ಮೇ 29: ಶಾಲಾ ಪ್ರಾರಂಭೋತ್ಸವ; ಶೇ.65ರಷ್ಟು ಪಠ್ಯಪುಸ್ತಕ ಸರಬರಾಜು
ಉಡುಪಿ, ಮೇ 27: ಉಡುಪಿ ಜಿಲ್ಲೆಯಾದ್ಯಂತ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳ ಪ್ರಾರಂಭ ನಡೆಯಲಿದ್ದು, ಮೇ 29ರಂದು ಶೃಂಗಾರ ಗೊಂಡ ಶಾಲೆಗಳಲ್ಲಿ ಪ್ರಾರಂಭೋತ್ಸವ ಆಚರಿಸಲಾಗುತ್ತಿದೆ. ಈ ಸಂದರ್ಭ ದಲ್ಲಿ ಮಕ್ಕಳಿಗೆ ವಿತರಿಸಲು ಶೇ.65ರಷ್ಟು ಪಠ್ಯಪುಸ್ತಕಗಳನ್ನು ಆಯಾ ಶಾಲೆಗಳಿಗೆ ಸರಬರಾಜು ಮಾಡಲಾಗಿದೆ.
ಜಿಲ್ಲೆಯಲ್ಲಿರುವ ಸರಕಾರಿ, ಅನುದಾನಿತ ಹಾಗೂ ಅನುದಾನಿತ ರಹಿತ ಒಟ್ಟು 1254 ಶಾಲೆಗಳು ಮೇ 28ರಂದು ಪ್ರಾರಂಭಗೊಳ್ಳಲಿದ್ದು, ಅಂದು ಶಾಲೆಯ ಆವರಣ, ಕೊಠಡಿ ಸ್ವಚ್ಛಗೊಳಿಸಿ ಕುಡಿಯುವ ನೀರು, ಶೌಚಾಲಯಗಳನ್ನು ಸುಸ್ಥಿತಿಯಲ್ಲಿಡಲಾಗುತ್ತದೆ. ಶಾಲಾ ಪ್ರಾರಂಭೋತ್ಸವಕ್ಕೆ ಬೇಕಾದ ಎಲ್ಲ ಸಿದ್ಧತೆ ಗಳನ್ನು ಮಾಡಲಾಗುತ್ತದೆ.
ಮೇ 29ರಂದು ಶಾಲೆಯನ್ನು ತಳಿರು ತೋರಣ, ರಂಗೋಲಿಯಿಂದ ಶೃಂಗಾರಗೊಳಿಸಿ ಶಾಲಾ ಪ್ರಾರಂಭೋತ್ಸವವನ್ನು ಸಂಭ್ರಮಿಸಲಾಗುದತ್ತದೆ. ಬ್ಯಾಂಡ್ ಸೆಟ್‌ಗಳು ಇರುವ ಶಾಲೆಗಳಲ್ಲಿ ಮಕ್ಕಳನ್ನು ಬ್ಯಾಂಡ್ ವಾದ್ಯಗಳ ಮೂಲಕ ಸ್ವಾಗತಿಸಲು ಉದ್ದೇಶಿಸಲಾಗಿದೆ. ಮಕ್ಕಳ ಪೋಷಕರನ್ನು ಕರೆಸಿ ಮಧ್ಯಾಹ್ನ ಪಾಯಾಸ ಊಟದ ವ್ಯವಸ್ಥೆಯನ್ನು ಎಲ್ಲ ಶಾಲೆಗಳಲ್ಲಿ ಮಾಡ ಲಾಗುತ್ತದೆ. ಜಿಲ್ಲಾ ಮಟ್ಟದ ಪ್ರಾರಂಭೋತ್ಸವ ಕಾರ್ಯಕ್ರಮವನ್ನು ತೆಕ್ಕಟ್ಟೆಯ ಸರಕಾರಿ ಪ್ರಾಥಮಿಕ ಶಾಲೆಯಲ್ಲಿ ನಡೆಸಲು ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆ ನಿರ್ಧರಿಸಿದೆ.
ಮಕ್ಕಳ ಸಂಖ್ಯೆ ವೃದ್ಧಿಗೆ ಯತ್ನ: ಕಳೆದ ವರ್ಷ ಜಿಲ್ಲೆಯ ಸರಕಾರಿ ಶಾಲೆಗಳ ಒಂದನೆ ತರಗತಿಗೆ 16,028 ವಿದ್ಯಾರ್ಥಿಗಳು ಸೇರ್ಪಡೆಗೊಂಡಿದ್ದು, ಈ ಬಾರಿ ಇದಕ್ಕಿಂತ ಹೆಚ್ಚು ಮಕ್ಕಳನ್ನು ಶಾಲೆಗೆ ಸೇರಿಸುವ ಪ್ರಯತ್ನವನ್ನು ಇಲಾಖೆ ಮಾಡು ತ್ತಿದೆ.
