ದ.ಕ. ಜಿಲ್ಲಾ ಕಾಂಗ್ರೆಸ್‌ನಿಂದ ನೆಹರೂ ಪುಣ್ಯತಿಥಿ ಆಚರಣೆ

Update: 2018-05-27 09:05 GMT

ಮಂಗಳೂರು, ಮೇ 27: ದೇಶದ ಪ್ರಥಮ ಪ್ರಧಾನಿ ಪಂಡಿತ್ ಜವಾಹರ್‌ಲಾಲ್ ನೆಹರೂ ಅವರ ಪುಣ್ಯತಿಥಿಯನ್ನು ದ.ಕ.ಜಿಲ್ಲಾ ಕಾಂಗ್ರೆಸ್ ವತಿಯಿಂದ ಪಕ್ಷದ ಜಿಲ್ಲಾ ಕಚೇರಿಯಲ್ಲಿ ರವಿವಾರ ಆಚರಿಸಲಾಯಿತು.

ಈ ಸಂದರ್ಭ ಮುಖ್ಯ ಅತಿಥಿಯಾಗಿ ಮಾತನಾಡಿದ ದ.ಕ. ಜಿಲ್ಲಾ ಮಾಜಿ ಉಸ್ತುವಾರಿ ಸಚಿವ ರಮಾನಥ ರೈ, ನೆಹರೂ ಈ ದೇಶಕ್ಕೆ ನೀಡಿದ ಕೊಡುಗೆಯು ಅಪಾರವಾದುದು. ಕೃಷಿ, ಕೈಗಾರಿಕಾ ಕ್ಷೇತ್ರದಲ್ಲಿ ಕೈಗೊಂಡ ಕ್ರಾಂತಿಕಾರಕ ಅಭಿವೃದ್ಧಿ ಹಾಗೂ ಅಲಿಪ್ತ ನೀತಿಯಿಂದಾಗಿ ಜಗತ್ತು ಭಾರತದತ್ತ ಮುಖ ಮಾಡುವಂತೆ ಮಾಡಿತ್ತು ಎಂದರು.

ನೆಹರೂ, ಇಂದಿರಾ ಗಾಂಧಿಯವರಿಂದ ಆರಂಭಿಸಿ ಮನಮೋಹನ್ ಸಿಂಗ್‌ವರೆಗೆ ಕಾಂಗ್ರೆಸ್ ಸರಕಾರಗಳು ನೀಡಿದ ಜನಪರ ಆಡಳಿತದಿಂದಾಗಿ ಭಾರತವು ಇಂದು ಅಭಿವೃದ್ಧಿ ಶೀಲ ರಾಷ್ಟ್ರಗಳ ಪೈಪೋಟಿಯಲ್ಲಿ ಮುಂಚೂಣಿಯಲ್ಲಿದೆ. ಇದೀಗ ಮತಿಯವಾದಿಗಳ ಸರಕಾರದಿಂದಾಗಿ ಸಮಾಜ ಭಾಜಕ ಶಕ್ತಿಗಳು ಬಲಿಷ್ಠಗೊಳ್ಳುತ್ತಿರುವುದು ದೇಶದ ಅಭಿವೃದ್ಧಿಗೆ ಮಾರಕವಾಗಿದೆ. ಈ ನಿಟ್ಟಿನಲ್ಲಿ ನೆಹರೂ ಚಿಂತನೆಗಳು ಮರು ಅನುಷ್ಠಾನಗೊಳ್ಳುವ ಅಗತ್ಯವಿದೆ ಎಂದು ರೈ ಅಭಿಪ್ರಾಯಪಟ್ಟರು.

ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಕೆ. ಹರೀಶ್ ಕುಮಾರ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಪಿ.ವಿ. ಮೋಹನ್, ಮಾಜಿ ರಾಜ್ಯಸಭಾ ಸದಸ್ಯ ಬಿ.ಇಬ್ರಾಹೀಂ, ಮುಡಾ ಮಾಜಿ ಅಧ್ಯಕ್ಷ ಇಬ್ರಾಹಿಂ ಕೋಡಿಜಾಲ್ ಮಾತನಾಡಿದರು.

ಈ ಸಂದರ್ಭ ಪಕ್ಷದ ಮುಖಂಡರಾದ ಯು.ಕೆ.ಮೋನು, ಕೆ.ಕೆ.ಶಾಹುಲ್ ಹಮೀದ್, ಜೆ.ಅಬ್ದುಲ್ ಸಲೀಂ, ಅಬ್ದುಲ್ ರವೂಫ್, ನಾಗವೇಣಿ, ಆಶಾ ಡಿಸಿಲ್ವಾ, ಕವಿತಾ ವಾಸು, ಪ್ರಕಾಶ್ ಬಿ. ಸಾಲ್ಯಾನ್, ಸ್ಟೀಫನ್ ಮರೋಳಿ, ಬಿ.ಎಂ. ಭಾರತಿ, ಪ್ರಭಾಕರ್ ಶ್ರೀಯಾನ್, ದಿನೇಶ್ ಪಿ.ಎಸ್., ಸುರೇಶ್ ಶೆಟ್ಟಿ, ನಝೀರ್ ಬಜಾಲ್, ನೀರಜ್ ಪಾಲ್, ಖಾಲಿದ್ ಉಜಿರೆ, ಶಾಫಿ ಅಹ್ಮದ್, ಪದ್ಮನಾಭ ಅಮೀನ್, ಯೂಸುಫ್ ಉಚ್ಚಿಲ್, ಲುಕ್ಮಾನ್ ಬಂಟ್ವಾಳ, ಪಿಯೂಸ್ ತೊಕ್ಕೂಟ್ಟು ಉಪಸ್ಥಿತರಿದ್ದರು.

ಕಾಂಗ್ರೆಸ್ ಸೇವಾದಳದ ಸಂಚಾಲಕ ಅಶ್ರಫ್ ಕಾರ್ಯಕ್ರಮ ನಿರೂಪಿಸಿದರು. ಸದಾಶಿವ ಉಳ್ಳಾಲ್ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News