×
Ad

ಗಾಳಿ, ಮಳೆಗೆ ತತ್ತರಿಸಿದ ಉಡುಪಿ, ಕಾರ್ಕಳ ತಾಲೂಕು: 183 ವಿದ್ಯುತ್ ಕಂಬ ಧರಾಶಾಹಿ

Update: 2018-05-28 22:16 IST

ಉಡುಪಿ, ಮೇ 28: ರವಿವಾರ ರಾತ್ರಿ, ಸೋಮವಾರ ಮುಂಜಾನೆ ಸುರಿದ ಭಾರಿ ಗಾಳಿ, ಸಿಡಿಲು, ಮಿಂಚು ಸಹಿತ ಮಳೆಗೆ ಉಡುಪಿ ಜಿಲ್ಲೆಯ ಕಾರ್ಕಳ ಹಾಗೂ ಉಡುಪಿ ತಾಲೂಕುಗಳಲ್ಲಿ ಭಾರೀ ಪ್ರಮಾಣದ ಹಾನಿ ಸಂಭವಿಸಿದ್ದು, ಜಿಲ್ಲೆಯಲ್ಲಿ ಒಂದೇ ದಿನ 185 ವಿದ್ಯುತ್ ಕಂಬಗಳು ಧರಾಶಾಹಿಯಾಗಿವೆ. ನೂರಾರು ಮರಗಳು ಉರುಳಿ ಬಿದ್ದಿದೆ. ಅನೇಕ ಮನೆಗಳಿಗೆ ನೀರು ನುಗ್ಗಿದೆ. ಜಿಲ್ಲೆಯ ಅಧಿಕಾಂಶ ಭಾಗಗಳಲ್ಲಿ ವಿದ್ಯುತ್ ಸಂಪರ್ಕ ಸಂಪೂರ್ಣ ವ್ಯತ್ಯಯ ವಾಗಿದೆ.

ರಾತ್ರಿ ಸುಮಾರು ಎಂಟು ಗಂಟೆ ಸುಮಾರಿಗೆ ಭಾರೀ ಗಾಳಿಯೊಂದಿಗೆ ಪ್ರಾರಂಭಗೊಂಡ ಮಳೆ, ತಡರಾತ್ರಿಯವರೆಗೆ, ಕೆಲವೆಡೆ ಇಂದು ಬೆಳಗಿನ ಜಾವದವರೆಗೂ ಧಾರಾಕಾರವಾಗಿ ಸುರಿದಿತ್ತು. ಗಾಳಿ-ಮಳೆಯೊಂದಿಗೆ ಕಾರ್ಕಳದ ಅನೇಕ ಭಾಗಗಳಲ್ಲಿ ಗುಡುಗು-ಸಿಡಿಲಿನ ಆರ್ಭಟಕ್ಕೆ ಜನತೆ ನಡುಗಿ ಹೋಗುವಂತಾಗಿತ್ತು. ಸಿಡಿಲು ಮತ್ತು ಮಳೆ ಕಾರ್ಕಳದ ಮಿಯಾರು, ಸಾಣೂರು, ಬೋಳಾ ಕಸಬಾ ಗಾ್ರಮಗಳಲ್ಲಿ ವ್ಯಾಪಕ ಹಾನಿ ನಡೆಸಿದೆ.

