ವಿಶ್ವದ ಅತ್ಯಂತ ದುಬಾರಿ ಸಾಕುಪ್ರಾಣಿಗಳು ಇಲ್ಲಿವೆ ನೋಡಿ....

Update: 2018-05-27 14:40 GMT

ಹೆಚ್ಚಿನವರು ಪ್ರಾಣಿಗಳನ್ನು ಸಾಕುವುದರಲ್ಲಿ ಸಂತೋಷವನ್ನು ಕಂಡುಕೊಳ್ಳುತ್ತಾರೆ. ಒಂಟಿ ಜೀವನ ಸಾಗಿಸುವವರಿಗಂತೂ ಸಾಕುಪ್ರಾಣಿಗಳೇ ಸಂಗಾತಿಯಾಗುತ್ತವೆ. ಆಕಳು-ಎಮ್ಮೆಗಳಂತಹ ಜಾನುವಾರುಗಳ ಸಾಕಣೆ ಖುಷಿಯ ಜೊತೆಗೆ ಹಣ ಸಂಪಾದನೆಗೂ ದಾರಿಯಾಗಿದೆ. ರೇಸ್ ಕುದುರೆಗಳನ್ನು ಸಾಕಿ ಲಕ್ಷಾಂತರ ರೂ.ಗಳನ್ನು ಸಂಪಾದಿಸುತ್ತಾರೆ. ಆದರೆ ಜನಸಾಮಾನ್ಯರು ನಾಯಿ-ಬೆಕ್ಕುಗಳಂತಹ ಪ್ರಾಣಿಗಳನ್ನು ಸಾಕಿ ಖುಷಿಯನ್ನು ಅನುಭವಿಸುತ್ತಾರೆ. ವಿವಿಧ ಪಕ್ಷಿಗಳು,ಮಂಗ ಇತ್ಯಾದಿಗಳನ್ನೂ ಸಾಕುವರಿದ್ದಾರೆ. ಸಾಕುಪ್ರಾಣಿಗಳ ಶೋಕಿಯಿರುವ ಅದೆಷ್ಟೋ ಜನರು ವಿವಿಧ ತಳಿಗಳ ನಾಯಿ-ಬೆಕ್ಕುಗಳ ಖರೀದಿಗಾಗಿ ಸಾವಿರಾರು ರೂ.ಗಳನ್ನು ವೆಚ್ಚ ಮಾಡುತ್ತಾರೆ. ವಿಶ್ವದಲ್ಲಿಯ ಕೆಲವು ಅತ್ಯಂತ ದುಬಾರಿ ಸಾಕುಪ್ರಾಣಿಗಳ ಕುರಿತು ಮಾಹಿತಿಯಿಲ್ಲಿದೆ.

►ಮಿಸ್ ಮಿಸ್ಸಿ-12,00,000 ಡಾ.

 ಮಿಸ್ಸಿ ಅತ್ಯಧಿಕ ಹಾಲಿನ ಉತ್ಪಾದನೆಗೆ ಹೆಸರಾಗಿರುವ ಹೋಲ್‌ಸ್ಟೀನ್ ತಳಿಗೆ ಸೇರಿದ ದನವಾಗಿದೆ. ಕೆನಡಾದ ಹೂಡಿಕೆದಾರರ ಗುಂಪೊಂದು ಈ ದನವನ್ನು 12,00,000 ಡಾ.ಗಳಿಗೆ ಖರೀದಿಸಿದೆ. ಈ ಗುಂಪಿನ ಮುಖ್ಯ ಉದ್ದೇಶ ಮಿಸ್ಸಿಯಿಂದ ಹಾಲಿನ ಉತ್ಪಾದನೆಗಿಂತ ಸಂತಾನೋತ್ಪತ್ತಿಯಾಗಿದೆ. ಮಿಸ್ಸಿಯ ಮೂಲಕ ಅದೇ ವಂಶವಾಹಿ ಗುಣಗಳುಳ್ಳ ದನಗಳ ಸಂಖ್ಯೆಯನ್ನು ಹೆಚ್ಚಿಸುವ ಮೂಲಕ ಡೇರಿಯಲ್ಲಿ ಒಟ್ಟು ಹಾಲು ಉತ್ಪಾದನೆಯನ್ನು ಅದು ಹೆಚ್ಚಿಸಿಕೊಳ್ಳಬಹುದಾಗಿದೆ.