ಅದಕ್ಕಾಗಿ ಆಯಾ ಸರಕಾರಿ ಶಾಲೆಯ ಅಧ್ಯಾಪಕರು ತಮ್ಮ ವ್ಯಾಪ್ತಿಯಲ್ಲಿರುವ ಅಂಗನವಾಡಿಯ ಮಕ್ಕಳು ತಮ್ಮ ಶಾಲೆಗಳಿಗೆ ಸೇರಿಸುವಂತೆ ಪೋಷಕರ ಮನ ವೊಲಿಸುವ ಕಾರ್ಯ ಮಾಡುತ್ತಿದ್ದಾರೆ. ಆಂಗ್ಲ ಮಾಧ್ಯಮದ ಪ್ರಭಾವದಿಂದ ಮಕ್ಕಳ ಸಂಖ್ಯೆ ಕ್ಷೀಣಿಸುತ್ತಿರುವ ಜಿಲ್ಲೆಯ ಸುಮಾರು 10ಕ್ಕೂ ಅಧಿಕ ಶಾಲೆಗಳಲ್ಲಿ ಈ ವರ್ಷದಿಂದ ಎಲ್‌ಕೆಜಿ, ಯುಕೆಜಿ ಪ್ರಾರಂಭಿಸುವ ಕೆಲಸ ನಡೆಯುತ್ತಿದೆ. ಅದಕ್ಕಾಗಿ ದಾಖಲಾತಿ ಕೂಡ ಆರಂಭಿಸಲಾಗಿದೆ.
ಇಲಾಖೆಗೆ ಈಗಾಗಲೇ ಶೇ.85ರಷ್ಟು ಪಠ್ಯ ಪುಸ್ತಕಗಳು ಬಂದಿದ್ದು, ಇವು ಗಳನ್ನು ಶಾಲಾ ಪ್ರಾರಂಭೋತ್ಸವದ ದಿನದಂದು ಮಕ್ಕಳಿಗೆ ವಿತರಿಸಲು ಶೇ.65 ರಷ್ಟು ಪಠ್ಯಪುಸ್ತಕಗಳನ್ನು ಶಾಲೆಗಳಿಗೆ ಸರಬರಾಜು ಮಾಡಲಾಗಿದೆ. ಉಳಿದ ಪಠ್ಯ ಪುಸ್ತಕಗಳನ್ನು ತಾಲೂಕು ಕೇಂದ್ರದ ಮೂಲಕ ಹಂತ ಹಂತವಾಗಿ ವಿತರಣೆ ಮಾಡಲಾಗುವುದು ಎಂದು ಉಡುಪಿ ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಶೇಷಶಯನ ಕಾರಿಂಜ ಪತ್ರಿಕೆಗೆ ತಿಳಿಸಿದ್ದಾರೆ.
ಸಮವಸ್ತ್ರ ವಿತರಿಸಲು ಈ ತಿಂಗಳ ಕೊನೆಯವರೆಗೆ ಸಮಯ ಅವಕಾಶಗಳಿದ್ದು, ಈವರೆಗೆ ಸರಬರಾಜು ಆಗಿಲ್ಲ. ಒಂದು ಸೆಟ್ ಸಮವಸ್ತ್ರದ ಬಟ್ಟೆಯನ್ನು ಇಲಾಖೆ ಮೂಲಕ ವಿತರಿಸಿದೆ. ಇನ್ನೊಂದು ಸೆಟ್ ಸಮವಸ್ತ್ರಕ್ಕಾಗಿ ಆಯಾ ಶಾಲೆಯ ಶಾಲಾಭಿವೃದ್ಧಿ ಸಮಿತಿಗೆ ಒಂದು ಮಕ್ಕಳಿಗೆ 200ರೂ.ನಂತೆ ನೀಡ ಲಾಗುತ್ತದೆ. ಸಮಿತಿಯು ಈ ಹಣದಲ್ಲಿ ಸಮವಸ್ತ್ರದ ಬಟ್ಟೆಯನ್ನು ಖರೀದಿಸಿ, ಹೊಲಿದು ಮಕ್ಕಳಿಗೆ ವಿತರಣೆ ಮಾಡಬೇಕಾಗುತ್ತದೆ.
ಶಾಲಾ ಪ್ರಾರಂಭೋತ್ಸವಕ್ಕೆ ಎಲ್ಲ ಶಾಲೆಗಳಲ್ಲಿ ಸಿದ್ಧತೆಗಳನ್ನು ನಡೆಸಲಾಗುತ್ತದೆ. ಒಟ್ಟಾರೆ ಶಾಲೆಯ ಪರಿಸರವನ್ನು ಮಕ್ಕಳ ಸ್ನೇಹಿಯನ್ನಾಗಿಸುವ ಎಲ್ಲ ರೀತಿಯ ಪ್ರಯತ್ನಗಳನ್ನು ಇಲಾಖೆ ಮೂಲಕ ಮಾಡಲಾಗುತ್ತದೆ. ಸರಕಾರಿ ಶಾಲೆಗಳ ಮಕ್ಕಳ ಸಂಖ್ಯೆ ಕ್ಷೀಣಿಸುತ್ತಿರುವ ಈ ಸಂದರ್ಭದಲ್ಲಿ ಅದನ್ನು ವೃದ್ಧಿ ಸುವುದು ದೊಡ್ಡ ಸವಾಲಾಗಿದೆ. ಕಳೆದ ಬಾರಿಗಿಂತ ಹೆಚ್ಚು ಮಕ್ಕಳ ದಾಖಲಾತಿಗೆ ಪ್ರಯತ್ನ ಮಾಡಲಾಗುತ್ತಿದೆ.
-ಶೇಷಶಯನ ಕಾರಿಂಜ, ಉಪನಿರ್ದೇಶಕರು, ಸಾರ್ವಜನಿಕ ಶಿಕ್ಷಣ ಇಲಾಖೆ, ಉಡುಪಿ