ಉಡುಪಿ ನಗರದಲ್ಲಿ: ಉಡುಪಿ ನಗರದ ಶ್ರೀಕೃಷ್ಣ ಮಠ ಪರಿಸರದ ತೆಂಕಪೇಟೆ, ಬಡಗುಪೇಟೆ ಯಲ್ಲಿ ನೆರೆ ಬಂದಿದೆ. ಮಠದ ರಥಬೀದಿ, ಬಡಗುಪೇಟೆಯ ಕಾಳಿಂಗ ರಾವ್, ಮುಕುಂದ ಕೃಪಾ ರಸ್ತೆಗಳು ಜಲಾವೃತಗೊಂಡಿತ್ತು. ಮನೆಗಳಿಗೂ ನೀರು ನುಗ್ಗಿದೆ. ಬನ್ನಂಜೆ, ಶಿರಿಬೀಡುವಿನಲ್ಲಿ ಮೂರ್ನಾಲ್ಕು ಅಡಿಗಳಷ್ಟು ನೀರು ರಸ್ತೆಯಿಂದ ಮೇಲಕ್ಕೆ ಹರಿದಿದೆ. ಇದಕ್ಕೆ ಸಮರ್ಪಕ ತೋಡಿನ ವ್ಯವಸ್ಥೆ ಇಲ್ಲದಿರುವುದೇ ಕಾರಣ ಎಂದು ವಾರ್ಡ್‌ನ ನಿವಾಸಿಗಳು ದೂರಿದ್ದಾರೆ.

 ರಾತ್ರಿ ಹಠಾತ್ತನೆ ಸುರಿದ ಮಳೆ-ಗಾಳಿಗೆ ನೂರಾರು ವಾಹನ ಸವಾರರು ತೊಂದರೆಗೆ ಸಿಲುಕಿದ್ದು, ನಗರದ ಪ್ರಮುಖ ರಸ್ತೆಗಳಲ್ಲಿ ಸಂಚಾರ ವ್ಯವಸ್ಥೆ ಅಸ್ತವ್ಯಸ್ತಗೊಂಡಿತ್ತು. ನಿಟ್ಟೂರಿನ ಲೀಲಾ ಬಾಯಿ, ಕೊಡವೂರಿನ ಕೆ. ವಿಟ್ಠಲ್ ಅವರ ಮನೆ ಮೇಲೆ ಭಾರಿ ಗಾತ್ರದ ಮರ ಬಿದ್ದು ಅಪಾರ ಪ್ರಮಾಣದ ಹಾನಿಯಾಗಿದ್ದು, ಅವರ ಮನೆಗಳಿಗೆ ಶಾಸಕ ಕೆ. ರಘುಪತಿ ಭಟ್ ಅವರು ಭೇಟಿ ನೀಡಿ ಪರಿಶೀಲಿಸಿದ್ದು, ಪರಿಹಾರ ದೊರಕಿಸಿಕೊಡುವ ಭರವಸೆ ನೀಡಿದ್ದಾರೆ.

ಮಣಿಪಾಲದ ಈಶ್ವರನಗರ, ಮಂಚಿ, ಅಂಬಾಗಿಲು ಪೆರಂಪಳ್ಳಿ, ದೊಡ್ಡಣಗುಡ್ಡೆ ಭಾಗದಲ್ಲಿ ರಸ್ತೆ ಬದಿಯ ಬೃಹತ್ ಮರಗಳು ನೆಲಕ್ಕುರುಳಿವೆ. ವಿದ್ಯುತ್ ತಂತಿ, ಕಂಬಗಳ ಮೇಲೆಯೇ ಮರ ಉರುಳಿದ್ದು, ಮೆಸ್ಕಾಂಗೆ ಅಪಾರ ಪ್ರಮಾಣದಲ್ಲಿ ಹಾನಿಯಾಗಿದೆ. ಮಂಚಿಯಲ್ಲಿ ಮರ ಬಿದ್ದು ವಾಹನಗಳಿಗೂ ಹಾನಿಯುಂಟಾಗಿದೆ. ಅಲ್ಲಲ್ಲಿ ರಸ್ತೆ ಸಂಚಾರ, ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಿದೆ. ಮೆಸ್ಕಾಂ ಅಧಿಕಾರಿ/ಸಿಬಂದಿಗಳು ಸ್ಥಳೀಯರ ಸಹಕಾರ ದಿಂದ ಮರಗಳನ್ನು ತೆರವುಗೊಳಿಸಲು ಶ್ರಮಿಸುತ್ತಿರುವುದು ಕಂಡುಬಂತು. ಉಡುಪಿ ನಗರದ 2 ಸೆಕ್ಟರ್‌ಗಳ ಭಾಗದಲ್ಲಿ 18 ಕಂಬಗಳು ಮುರಿದು ಬಿದ್ದು ಹಾನಿಯಾಗಿದೆ. ಅಂಬಾಗಿಲಿನಲ್ಲಿ ಸುಮಾರು 29 ಕಂಬಗಳು ಧರೆಗುರುಳಿವೆ ಮೆಸ್ಕಾಂ ಮೂಲಗಳು ತಿಳಿಸಿವೆ. ನಗರದ ಅನೇಕ ಭಾಗಗಳಿಗೆ ಇಂದು ಅಪರಾಹ್ನದವರೆಗೆ ವಿದ್ಯುತ್ ಸಂಪರ್ಕ ಪುನರಾರಂಭಗೊಂಡಿರಲಿಲ್ಲ.

