ಮಹಾರಾಷ್ಟ್ರ, ಉ.ಪ್ರದೇಶದ ಹಲವೆಡೆ ಇವಿಎಂ ದೋಷ: ತಾಪಮಾನದ ಕಾರಣ ನೀಡಿದ ಚುನಾವಣಾ ಆಯೋಗ

Update: 2018-05-28 12:18 GMT

ಹೊಸದಿಲ್ಲಿ, ಮೇ 28: ಇಂದು ನಡೆದ ಮಹಾರಾಷ್ಟ್ರ ಮತ್ತು ಉತ್ತರ ಪ್ರದೇಶದಲ್ಲಿ ಲೋಕಸಭಾ ಉಪಚುನಾವಣೆಗಳಲ್ಲಿ ಹಲವೆಡೆ ಇವಿಎಂ ದೋಷಗಳು ಕಾಣಿಸಿಕೊಂಡಿದ್ದು, ಈ ಭಾಗಗಳಲ್ಲಿನ ತಾಪಮಾನ ಏರಿಕೆಯಿಂದಾಗಿ ಇವಿಎಂಗಳು ಬಾಧಿತವಾಗಿವೆ ಎಂದು ಚುನಾವಣಾ ಆಯೋಗ ಸಬೂಬು ನೀಡಿದೆ.

ಉತ್ತರ ಪ್ರದೇಶದ ಖೈರಾನದಲ್ಲಿ ಅಜಿತ್ ಸಿಂಗ್ ಅವರ ಆರ್ ಎಲ್‍ಡಿ ಈಗಾಗಲೇ ಇವಿಎಂ ದೋಷದ ಕುರಿತಂತೆ ಚುನಾವನಾ ಆಯೋಗಕ್ಕೆ ದೂರು ನೀಡಿದೆ. ಈ ಕ್ಷೇತ್ರದಲ್ಲಿ ವಿಪಕ್ಷಗಳ ಏಕತೆಯ ಪರೀಕ್ಷೆ ನಡೆಯಲಿದೆಯೆಂದೇ ನಂಬಲಾಗಿದೆ. ಮಹಾರಾಷ್ಟ್ರದ ಪಾಲ್ಘರ್ ಹಾಗೂ ಭಂಡಾರ-ಗೊಂಡಿಯಾ ಕ್ಷೇತ್ರಗಳಲ್ಲಿನ ಸ್ಪರ್ಧೆ ಕೂಡ ಆಸಕ್ತಿದಾಯಕವಾಗಿದ್ದು ಬಿಜೆಪಿ ಮತ್ತೆ ಇಲ್ಲಿ ತನ್ನ ಪ್ರಭುತ್ವ ಸ್ಥಾಪಿಸಲು ಯತ್ನಿಸುತ್ತಿದೆ.

ಆದರೆ ಬಹಳಷ್ಟು ಕಡೆಗಳಲ್ಲಿ ಇವಿಎಂಗಳಲ್ಲಿ ದೋಷ ಕಂಡು ಬಂದಿದೆ ಎಂಬ ವರದಿಗಳು ಉತ್ಪ್ರೇಕ್ಷಿತ ಎಂದು ಆಯೋಗ ಹೇಳಿದೆ. ಇವಿಎಂ ಸಮಸ್ಯೆಯಿಂದ ಭಂಡಾರ-ಗೊಂಡಿಯಾ ಕ್ಷೇತ್ರದಲಿ 35 ಬೂತುಗಳಲ್ಲಿ ಮತದಾನ ರದ್ದುಪಡಿಸಲಾಗಿತ್ತು ಎಂಬ ವರದಿಗಳೂ ತಪ್ಪು ಎಂದು ಆಯೋಗ ಹೇಳಿದೆ.

ಕೈರಾನದಲ್ಲಿ  ಆರ್ ಎಲ್‍ಡಿ ಅಭ್ಯರ್ಥಿ ತಬಸ್ಸುಂ ಹಸನ್ ದೂರು ದಾಖಲಿಸಿ 150 ಇವಿಎಂಗಳು ದೋಷಪೂರಿತವಾಗಿವೆ ಎಂದು ಆರೋಪಿಸಿದ್ಧಾರೆ. ಈ ಕ್ಷೇತ್ರದಲ್ಲಿ ಬಿಜೆಪಿ ಮಾಜಿ ಶಾಸಕ ದಿವಂಗತ  ಹುಕುಂ ಸಿಂಗ್ ಅವರ ಪುತ್ರಿ ಮೃಗಾಂಕ ಸಿಂಗ್ ಅವರನ್ನು ಕಣಕ್ಕಿಳಿಸಿದ್ದು. ವಿಪಕ್ಷಗಳು ಈ ಕ್ಷೇತ್ರವನ್ನು ಗೆಲ್ಲಬೇಕೆಂದು ಪಣ ತೊಟ್ಟಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News