×
Ad

ಸಾಲಮನ್ನಾಕ್ಕೆ ಒತ್ತಡ ತರುವುದಕ್ಕಾಗಿ ಬಂದ್‌ಗೆ ಬೆಂಬಲ: ಕರಂದ್ಲಾಜೆ

Update: 2018-05-27 21:17 IST

ಉಡುಪಿ, ಮೇ 27: ರೈತರ ಸಾಲಮನ್ನಾ ಮಾಡುವ ಕುರಿತು ಮುಖ್ಯಮಂತ್ರಿ ಕುಮಾರಸ್ವಾಮಿ ಹುಸಿ ಭರವಸೆ ವಿರುದ್ಧ ರಾಜ್ಯದ ರೈತರು ಬೆಂಗಳೂರು ಹೊರತು ಪಡಿಸಿ ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಸೋಮವಾರ ನಡೆಸುತ್ತಿರುವ ಕರ್ನಾಟಕ ಬಂದ್‌ಗೆ ಬಿಜೆಪಿ ಬೆಂಬಲ ನೀಡುತ್ತಿದೆ ಎಂದು ಉಡುಪಿ ಚಿಕ್ಕ ಮಗಳೂರು ಸಂಸದೆ ಹಾಗೂ ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಶೋಭಾ ಕರಂದ್ಲಾಜೆ ತಿಳಿಸಿದ್ದಾರೆ.

ಉಡುಪಿಯಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅನ್ನ ಕೊಡುವ ರೈತ ಸಂಕಷ್ಟದಲ್ಲಿರುವಾಗ ಕೊಟ್ಟ ಭರವಸೆ ಯನ್ನು ಈಡೇರಿಸುವಂತೆ ಸರಕಾರದ ಮೇಲೆ ಒತ್ತಡ ತರುವುದಕ್ಕಾಗಿ ಈ ಬಂದ್‌ಗೆ ಬೆಂಬಲ ನೀಡ ಲಾಗುತ್ತದೆ. ಎಲ್ಲ ಸಾರ್ವಜನಿಕರು, ಬಸ್, ರಿಕ್ಷಾ ಟ್ಯಾಕ್ಸಿ ಮಾಲಕರು, ಅಂಗಡಿ ಮಾಲಕರು ರೈತರ ಭಾವನೆಗೆ ಸಹಕಾರ ನೀಡಿ ಬಂದ್‌ಗೆ ಬೆಂಬಲ ನೀಡಬೇಕು ಎಂದು ಮನವಿ ಮಾಡಿದರು.

ಮುಖ್ಯಮಂತ್ರಿ ಕುಮಾರಸ್ವಾಮಿ ಕೇವಲ ಚುನಾವಣೆ ಗಿಮಿಕ್‌ಗಾಗಿ ರೈತರ ಸಾಲ ಮನ್ನ ಮಾಡುವ ಭರವಸೆಯನ್ನು ನೀಡಿದ್ದಾರೆ. ರೈತರ ಬಗ್ಗೆ ಇವರಿಗೆ ನಿಜವಾದ ಕಾಳಜಿ ಇಲ್ಲ. ಕುಮಾರಸ್ವಾಮಿ ಅಧಿಕಾರ ಸ್ವೀಕರಿಸಿದ ನಂತರವೂ ರೈತರು ಆತ್ಮಹತ್ಯೆ ಮುಂದುವರೆದಿದೆ. ಅವರ ವಿಧಾನಸಭಾ ಕ್ಷೇತ್ರದಲ್ಲೇ ರೈತ ಆತ್ಮಹತ್ಯೆ ಮಾಡುತ್ತಿದ್ದಾರೆ. ರೈತರ ವಿಚಾರದಲ್ಲಿ ಅವರು ತಮ್ಮ ನಿಲುವು ಸ್ಪಷ್ಟಪಡಿಸೇಕು ಎಂದು ಅವರು ಆಗ್ರಹಿಸಿದರು.

ರೈತರಿಗೆ ಸಹಾಯ ಮಾಡುವ ವಿಚಾರದಲ್ಲಿ ಕಾಂಗ್ರೆಸ್‌ನವರು ವಿರೋಧ ವ್ಯಕ್ತಪಡಿಸಿದ್ದಾರೆಯೇ ಎಂಬುದನ್ನು ಕುಮಾರಸ್ವಾಮಿ ಜನತೆಯ ಮುಂದೆ ಸ್ಪಷ್ಟ ಪಡಿಸಬೇಕು. ಕೇವಲ ಅಧಿಕಾರ ಅನುಭವಿಸುವುದು ಮಾತ್ರವಲ್ಲ, ಭರವಸೆ ಯನ್ನು ಕೂಡ ಈಡೇರಿಸಬೇಕು ಎಂದರು.

ಈ ಸರಕಾರದ ಹೈಕಮಾಂಡ್ ಒಂದು ಪದ್ಮನಾಭ ನಗರದಲ್ಲಿ ಮತ್ತೊಂದು ದೆಹಲಿ ಇದೆ. ಎಲ್ಲ ವ್ಯವಹಾರ ದೆಹಲಿಗೆ ಶಿಫ್ಟ್ ಆಗಿದೆ. ರಾಜ್ಯದ ಕಾಂಗ್ರೆಸ್ ಮುಖಂಡರು ಲೆಕ್ಕಕ್ಕಿಲ್ಲ. ಸಿದ್ಧರಾಮಯ್ಯ ಅವರನ್ನು ಕಾಂಗ್ರೆಸ್ ಕೇಂದ್ರ ನಾಯಕರು ಯೂಸ್ ಆ್ಯಂಡ್ ಥ್ರೋ ಮಾಡಿದ್ದಾರೆಂದು ಅವರು ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News