ಉದ್ಯಾವರ ಪಡುಕೆರೆಯ ಬೇಬಿ ಕುಂದರ್ ಎಂಬವರ ಮನೆಗೆ ತೆಂಗಿನ ಮರ ಬಿದ್ದು ಮನೆ ತೀವ್ರ ಹಾನಿಯಾಗಿದ್ದು, 85,000ರೂ. ನಷ್ಟದ ಅಂದಾಜು ಮಾಡಲಾ ಗಿದೆ. ಪಡುಕೆರೆಯ ತುಕ್ರ ಪೂಜಾರ್ತಿಯವರ ಮನೆಯ ತಗಡು ಶೀಟು ಗಾಳಿಯ ರಭಸಕ್ಕೆ ಹಾರಿ ಹೋಗಿ 20,000ರೂ. ನಷ್ಟವಾಗಿದೆ.
ಮಣಿಪಾಲ ಈಶ್ವರನಗರ ಮುಖ್ಯರಸ್ತೆಯಲ್ಲಿ ರಾತ್ರಿ ಸುರಿದ ಭಾರಿ ಗಾಳಿ ಮಳೆಯ ಪರಿಣಾಮ ದೊಡ್ಡ ಮರವೊಂದು ಎಲೆಕ್ಟ್ರಿಕ್ ತಂತಿಗಳ ಮೇಲೆ ಬುಡ ಸಮೇತ ಉರುಳಿ ಎಲೆಕ್ಟ್ರಿಕ್ ಕಂಬಗಳು ಮುರಿದು ರಸ್ತೆ ಮದ್ಯದಲ್ಲಿ ಬಿದ್ದು ರಸ್ತೆ ಸಂಚಾರ ಮತ್ತು ವಿದ್ಯುತ್ ಸರಬರಾಜು ವ್ಯತ್ಯಯ ಗೊಂಡಿತು. ದೊಡ್ಡಣಗುಡ್ಡೆ, ಬ್ರಹ್ಮಗಿರಿಯಲ್ಲಿ ಬೃಹತ್ ಮರಗಳು ವಿದ್ಯುತ್ ಕಂಬಗಳ ಮೇಲೆ ಬಿದ್ದು ಸಾಕಷ್ಟು ಹಾನಿಯಾಗಿದೆ.

ಮೊದಲ ದಿನವೇ ಮಕ್ಕಳಿಗೆ ಸಮಸ್ಯೆ: ಬೇಸಿಗೆ ರಜೆಯ ಕಳೆದು ಸೋಮವಾರ ಸರಕಾರಿ ಪ್ರಾಥಮಿಕ ಹಾಗೂ ಪ್ರೌಢ ಶಾಲೆಗಳು ಇಂದು ಪುನರಾರಂಭ ಗೊಂಡಿದ್ದು, ನಿನ್ನೆ ಸುರಿದ ಮಳೆಯಿಂದ ಮೊದಲೇ ದಿನವೇ ಶಾಲೆಗೆ ಬರಲು ವಿ್ಯಾರ್ಥಿಗಳು ಪರದಾಡುವಂತಾಯಿತು.

