ಮಾನವ ತೋಳುಗಳನ್ನು ಅನುಕರಿಸುವ ರೋಬೋಟ್
ಶಿರ್ವ, ಮೇ 28: ಅನುಕರಣೆ ಎಂಬುದನ್ನು ರೋಬೋಟುಗಳಿಗೂ ಅಳವಡಿಸಿ ಒಂದು ಹೊಸ ಮಾದರಿಯನ್ನು ಬಂಟಕಲ್ಲಿನ ಶ್ರೀಮಧ್ವ ವಾದಿರಾಜ ತಾಂತ್ರಿಕ ಮಹಾವಿದ್ಯಾಲಯದ ಅಂತಿಮ ವರ್ಷದ ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯುನಿಕೇಷನ್ ವಿಭಾಗದ ವಿದ್ಯಾರ್ಥಿಗಳು ಸಿದ್ಧಪಡಿಸಿದ್ದಾರೆ.
ರೊಬೋಟಿಕ್ ತಂತ್ರಜ್ಞಾನದಲ್ಲಿ ಮಾನವರ ಅನುಕರಣೆ ಹೆಚ್ಚಾಗಿ ಮನುಷ್ಯನ ದೇಹದ ಮೇಲೆ ಅಳವಡಿಸಿದ ಸೆನ್ಸರ್ ಅಥವಾ ನಿಯಂತ್ರಕಗಳ ಮುಖಾಂತರ ಜರಗುತ್ತವೆ. ಆದರೆ ಈ ವಿನ್ಯಾಸದಲ್ಲಿ ಸೆನ್ಸರುಗಳ ಬಳಕೆಯಿಲ್ಲದೇ ಕೇವಲ ಮನುಷ್ಯನು ಮಾಡುವ ಚಲನೆಯನ್ನು ವೀಡಿಯೋದಲ್ಲಿ ನೋಡಿ ರೋಬೋಟ್ ಅನ್ನೇ ಯಥಾವತ್ ಅನುಕರಿಸುತ್ತದೆ.
ಕೈನೆಕ್ಟ್ ಹಾಗೂ ಡೆಪ್ತ್ ಸೆನ್ಸಿಂಗ್ ತಂತ್ರಜ್ಞಾನದ ಸಹಾಯದಿಂದ ಅಭಿವೃದ್ಧಿ ಪಡಿಸಲಾದ ಈ ರೋಬೋಟನ್ನು ಬಾಂಬ್ ನಿಷ್ಕ್ರೀಯಗೊಳಿಸುವುದು, ಭಾರ ಎತ್ತುವುದು, ಬೆಂಕಿಯನ್ನು ನಂದಿಸುವುದು, ಶಸ್ತ್ರಚಿಕಿತ್ಸೆಯಲ್ಲೂ ಕೂಡಾ ಬಳಸ ಬಹುದಾಗಿದೆ. ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಸಂದೇಶ್ ಕುಮಾರ್ ಮಾರ್ಗದರ್ಶನದಲ್ಲಿ ವಿದ್ಯಾರ್ಥಿಗಳಾದ ರಾಹುಲ್ ಹೆಬ್ಬಾರ್, ಸಾಗರ್ ಸುಜೀರ್, ಶಶಾಂಕ್ ಮತ್ತು ರೋಹಿತ್ ಪ್ರಭು ಈ ರೋಬೋಟನ್ನು ಸಿದ್ಧಪಡಿಸಿ ದ್ದಾರೆ. ಕಾಲೇಜಿನಲ್ಲಿ ಇತ್ತೀಚೆಗೆ ಜರುಗಿದ ತಾಂತ್ರಿಕ ಮಾದರಿಗಳ ಸ್ಪರ್ಧೆಯಲ್ಲಿ ಈ ತಂಡವು ಪ್ರಥಮ ಬಹುಮಾನವನ್ನು ಗೆದ್ದುಕೊಂಡಿದೆ.