×
Ad

ಕಾರ್ಕಳದಲ್ಲಿ 8 ಮನೆಗಳಿಗೆ ಸಿಡಿಲಿನಿಂದ ಹಾನಿ, ಒಬ್ಬರಿಗೆ ಗಾಯ

Update: 2018-05-28 21:31 IST

ಉಡುಪಿ, ಮೇ 28: ನಿನ್ನೆ ರಾತ್ರಿಯಿಂದ ತಡರಾತ್ರಿಯವರೆಗೆ ಭಾರೀ ಗಾಳಿ ಮಳೆಯೊಂದಿಗೆ ಆರ್ಭಟಿಸಿದ ಗುಡುಗು-ಸಿಡಿಲಿನಿಂದ ಕಾರ್ಕಳ ತಾಲೂಕಿನ ಮೂರು ಗ್ರಾಮಗಳ ವ್ಯಾಪ್ತಿಯ 9 ಮನೆಗಳಿಗೆ ಹಾನಿಯಾಗಿದೆ. ಒಬ್ಬ ಕಾಲಿಗೆ ಸಿಡಿಲು ಬಡಿದು ಗಾಯವಾಗಿದ್ದು, ಚಿಕಿತ್ಸೆ ಪಡೆದಿದ್ದಾರೆ. ಆರು ಕಡೆಗಳಲ್ಲಿ ತೋಟಗಾರಿಕಾ ಹಾಗೂ ಕೃಷಿ ಬೆಳೆಗಳಿಗೆ ಹಾನಿಯುಂಟಾಗಿದೆ ಎಂದು ಇಲ್ಲಿಗೆ ಬಂದಿರುವ ಮಾಹಿತಿಗಳು ತಿಳಿಸಿವೆ.

ಮಿಯಾರು ಗ್ರಾಮದ ಮೋನು ಮೊಯ್ಲಿ ಎಂಬವರ ಕಾಲಿಗೆ ಸಿಡಿಲಿನಿಂದ ಗಾಯವಾಗಿದೆ. ಉಳಿದಂತೆ ಮಿಯಾರು ಗ್ರಾಮದ ಜಗನ್ನಾಥ ಮೊಯ್ಲಿ, ಸುಂದರಿ ಮೊಯ್ಲಿ, ಸದಾಶಿವ ಆಚಾರ್ಯ, ಮಹಾಬಲ ಶೆಟ್ಟಿ,ನಳಿನಿ ಹಾಗೂ ಕಸ್ತೂರಿ ಮೋನಪ್ಪ ಎಂಬವರ ಮನೆಗಳಿಗೆ ಸಿಡಿಲಿನಿಂದ ಹಾನಿಯಾಗಿವೆ.

ಇನ್ನು ಬೋಳಾ ಗ್ರಾಮದ ಸೋಮಾವತಿ ಹಾಗೂ ನಲ್ಲೂರು ಗ್ರಾಮದ ಮರಿಯಮ್ಮ ಎಂಬವರ ಮನೆಗಳಿಗೆ ಸಿಡಿಲು ಬಡಿದು ವ್ಯಾಪಕ ಪ್ರಮಾಣದಲ್ಲಿ ಹಾನಿಯುಂಟಾಗಿದೆ. ಇವುಗಳಲ್ಲಿ ಹಲವು ಮನೆಗಳ ಗೋಡೆಗಳು ಬಿರುಕು ಬಿಟ್ಟಿದ್ದು, ವಿದ್ಯುತ್ ವಯರಿಂಗ್ ಹಾಗೂ ವಿದ್ಯುತ್ ಉಪಕರಣಗಳು ನಾಶವಾಗಿವೆ.
ಸಾಣೂರು ಗ್ರಾಮದ ಆಲ್ಫೋನ್ಸ್ ಡಿಸೋಜ ಎಂಬವರ ಮನೆಯ ತೋಟದ ಬಾಳೆ, ಅಡಿಕೆ ಗಿಡಗಳು ಗಾಳಿಗೆ ನೆಲಕಚ್ಚಿದ್ದರೆ, ಮಿಯಾರು ಗ್ರಾಮದ ಚಂದ್ರಹಾಸ, ಸುನಂದ, ಗೋವಿಂದ ನಾಯ್ಕ, ಸುಲೋಚನ, ಈಶ್ವರ ನಾಯ್ಕ, ಪೊಮರ ಮೂಲ್ಯ ಅವರ ಮನೆಯ ತೋಟದ ಅಡಿಕೆ, ತೆಂಗು, ಬಾಳೆ ಹಾಗೂ ಇತರ ಗಿಡಗಳು ಗಾಳಿಗೆ ಉರುಳಿ ಬಿದ್ದು ನಷ್ಟ ಉಂಟಾಗಿದೆ.

