ವಿಶಿಷ್ಟ ಚೇತನರನ್ನು ಅನುಕಂಪದ ಬದಲು ಸ್ವಾಭಿಮಾನಿಯಾಗಿ ಕಾಣಿರಿ: ಡಾ.ಮೋಹನ್ ಆಳ್ವ

Update: 2018-05-27 09:37 GMT

ಮಂಗಳೂರು, ಮೇ 27: ವಿಶಿಷ್ಟಚೇತನರನ್ನು ಯಾರೂ ಅನುಕಂಪದಿಂದ ನೋಡುವ ಅಗತ್ಯವಿಲ್ಲ. ಅವರ ಬಗ್ಗೆ ಭಾವನಾತ್ಮಕವಾಗಿ ಮಾತುಗಳನ್ನಾಡುವ ಅಗತ್ಯವೂ ಇಲ್ಲ. ಅವರನ್ನು ಪ್ರೀತಿಯಿಂದ ಕಾಣಿರಿ, ಅವರ ಸಾಧನೆಗೆ ಬೆಂಬಲ, ಪ್ರೋತ್ಸಾಹ ನೀಡಿ. ಅವರು ಕೂಡಾ ನಮ್ಮಂತೆಯೇ ಸ್ವಾಭಿಮಾನಿಯಾಗಿ ಬಾಳಲು, ಬದುಕಿ ಸಾಧಿಸಲು ಸಹಕರಿಸಿ ಎಂದು ಆಳ್ವಾಸ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಡಾ.ಮೋಹನ್ ಆಳ್ವ ಹೇಳಿದರು.

ನಗರದ ಪುರಭವನದಲ್ಲಿ ದ.ಕ. ಮತ್ತು ಉಡುಪಿ ಜಿಲ್ಲಾ ವಿಶಿಷ್ಟ ಚೇತನರ ಸಂಘದ ವತಿಯಿಂದ ರವಿವಾರ ನಡೆದ ಸಂಘದ 26ನೇ ವಾರ್ಷಿಕ ಸಮಾವೇಶದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಅವರು ಮಾತನಾಡುತ್ತಿದ್ದರು.

ರಾಜ್ಯದಲ್ಲಿ ಸುಮಾರು 13,24,000 ವಿಶಿಷ್ಟ ಚೇತನರು ಇದ್ದಾರೆ. ಅವರೆಲ್ಲರನ್ನೂ ಮುಖ್ಯವಾಹಿನಿಗೆ ತರಬೇಕಿದೆ. ಈ ನಿಟ್ಟಿನಲ್ಲಿ ನಾವು ಏನು ಮಾಡಬಹುದು ಎಂಬುದರ ಕುರಿತು ಚಿಂತಿಸಿ ಕಾರ್ಯಪ್ರವೃತ್ತರಾಗಬೇಕಿದೆ. ವಿಶಿಷ್ಟ ಚೇತನರಿಗೆ ಸರಕಾರ ನೀಡುತ್ತಿರುವ ಸಹಾಯ ಧನವು ಅಲ್ಪವಾಗಿದ್ದು, ಅದನ್ನು ದುಪ್ಪಟ್ಟುಗೊಳಿಸಲು ಎಲ್ಲರೂ ಸರಕಾರದ ಮೇಲೆ ಒತ್ತಡ ಹೇರಬೇಕಿದೆ ಎಂದು ಡಾ. ಮೋಹನ್ ಆಳ್ವ ನುಡಿದರು.

ವಿಶಿಷ್ಟ ಚೇತನರ ಬಾಹ್ಯ ನ್ಯೂನತೆಗಳನ್ನು ಗಮನಿಸದೆ ಸಾಧನೆಯಿಂದ ಅವರನ್ನು ಗುರುತಿಸಬೇಕು. ವಿವಿಧ ರೀತಿಯ ನ್ಯೂನತೆಗಳಿದ್ದರೂ ಅದನ್ನು ಮೆಟ್ಟಿನಿಂತು ಜಗತ್ತೇ ಗುರುತಿಸುವಂತಹ ಸಾಧನೆಗಳನ್ನು ಸ್ಟೀಫನ್ ಹಾಕಿಂಗ್ಸ್‌ನಂತಹವರು ಮಾಡಿದ್ದಾರೆ. ಅಂಥ ವಿಶಿಷ್ಟ ಚೇತನರಿಗೆ ಸಾಮಾಜಿಕವಾಗಿ ಮುಂಚೂಣಿಗೆ ಬರಲು ಸಹಕಾರ ನೀಡಬೇಕು ಎಂದು ಆಳ್ವ ಕರೆ ನೀಡಿದರು.

ಶ್ರೀಗೋಪಾಲಕೃಷ್ಣ ದೇವಸ್ಥಾನದ ಆಡಳಿತ ಮೊಕ್ತೇಸರ ಕೆ.ಸಿ.ನಾಕ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ನಿಟ್ಟೆ ವಿಶ್ವವಿದ್ಯಾನಿಲಯದ ಸಹ ಕುಲಪತಿ ಡಾ.ಎಂ.ಶಾಂತರಾಮ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಸಂಸದ ನಳಿನ್ ಕುಮಾರ್ ಕಟೀಲು, ಸೇವಾ ಭಾರತಿಯ ಮ್ಯಾನೇಜಿಂಗ್ ಟ್ರಸ್ಟ್ ವಿನೋದ್ ಶೆಣೈ, ಸಹಕಾರಿ ಯೂನಿಯನ್ ದ.ಕ. ಅಧ್ಯಕ್ಷ ಹರೀಶ್ ಆಚಾರ್, ಅನಂತಾಡಿ ಗ್ರಾಪಂ ಅಧ್ಯಕ್ಷ ಸನತ್ ಕುಮಾರ್ ರೈ, ಶ್ರೀಕರ ಪ್ರಭು, ಸಕ್ಷಮದ ಜಯರಾಮ್ ಬೊಳ್ಳಾಜೆ, ಸಂಘದ ಪ್ರಧಾನ ಕಾರ್ಯದರ್ಶಿ ಟಿ.ಕೊರಗಪ್ಪಗೌಡ, ಉಪಾಧ್ಯಕ್ಷ ನಾಗೇಶ್ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.

ಸಂಘದ ಅಧ್ಯಕ್ಷ ಡಾ.ಮುರಲೀಧರ ನಾಕ್ ಸ್ವಾಗತಿಸಿ ಪ್ರಾಸ್ತಾವಿಕ ಮಾತನಾಡಿದರು. ಈ ಸಂದರ್ಭ ವಿಶಿಷ್ಟ ಚೇತನರ ಮಕ್ಕಳಿಗೆ ವಿದ್ಯಾರ್ಥಿ ವೇತನ, ವೈದ್ಯಕೀಯ ನೆರವು, ಲಕ್ಕಿಡಿಪ್ ಬಹುಮಾನಗಳನ್ನು ವಿತರಿಸಲಾಯಿತು. ಸಾಧಕರನ್ನು ಸನ್ಮಾನಿಸಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News