ಪುತ್ತೂರು: ಅಪಘಾತದ ಗಾಯಾಳು ಮೃತ್ಯು
Update: 2018-05-28 22:11 IST
ಪುತ್ತೂರು, ಮೇ 28: ಮಾಣಿ ಮೈಸೂರು ರಾಜ್ಯ ರಸ್ತೆಯಲ್ಲಿನ ಪುತ್ತೂರು ನಗರದ ಹೊರವಲಯದ ಮಂಜಲ್ಪಡ್ಡು ಎಂಬಲ್ಲಿ ರವಿವಾರ ನಡೆದ ಅಪಘಾತದಲ್ಲಿ ಗಂಭೀರ ಗಾಯಗೊಂಡು ಮಂಗಳೂರಿನ ಆಸ್ಪತ್ರೆಗೆ ದಾಖಲಾಗಿದ್ದ ಗಾಯಾಳು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.
ಪುತ್ತೂರು ತಾಲೂಕಿನ ಕಬಕ ಗ್ರಾಮದ ಮಂಜಲ್ಪಡ್ಪು ಗುಡ್ಡೆ ಮನೆ ಎಂಬಲಿನ ನಿವಾಸಿ ಸುರೇಶ (52) ಮೃತಪಟ್ಟವರು. ಸುರೇಶ್ ಅವರು ರವಿವಾರ ಮುಸ್ಸಂಜೆ ವೇಳೆ ರಸ್ತೆ ದಾಟುತ್ತಿದ್ದಾಗ ಪುತ್ತೂರಿನಿಂದ ಕಬಕ ಕಡೆಗೆ ತೆರಳುತ್ತಿದ್ದ ಬೈಕೊಂದು ಅವರಿಗೆ ಢಿಕ್ಕಿ ಹೊಡೆದು ಗಂಭೀರ ಗಾಯಗೊಂಡಿದ್ದರು. ಗಾಯಾಳುವನ್ನು ಪುತ್ತೂರು ಆಸ್ಪತ್ರೆಗೆ ಕರೆತಂದು ಚಿಕಿತ್ಸೆ ನೀಡಿ ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೇ ರಾತ್ರಿ 1.30ರ ಸುಮಾರಿಗೆ ಮೃತಪಟ್ಟಿದ್ದಾರೆ.
ಮೃತರ ಪುತ್ರ ಗಣೇಶ್ ನೀಡಿದ ದೂರಿನಂತೆ ನಗರ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.