ಅತಿಸಾರ ಭೇದಿ ಮರಣ ಪ್ರಮಾಣ ಶೂನ್ಯಕ್ಕೆ ಇಳಿಸಲು ಪ್ರಯತ್ನ: ಕಾಪಶಿ
ಉಡುಪಿ, ಮೇ 28: ಜಗತ್ತಿನಲ್ಲಿ ಅತಿಸಾರ ಭೇದಿಯಿಂದ 0-5 ವರ್ಷ ದೊಳಗಿನ ಮಕ್ಕಳ ಮರಣ ಪ್ರಮಾಣ ಶೇ.10ರಷ್ಟಿದ್ದು, ಭಾರತದಲ್ಲಿ ಈ ಪ್ರಮಾಣ ಶೇ.8 ಹಾಗೂ ರಾಜ್ಯದಲ್ಲಿ ಶೇ.0.67ರಷ್ಟಿದೆ. ರಾಜ್ಯದಲ್ಲಿ ಅತಿಸಾರ ಭೇದಿಯಿಂದ ಮರಣ ಹೊಂದುವ ಮಕ್ಕಳ ಪ್ರಮಾಣವನ್ನು ಶೂನ್ಯಕ್ಕೆ ಇಳಿಸಲು ಪ್ರಯತ್ನಿಸಲಾಗುತ್ತಿದೆ ಎಂದು ಉಡುಪಿ ಜಿಪಂ ಮುಖ್ಯ ಕಾರ್ಯನಿರ್ವಹಣಾಧಿ ಕಾರಿ ಶಿವಾನಂದ ಕಾಪಶಿ ಹೇಳಿದ್ದಾರೆ.
ಉಡುಪಿ ಜಿಪಂ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಸಾರ್ವಜನಿಕ ಶಿಕ್ಷಣ ಇಲಾಖೆಗಳ ಸಹಯೋಗದಲ್ಲಿ ಒಳಕಾಡು ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸೋಮವಾರ ಆಯೋಜಿಸಲಾದ ತೀವ್ರತರ ಅತಿಸಾರ ಭೇದಿ ನಿಯಂತ್ರಣ ಪಾಕ್ಷಿಕ ಕಾರ್ಯ ಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡುತಿದ್ದರು.
ರಾಜ್ಯದಲ್ಲಿ ಅತಿಸಾರ ಭೇದಿ ನಿಯಂತ್ರಣ ಕುರಿತು ತೆಗೆದುಕೊಳ್ಳಲಾಗಿರುವ ಮುನ್ನೆಚ್ಚರಿಕೆ ಕ್ರಮಗಳಿಂದ ರೋಗ ನಿಯಂತ್ರಣದಲ್ಲಿದ್ದು, ಇದನ್ನು ಹಂತ ಹಂತವಾಗಿ ಶೂನ್ಯಕ್ಕೆ ಇಳಿಸಲು ಪ್ರಯತ್ನಿಸಲಾಗುತ್ತಿದೆ. ಈ ನಿಟ್ಟಿನಲ್ಲಿ ಆರೋಗ್ಯ ಇಲಾಖೆಯೊಂದಿಗೆ ಎಲ್ಲಾ ಇಲಾಖೆಗಳು ಹಾಗೂ ಸ್ವಯಂ ಸೇವಾ ಸಂಘಟನೆ ಗಳು ಕೈಜೋಡಿಸಬೇಕು ಎಂದರು.
ರೋಗ ಬಂದಾಗ ಚಿಕಿತ್ಸೆ ಪಡೆಯುವುದಕ್ಕಿಂತ ರೋಗ ಬಾರದಂತೆ ಮುನ್ನೆಚ್ಚರಿಕೆ ವಹಿಸುವುದು ಅಗತ್ಯ. ಅತಿಸಾರ ಬೇದಿ ನಿಯಂತ್ರಣಕ್ಕೆ ಸ್ವಚ್ಛತೆಯೇ ಮೂಲ ಮಂತ್ರ. ಆದ್ದರಿಂದ ಮನೆಗಳಲ್ಲಿ ಹಾಗೂ ಸುತ್ತಮತ್ತಲಿನ ಪರಿಸರದಲ್ಲಿ ಸ್ವಚ್ಛತೆಗೆ ಹೆಚ್ಚಿನ ಆದ್ಯತೆ ನೀಡಬೇಕು. ಸರಿಯಾದ ಕ್ರಮದಲ್ಲಿ ಕೈ ತೊಳೆಯುವ ಕುರಿತು ಜಿಲ್ಲೆಯ ಎಲ್ಲಾ ಶಾಲಾ ಮಕ್ಕಳಿಗೆ ಪ್ರಾತ್ಯಕ್ಷಕೆ ಮೂಲಕ ತರಬೇತಿ ನೀಡಾಗುತ್ತಿದೆ ಎಂದು ಅವರು ತಿಳಿಸಿದರು.
