×
Ad

​ಭಟ್ಕಳ: ಶಾಲಾ ಪ್ರಾರಂಭೋತ್ಸವಕ್ಕೆ ಸಿದ್ಧರಾಗುವಂತೆ ಮುಖ್ಯ ಶಿಕ್ಷಕರಿಗೆ ಕರೆ

Update: 2018-05-27 17:57 IST

 ಭಟ್ಕಳ, ಮೇ 27: 2018-19ನೇ ಸಾಲಿನ ಶೈಕ್ಷಣಿಕ ವರ್ಷವು ಮೇ 28ರಿಂದ ಆರಂಭಗೊಳ್ಳಲಿದ್ದು, ಶಾಲಾ ಪ್ರಾರಂಭೋತ್ಸವಕ್ಕೆ ವಿದ್ಯಾರ್ಥಿಗಳನ್ನು ಸ್ವಾಗತಿಸಲು ಶಾಲಾ ಮುಖ್ಯೋಪಧ್ಯಾಯರು, ಶಿಕ್ಷಕರು  ಸಿದ್ಧರಾಗಬೇಕೆಂದು ಭಟ್ಕಳ ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಆರ್.ಮುಂಜಿ ಕರೆ ನೀಡಿದರು.

ಅವರು ನ್ಯೂ ಇಂಗ್ಲಿಷ್ ಸ್ಕೂಲ್ ಸಭಾಂಗಣದಲ್ಲಿ ಆಯೋಜಿಸಿದ್ದ ಭಟ್ಕಳ ತಾಲೂಕು ಪ್ರೌಢಶಾಲಾ ಮುಖ್ಯೋಪಧ್ಯಾಯರ ಸಭೆಯನ್ನುದ್ದೇಶಿಸಿ ಮಾತನಾಡಿದರು. ಶಾಲಾ ಪ್ರಾರಂಭೋತ್ಸವನ್ನು ಹೊಸ ಹುರುಪಿನಿಂದ ಮಾಡಬೇಕಿದ್ದು ಆರಂಭದ ಮೊದಲ ದಿನವೇ ವಿದ್ಯಾರ್ಥಿಗಳಲ್ಲಿ ಉತ್ಸಾಹವನ್ನು ತುಂಬಬೇಕು, ಇದಕ್ಕಾಗಿ ಮುಖ್ಯಾಧ್ಯಾಪಕರು ತಮ್ಮ ಹಂತದಲ್ಲಿ ಶಾಲೆಯನ್ನು ತಳಿರು ತೋರಣಗಳಿಂದ ಸುಂದರಗೊಳಿಸಬೇಕು, ಮಕ್ಕಳಿಗೆ ಸಿಹಿಯನ್ನು ಹಂಚುವುದರ ಮೂಲಕ ಸ್ವಾಗತಿಸಬೇಕೆಂದು ಕರೆ ನೀಡಿದರು.

2018ರ ಎಸ್‌ಎಸ್‌ಎಲ್ಸಿ ಫಲಿತಾಂಶವು ಉತ್ತಮವಾಗಿದ್ದು ಈ ನಿಟ್ಟಿನಲ್ಲಿ ಶ್ರಮಿಸಿದ ವಿದ್ಯಾರ್ಥಿಗಳಿಗೆ, ಶಾಲಾ ಮುಖ್ಯಾಧ್ಯಾಪಕರಿಗೆ ಹಾಗೂ ವಿಷಯ ಶಿಕ್ಷಕರಿಗೆ ಅಭಿನಂದಿಸಿದರು. ತಾಲೂಕಿನ 5 ಶಾಲೆಗಳು ಶೇ.100 ಫಲಿತಾಂಶ ದಾಖಲಿಸಿದ್ದು ತಾಲೂಕಿೆ ಹೆಸರನ್ನು ತಂದಿದ್ದಾರೆ ಎಂದರು. ಅಕ್ಷರ ದಾಸೋಹ ಅಧಿಕಾರಿ ಶಾರದಾ ನಾಯ್ಕ ಮಾತನಾಡಿ, ಶಾಲೆಯ ಆರಂಭಕ್ಕೆ ಮೊದಲು ಅಡುಗೆ ಕೋಣಿ ಸ್ವಚ್ಚಗೊಳಿಸಿ ಪಾತ್ರೆಗಳನ್ನು ಶುಚಿಯಾಗಿಟ್ಟುಕೊಂಡು ಮೊದಲ ದಿನ ಬಂದ ಎಲ್ಲ ವಿದ್ಯಾರ್ಥಿಗಳಿಗೆ ತಪ್ಪದೆ ಊಟವನ್ನು ನೀಡಬೇಕು. ಊಟದ ರುಚಿ ದೃಢೀಕರಣ ಮಾಡದೆ ವಿದ್ಯಾರ್ಥಿಗಳಿಗೆ ನೀಡುವಂತಿಲ್ಲ ಎಂದರು.

ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯದ ಶಿಕ್ಷಣ ಸಂಯೋಜಕ ಸುಭ್ರಹ್ಮಣ್ಯ ಪಿ. ಭಟ್ ಸ್ವಾಗತಿಸಿ, ಪ್ರಸ್ತಾವಿಕವಾಗಿ ಮಾತನಾಡಿದರು. ನ್ಯೂ ಇಂಗ್ಲಿಷ್ ಸ್ಕೂಲ್ ಮುಖ್ಯೋಪಧ್ಯಾಯ ಎಸ್.ಎಂ.ನಾಯ್ಕ ವೇದಿಕೆಯಲ್ಲಿ ಉಪಸ್ಥಿತರಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News