ಶೋಪಿಯಾನ್‌ನಲ್ಲಿ ಭಯೋತ್ಪಾದಕರಿಂದ ಬಾಂಬ್ ಸ್ಫೋಟ: ಮೂವರು ಯೋಧರಿಗೆ ಗಾಯ
Update: 2018-05-28 17:03 IST
ಶ್ರೀನಗರ,ಮೇ 28: ಜಮ್ಮು-ಕಾಶ್ಮೀರದ ಶೋಪಿಯಾನ್‌ನಲ್ಲಿ ಸೋಮವಾರ ಭಯೋತ್ಪಾದಕರು ಸುಧಾರಿತ ಸ್ಫೋಟಕ ಸಾಧನ(ಐಇಡಿ)ವನ್ನು ಸ್ಫೋಟಿಸಿದ ಪರಿಣಾಮ ನೆಲಬಾಂಬ್ ನಿರೋಧಕ ಸೇನಾ ವಾಹನವು ಪಲ್ಟಿಯಾಗಿದ್ದು, ಮೂವರು ಯೋಧರು ಗಾಯಗೊಂಡಿದ್ದಾರೆ. ರವಿವಾರವೂ ಭಯೋತ್ಪಾದಕರು ಫುಲ್ವಾಮಾ ಜಿಲ್ಲೆಯ ಕಾಕ್ಪೋರಾದಲ್ಲಿನ ಸೇನಾ ಶಿಬಿರದ ಮೇಲೆ ದಾಳಿ ನಡೆಸಿದ್ದು,ಓರ್ವ ಯೋಧ ಮೃತಪಟ್ಟಿದ್ದ.
ಕೇಂದ್ರವು ಕೆಲವು ದಿನಗಳ ಹಿಂದೆ ಜಮ್ಮು-ಕಾಶ್ಮೀರದಲ್ಲಿ ಪವಿತ್ರ ರಮಝಾನ್ ತಿಂಗಳಲ್ಲಿ ಏಕಪಕ್ಷೀಯ ಕದನವಿರಾಮವನ್ನು ಘೋಷಿಸಿತ್ತು. ಆದರೂ ಈ ದಾಳಿಗಳು ನಡೆದಿವೆ. ಕದನವಿರಾಮವು ಕಾಶ್ಮೀರದಲ್ಲಿ ಧನಾತ್ಮಕ ಪರಿಣಾಮವನ್ನು ಬೀರಿದೆ ಎಂದು ರಾಜ್ಯ ಪೊಲೀಸರು ಮತ್ತು ಕೇಂದ್ರ ಗೃಹ ಸಚಿವಾಲಯದ ಅಧಿಕಾರಿಗಳು ಈ ಹಿಂದೆ ಹೇಳಿದ್ದರು. ಪರಿಸ್ಥಿತಿಯಲ್ಲಿ ಸುಧಾರಣೆಗಳು ಕಂಡುಬಂದರೆ ರಮಝಾನ್ ಮಾಸದ ನಂತರವೂ ಕದನ ವಿರಾಮವನ್ನು ಮುಂದುವರಿಸಬಹುದಾಗಿದೆ ಎಂದೂ ಅವರು ಸುಳಿವು ನೀಡಿದ್ದರು.