ಗ್ರೀನ್ ಮಂಕಿ, 1,60,00,000 ಡಾ.

ಈ ರೇಸ್ ಕುದುರೆ 2009ರಲ್ಲಿ ನಡೆದ ಹರಾಜಿನಲ್ಲಿ ಬರೋಬ್ಬರಿ ಒಂದು ಕೋಟಿ ಅರವತ್ತು ಲಕ್ಷ ಡಾಲರ್‌ಗಳಿಗೆ ಮಾರಾಟವಾಗಿತ್ತು. ಗ್ರೀನ್ ಮಂಕಿ ಮೊದಲ ಬಾರಿಗೆ ರೇಸ್‌ನಲ್ಲಿ ಓಡಿದಾಗ ಅದು ಒಂದು ಫರ್ಲಾಂಗ್(1/8 ಮೈಲು) ದೂರವನ್ನು ಕೇವಲ 9.8 ಸೆಕೆಂಡ್‌ಗಳಲ್ಲಿ ಕ್ರಮಿಸಿತ್ತು.

ಟಿಬೆಟನ್ ಮಾಸ್ಟಿಫ್ಸ್, 15,00,000 ಡಾ.

ವಿಶ್ವದ ಅತ್ಯಂತ ದೊಡ್ಡ ನಾಯಿಗಳು ಮೂಲತಃ ಕಾವಲು ನಾಯಿಗಳಾಗಿದ್ದು,ಜಾನುವಾರುಗಳ ರಕ್ಷಣೆಗಾಗಿ ತರಬೇತಿ ಪಡೆದಿರುತ್ತವೆ. ಅಸಲಿ ತಳಿಯ ಟಿಬೆಟನ್ ಮಾಸ್ಟಿಫ್ ನಾಯಿಗಳು ಅಪರೂಪವಾಗಿದ್ದು, 2011ರಲ್ಲಿ ಈ ಕೊನೆಯ ಮಾಸ್ಟಿಫ್ ನಾಯಿ ಹದಿನೈದು ಲಕ್ಷ ಡಾಲರ್‌ಗಳಿಗೆ ಮಾರಾಟವಾಗಿದೆ.

►ಸರ್ ಲ್ಯಾನ್ಸ್‌ಲಾಟ್-1,55,000 ಡಾ.

ಇದು ಲ್ಯಾಬ್ರಡೋರ್ ತಳಿಯ ನಾಯಿ. ಕ್ಲೋನಿಂಗ್ ಪ್ರಕ್ರಿಯೆಯ ಮೂಲಕ ಜನ್ಮ ತಳೆದಿರುವುದರಿಂದ ಈ ದುಬಾರಿ ಬೆಲೆಯನ್ನು ಹೊಂದಿದ್ದು, ಸರ್ ಲ್ಯಾನ್ಸ್‌ಲಾಟ್ ಹೆಸರಿನ ನಾಯಿಯ ತದ್ರೂಪಿಯಾಗಿದೆ. ದುರದೃಷ್ಟವಶಾತ್ ಮೂಲ ಸರ್ ಲ್ಯಾನ್ಸ್‌ಲಾಟ್ ಕ್ಯಾನ್ಸರ್‌ನಿಂದ ಸಾವನ್ನಪ್ಪಿದೆ.

►ಡಿ ಬ್ರಾಝ್ಝಾಸ್ ಮಂಗ - 10,000 ಡಾ.

ಡಿ ಬ್ರಾಝ್ಝಾಸ್ ಮಂಗವು 50,000 ಡಾ.ಬೆಲೆಯುಳ್ಳ ಚಿಂಪಾಂಝಿಗಳ ನಂತರ ಅತ್ಯಂತ ದುಬಾರಿಯಾದ ಕೋತಿಗಳ ವರ್ಗಕ್ಕೆ ಸೇರಿದ ಪ್ರಾಣಿಯಾಗಿದೆ. ಆಫ್ರಿಕನ್ ತಳಿಯ ಈ ಮಂಗಗಳು ತಮ್ಮ ಉದ್ದನೆಯ ಬಿಳಿಗಡ್ಡ ಮತ್ತು ಕಿತ್ತಳೆ ಬಣ್ಣದ ಮುಕುಟ ತುಪ್ಪಳದಿಂದ ಗಮನ ಸೆಳೆಯುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News