×
Ad

ಜೂ.2-3: ಪುತ್ತೂರಿನಲ್ಲಿ ಅಂತರ್ ಜಿಲ್ಲಾ ಮಟ್ಟದ ಮುಕ್ತ ಚೆಸ್ ಪಂದ್ಯಾಟ

Update: 2018-05-28 21:39 IST

ಪುತ್ತೂರು, ಮೇ 28: ಅಂತರ್ ಜಿಲ್ಲಾ ಮಟ್ಟದ ಮುಕ್ತ ಚೆಸ್ ಪಂದ್ಯಾಟ ಜೂ.2 ಮತ್ತು 3ರಂದು ಪುತ್ತೂರಿನ ಶ್ರೀ ಮಹಾಲಿಂಗೇಶ್ವರ ದೇವಳದ ನಟರಾಜ ವೇದಿಕೆಯಲ್ಲಿ ಪುತ್ತೂರು ಚೆಸ್ ಅಕಾಡೆಮಿ ಆಶ್ರಯದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಅಕಾಡೆಮಿ ಅಧ್ಯಕ್ಷ ಜಯರಾಮ ಗೌಡ ಹಿರಿಂಜ ತಿಳಿಸಿದ್ದಾರೆ.

ಅವರು ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಅಕಾಡೆಮಿ ನೇತೃತ್ವದಲ್ಲಿ ನಡೆಯುತ್ತಿರುವ ಏಳನೇ ಟೂರ್ನಮೆಂಟ್ ಇದಾಗಿದ್ದು, ಎರಡು ದಿನಗಳ ಈ ಟೂರ್ನಮೆಂಟ್‌ನಲ್ಲಿ ದಕ್ಷಿಣ ಕನ್ನಡ, ಉಡುಪಿ, ಕೊಡಗು ಮತ್ತು ಕಾಸರಗೋಡು ಜಿಲ್ಲೆಗಳ ಸ್ಫರ್ಧಾಳುಗಳಿಗೆ ಭಾಗವಹಿಸಲು ಅವಕಾಶವಿದೆ. 10 ವಿಭಾಗಗಳಲ್ಲಿ ಸ್ಪರ್ಧೆ ನಡೆಯಲಿದೆ. 11ನೇ ವಿಭಾಗದಲ್ಲಿ ಮುಕ್ತ ಪಂದ್ಯಾಟ ನಡೆಯಲಿದೆ. 7 ವರ್ಷಕ್ಕಿಂತ ಕೆಳಗೆ, 9 ವರ್ಷಕ್ಕಿಂತ ಕೆಳಗೆ, 11 ವರ್ಷಕ್ಕಿಂತ ಕೆಳಗೆ, 13 ವರ್ಷಕ್ಕಿಂತ ಕೆಳಗೆ, 15 ವರ್ಷಕ್ಕಿಂತ ಕೆಳಗೆ ಎಂಬ ವಯೋಮಾನ ವಿಭಾಗದಲ್ಲಿ ಬಾಲಕ ಮತ್ತು ಬಾಲಕಿಯರಿಗೆ ಪ್ರತ್ಯೇಕ ಸ್ಪರ್ಧೆ ನಡೆಸಿ ಟ್ರೋಫಿ, ನಗದು ಬಹುಮಾನ ನೀಡಲಾಗುತ್ತದೆ. ಪ್ರಮಾಣ ಪತ್ರವನ್ನು ಎಲ್ಲ ಸ್ಪರ್ಧಾಳುಗಳಿಗೆ ನೀಡಲಾಗುತ್ತದೆ. ಮುಕ್ತ ವಿಭಾಗದಲ್ಲಿ ಆರು ಟ್ರೋಫಿ ಮತ್ತು ನಗದು ಬಹುಮಾನ ನೀಡಲಾಗುತ್ತದೆ ವಯಸ್ಸಿನ ವಿಭಾಗ ಮತ್ತು ಮುಕ್ತ ವಿಭಾಗಗಳ ಪೈಕಿ ಯಾವುದೇ ಸ್ಪರ್ಧಾಳುಗಳು ಎರಡೂ ವಿಭಾಗದಲ್ಲಿ ಆಡುವಂತಿಲ್ಲ. ಒಂದನ್ನು ಮಾತ್ರ ಆರಿಸಿಕೊಳ್ಳಲು ಅವಕಾಶಗಳಿವೆ ಎಂದರು.

ಟೂರ್ನಮೆಂಟ್‌ನಲ್ಲಿ ಒಟ್ಟು 40 ಟ್ರೋಫಿ ಹಾಗೂ 34500 ರೂ. ನಗದು ಬಹುಮಾನ ವಿತರಿಸಲಾಗುತ್ತದೆ. ಈ ಕೂಟದಲ್ಲಿ 100ಕ್ಕೂ ಅಧಿಕ ಅಂತಾರಾಷ್ಟ್ರೀಯ ದರ್ಜೆಯ ಆಟಗಾರರು ಭಾಗವಹಿಸಲಿದ್ದಾರೆ. ಎಲ್ಲ ವರ್ಗಗಳ ಸ್ಪರ್ಧಾಳುಗಳಿಗೂ 750 ರೂ. ಪ್ರವೇಶ ಶುಲ್ಕ ನಿಗದಿ ಮಾಡಲಾಗುತ್ತದೆ. ಮೇ 31ರಂದು ನೋಂದಣಿಗೆ ಅಂತಿಮ ದಿನವಾಗಿದೆ. ಸ್ಪರ್ಧಾಳುಗಳಿಗೆ ಊಟ, ಉಪಾಹಾರದ ವ್ಯವಸ್ಥೆ ಮಾಡಲಾಗುತ್ತದೆ ಎಂದರು.

ಸುದ್ದಿಗೋಷ್ಠಿಯಲ್ಲಿ ಅಕಾಡೆಮಿ ಗೌರವಾಧ್ಯಕ್ಷ ಸತ್ಯಪ್ರಸಾದ್ ಕೋಟೆ, ಕಾರ್ಯದರ್ಶಿ ಸತ್ಯನಾರಾಯಣ ಕೋಟೆ, ಖಜಾಂಚಿ ಉಮಾ ಡಿ. ಪ್ರಸನ್ನ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News