 ಉಳಿದಂತೆ ಮಿಯಾರು ಗ್ರಾಮದ ಸುಮತಿ ಮೂಲ್ಯ, ಕಲ್ಯಾಣಿ ಮೂಲ್ಯ, ಕಸಬಾ ಗ್ರಾಮದ ಮಂಜುಳಾ ಆನಂದರಾವ್, ರಮಣಿ ಆಚಾರ್ಯ, ಅನುಷಾ, ರತ್ನ, ಸಾಣೂರು ಗ್ರಾಮದ ಐಸಮ್ಮ, ಕಲ್ಲಯ್ಯ ಹಿರೇಮಠ, ರಮಣಿ ಶೆಟ್ಟಿಗಾರ್, ಪ್ರೇಮ ಪೂಜಾರಿ, ಶೋಭಾ ಶೇಖರ ಪೂಜಾರಿ, ನೋಣಯ್ಯ ಪರವ, ಅಬ್ದುಲ್ಲಾ, ಸಾಧು ಶೆಟ್ಟಿಗಾರ್, ಇಸ್ಮಾಯಿಲ್, ಮಿಯಾರಿನ ಸುಮತಿ ಸತೀಶ್ ಮೂಲ್ಯ ಹಾಗೂ ಜಗನನಾಥ ಮೂಲ್ಯ ಅವರ ಮನೆಗಳು ಗಾಳಿ-ಮಳೆಗೆ ಭಾಗಶ: ಹಾನಿಗೊಂಡಿದ್ದು, 5,000ರೂ.ಗಳಿಂದ 80,000ರೂ.ಗಳವರೆಗೆ ನಷ್ಟ ಸಂಭವಿಸಿದ ಬಗ್ಗೆ ವರದಿಯಾಗಿದೆ.

ಕಾರಿನ ಮೇಲೆ ಮರ ಬಿದ್ದು 3 ಲಕ್ಷ ಹಾನಿ: ಉಡುಪಿ ತಾಲೂಕು ಮೂಡನಿಡಂಬೂರಿನ ವನಿತಾ ಎಂಬವರ ಕಾರಿನ ಮೇಲೆ ಮರ ಬಿದ್ದು 3 ಲಕ್ಷ ರೂ.ನಷ್ಟ ಸಂಭವಿಸಿದೆ. ಅದೇ ಗ್ರಾಮದ ಜಯರಾಂ ಎಂಬವರ ಮನೆಗೆ 30,000ರೂ., 76 ಬಡಗುಬೆಟ್ಟಿನ ಶ್ರೀಮತಿ ಉಪಾಧ್ಯಾಯರ ಮನೆಗೆ 50,000ರೂ., ಅಂಬಲಪಾಡಿ ಗ್ರಾಮದ ಸಂಜೀವ ಪೂಜಾರ್ತಿ, ಶೋಭಾ, ಸುಗಂಧಿ, ಕಿದಿಯೂರು ಗ್ರಾಮದ ಆನಂದ ಪೂಜಾರಿ, ವಸಂತಿ, ಶಶಿಧರ ಪೂಜಾರಿ, ವಾರಿಜ, ಗ್ರೆಗರಿ ಡಿಸೋಜ, ಪುತ್ತೂರು ಗ್ರಾಮದ ಕೆ.ವಿಠಲ ಮತ್ತು ವೆಂಕಟೇಶ ಎಂಬವರ ಮನೆಗಳಿಗೆ ಗಾಳಿ-ಮಳೆಯಿಂದ ಅಲ್ಲದೇ ಮರ ಬಿದ್ದು ಹಾನಿಯಾಗಿವೆ. ಪೆರ್ಡೂರು ಗ್ರಾಮದ ಬಾಬಿ ಪಾನಾರ ಅವರ ಮನೆಗೆ ಭಾಗಶ: ಹಾನಿಯಾಗಿ 30,000ರೂ.ನಷ್ಟ ಉಂಟಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News