ನಗರ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ದೀಕ್ಷಿತ್ ಓಆರ್‌ಎಸ್ ತಯಾರಿಕೆಯ ಬಗ್ಗೆ ಪ್ರಾತ್ಯಕ್ಷಿಕೆ ನೀಡಿದರು. ರೋಟರಿ ಕಾರ್ಯ ದರ್ಶಿ ಸುಬ್ರಹ್ಮಣ್ಯ ಕಾರಂತ್, ಸಾರ್ವಜನಿಕ ಶಿಕ್ಷಣ ಇಲಾಖೆಯ ನಾಗರತ್ನ, ಎಂಸಿಎಚ್‌ನ ಮಕ್ಕಳ ತಜ್ಞ ಡಾ.ವೇಣುಗೋಪಾಲ್, ಒಳಕಾಡು ಶಾಲೆಯ ಎಸ್‌ಡಿಎಂಸಿ ಅಧ್ಯಕ್ಷ ನಾಗಭೂಷಣ್, ಜಿಲ್ಲಾ ಆರ್‌ಸಿಎಚ್ ಅಧಿಕಾರಿ ಡಾ. ಎಂ.ಜಿ.ರಾಮ, ಒಳಕಾಡು ಸರಕಾರಿ ಸಂಯುಕ್ತ ಪ್ರೌಢಶಾಲೆಯ ಮುಖ್ಯೋಪಾ ಧ್ಯಾಯಿನಿ ನಿರ್ಮಲಾ ರಾವ್, ಒಳಕಾಡು ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯೋಪಧ್ಯಾಯಿನಿ ಕುಸುಮ ಉಪಸ್ಥಿತರಿದ್ದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ರೋಹಿಣಿ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಶಿಕ್ಷಕಿ ಸುಹಾಸಿನಿ ವಂದಿಸಿದರು. ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ವಿಜಯಾ ಬಾಯಿ ಕಾರ್ಯಕ್ರಮ ನಿರೂ ಪಿಸಿದರು.
ಜಿಲ್ಲೆಯ 78,373 ಮನೆಗಳಿಗೆ ಭೇಟಿ: ಡಿಎಚ್‌ಒ
ಜಿಲ್ಲೆಯಲ್ಲಿ 0-5 ವರ್ಷದೊಳಗಿನ ಮಕ್ಕಳು ಇರುವ 78,373 ಮನೆಗಳನ್ನು ಗುರುತಿಸಲಾಗಿದ್ದು, ಮೇ 28ರಿಂದ ಜೂ.9ರವರೆಗೆ ನಡೆಯುವ ತೀವ್ರತರ ಅತಿಸಾರ ಭೇದಿ ನಿಯಂತ್ರಣ ಪಾಕ್ಷಿಕ ಕಾರ್ಯಕ್ರಮದಲ್ಲಿ ಈ ಎಲ್ಲಾ ಮನೆಗಳಿಗೆ ಆರೋಗ್ಯ ಕಾರ್ಯಕರ್ತೆಯರು, ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರು ಭೇಟಿ ನೀಡಿ ಅರಿವು ಮೂಡಿಸುವುದರ ಜೊತೆಗೆ, ಓಆರ್‌ಎಸ್ ಪಾಕೆಟ್ ವಿತರಿಸಲಿದ್ದಾರೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ರೋಹಿಣಿ ತಿಳಿಸಿದ್ದಾರೆ.
ಭೇಟಿ ಸಂದರ್ಭದಲ್ಲಿ ಮನೆಯಲ್ಲಿ ಬೇಧಿಯಿಂದ ನರಳುತ್ತಿರುವ ಮಕ್ಕಳು ಕಂಡು ಬಂದಲ್ಲಿ ಜಿಂಕ್ ಮಾತ್ರೆಯನ್ನು ವಿತರಿಸಲಾಗುತ್ತದೆ. ಪಂಚಾಯತ್‌ಗಳಲ್ಲಿ ನೀರು ಸರಬರಾಜು ಮಾಡುವ ವೇಳೆಯಲ್ಲಿ ಕ್ಲೋರಿನೇಷನ್ ಮಾಡಿ ವಿತರಿಸುವಂತೆ ಎಲ್ಲಾ ಗ್ರಾಪಂಗಳಿಗೆ ಸೂಚನೆ ನೀಡಲಾಗಿದೆ. ಸ್ವಚ್ಛತೆಯ ಬಗ್ಗೆ ಮತ್ತು ಕೈ ತೊಳೆಯುವ ವಿಧಾನ ಬಗ್ಗೆ ಸಾರ್ವಜನಿಕ ಶಿಕ್ಷಣ ಇಲಾಖೆ ವತಿಯಿಂದ ಜಿಲ್ಲೆಯ ಎಲ್ಲಾ ಮಕ್ಕಳಿಗೆ ಮಾಹಿತಿ ನೀಡಲಾಗುತ್ತಿದೆ ಎಂದರು.