗಳನ್ನು ಸೇರಿಸಿಕೊಂಡು ಹೇಗೆ ನಿರ್ದಿಷ್ಟ ಸೆಷನ್ ಅಥವಾ ಇಡೀ ಫಲಿತಾಂಶವನ್ನು ಹೇಗೆ ಫಿಕ್ಸ್ ಮಾಡುತ್ತಾರೆ ಎನ್ನುವುದು ಪತ್ರಕರ್ತ ಡೇವಿಡ್ ಹ್ಯಾರಿಸನ್ ನಡೆಸಿದ ಕುಟುಕು ಕಾರ್ಯಾಚರಣೆಯಲ್ಲಿ ಸೆರೆಯಾಗಿದೆ ಎಂದು ಆರೋಪಿಸಲಾಗಿದೆ.

ಪಾಕಿಸ್ತಾನದ ಅತ್ಯಂತ ಯುವ ಕ್ರಿಕೆಟಿಗ ಹಸನ್‍ ರಾಝಾ ಮತ್ತು ಶ್ರೀಲಂಕಾದ ಮೂವರು ಅಂತಾರಾರಾಷ್ಟ್ರೀಯ ಪಟುಗಳಾದ ದಿಲ್ಹಾರಾ ಲೋಕುಹೆತ್ತಿಗೆ, ಜೀವಂತ ಕುಲತುಂಗ ಮತ್ತು ತರಿಂದು ಮೆಂಡಿಸ್ ಅವರ ಮೇಲೆ ಸಂಶಯದ ದೃಷ್ಟಿ ಇದ್ದು, ಸ್ಪಾಟ್ ಫಿಕ್ಸಿಂಗ್‍ನಲ್ಲಿ ಪಾಲ್ಗೊಂಡಿದ್ದಾರೆ ಎಂದು ಆಪಾದಿಸಲಾಗಿದೆ. ಇಲ್ಲವೇ ಪಿಚ್ ಅನ್ನು ಹೇಗೆ ಬೇಕೋ ಹಾಗೆ ಸಿದ್ಧಪಡಿಸುವಂತೆ ಪ್ರಭಾವ ಬೀರಿ, ನಿರ್ದಿಷ್ಟ ದಿನದ ಒಳಗಾಗಿ ಫಲಿತಾಂಶ ಪಡೆಯುವಂತೆ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.

ಗಾಲೆ ಸ್ಟೇಡಿಯಂನ ಕ್ಯುರೇಟರ್ ತರಂಗ ಇಂಡಿಕಾ ಕೂಡಾ ಪಿಚ್‍ ಡಾಕ್ಟರಿಂಗ್ ಬಗ್ಗೆ ಒಪ್ಪಿಕೊಂಡಿದ್ದಾರೆ ಎನ್ನಲಾಗಿದೆ. ಇಲ್ಲಿ 2016ರ ಆಗಸ್ಟ್ ನಲ್ಲಿ ಆಸ್ಟ್ರೇಲಿಯಾ ಎರಡೂವರೆ ದಿನಗಳಲ್ಲಿ ಟೆಸ್ಟ್ ಪಂದ್ಯ ಸೋತಿತ್ತು ಮತ್ತು ಭಾರತ 2017ರ ಜುಲೈನಲ್ಲಿ ಮೊದಲ ಇನಿಂಗ್ಸ್ ನಲ್ಲಿ 600 ರನ್ ಪೇರಿಸಿತ್ತು. ಈ ಎರಡೂ ಘಟನೆಗಳಲ್ಲಿ ಸ್ಪಾಟ್ ಫಿಕ್ಸಿಂಗ್ ನಡೆದಿದೆ ಎಂದು ಸಾಕ್ಷ್ಯಚಿತ್ರ ದೂರಿದೆ.

2016ರ ಡಿಸೆಂಬರ್ 16ರಿಂದ 20ರವರೆಗೆ ನಡೆದ ಭಾರತ ಹಾಗೂ ಇಂಗ್ಲೆಂಡ್ ನಡುವಿನ ಪಂದ್ಯ ಹಾಗೂ 2017ರ ಮಾರ್ಚ್ 16ರಿಂದ 20ರವರೆಗೆ ರಾಂಚಿಯಲ್ಲಿ ನಡೆದ ಭಾರತ- ಆಸ್ಟ್ರೇಲಿಯಾ ಪಂದ್ಯ, ಗಾಲೆಯಲ್ಲಿ 2017ರ ಜುಲೈ 26-29ರವರೆಗೆ ನಡೆದ ಭಾರತ- ಶ್ರೀಲಂಕಾ ಪಂದ್ಯಗಳ ಮೇಲೂ ಬುಕ್ಕಿಗಳು ಪ್ರಭಾವ ಬೀರಿದ್ದಾರೆ ಎನ್ನಲಾಗಿದೆ.

ಕ್ರಿಕೆಟ್ಸ್ ಮ್ಯಾಚ್ ಫಿಕ್ಸರ್ಸ್ ಎಂಬ ಶೀರ್ಷಿಕೆಯ ಸಾಕ್ಷ್ಯಚಿತ್ರವನ್ನು ಆನ್‍ಲೈನ್ ಮೂಲಕ ರವಿವಾರ ಮಧ್ಯಾಹ್ನ 3:30ಕ್ಕೆ ವೀಕ್ಷಿಸಬಹುದಾಗಿದೆ. ಆದರೆ ಯಾವ ಭಾರತೀಯ ಆಟಗಾರರನ್ನೂ ಇದರಲ್ಲಿ ಹೆಸರಿಸಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News