ಹೆಚ್ಚಿನ ಕಡೆಗಳಲ್ಲಿ ಪೋಷಕರು ಮಕ್ಕಳನ್ನು ಶಾಲೆಗೆ ಕಳುಹಿಸಲಿಲ್ಲ. ಗ್ರಾಮೀಣ ಭಾಗದ ಪ್ರಮುಖ ರಸ್ತೆಗಳಲ್ಲಿ ಮರಗಳು ಬಿದ್ದಿರುವುದು, ಚರಂಡಿ ತುಂಬಿ ರಸ್ತೆ ಮೇಲೆ ನೀರು ನಿಂತಿರುವುದು ಕಂಡುಬಂತು ಇದರಿಂದ ಮಕ್ಕಳು ಶಾಲೆಗೆ ತೆರಳಲು ಸಮಸ್ಯೆಯಾಯಿತು. ಜಿಲ್ಲೆಯಲ್ಲಿ ಸುರಿದ ವ್ಯಾಪಕ ಮಳೆಯಿಂದಾಗಿ ನದಿ, ಕೆರೆಗಳು ತುಂಬಿ, ತೋಡುಗಳಲ್ಲಿ ನೀರು ತುಂಬಿ ಹರಿಯುತ್ತಿವೆ. ತಗ್ಗು ಪ್ರದೇಶ, ಗದ್ದೆಗಳಲ್ಲಿ ನೀರು ನಿಂತಿದ್ದು, ಅಲ್ಲಲ್ಲಿ ಕೃತಕ ನೆರೆ ಸೃಷ್ಟಿಯಾಗಿದೆ.

ಮೆಸ್ಕಾಂಗೆ ಭಾರೀ ನಷ್ಟ
ಉಡುಪಿ ಮತ್ತು ಕಾರ್ಕಳ ತಾಲೂಕಿನಾದ್ಯಂತ ನಿನ್ನೆ ಭಾರೀ ಗಾಳಿಯೊಂದಿಗೆ ಸುರಿದ ಮಳೆಯಿಂದಾಗಿ ಮೆಸ್ಕಾಂ ಇಲಾಖೆ ಅಪಾರ ಪ್ರಮಾಣದ ನಷ್ಟ ಅನುಭವಿಸಿದೆ.ಜಿಲ್ಲೆಯಲ್ಲಿ ನಿನ್ನೆ ಒಂದೇ ದಿನ 183 ತಂತಿ ಕಂಬಗಳು ನೆಲಕ್ಕುರುಳಿವೆ ಎಂದು ಮೆಸ್ಕಾಂ ಅಧಿಕಾರಿಯೊಬ್ಬರು ತಿಳಿಸಿದರು. ತಂತಿಗಳು ತುಂಡಾಗಿ ಬಿದ್ದಿದ್ದು, ಇನ್ಸುಲೇಟರ್‌ಗಳಿಗೆ ಹಾನಿಯಾಗಿದೆ. ಹೀಗಾಗಿ ಹೆಚ್ಚಿನ ಕಡೆಗಳಲ್ಲಿ ನಿನ್ನೆ ರಾತ್ರಿಯಿಂದ ವಿದ್ಯುತ್ ವ್ಯತ್ಯಯ ಉಂಟಾಗಿದೆ. 
ಹೆಬ್ರಿ, ಕಾರ್ಕಳ, ಉಡುಪಿ ಸುತ್ತಮುತ್ತ ಈ ಹಾನಿ ಹೆಚ್ಚಿನ ಪ್ರಮಾಣದಲ್ಲಿ ಕಂಡುಬಂದಿದೆ. ಹಾನಿಗೊಂಡ ಇನ್ಸುಲೇಟರ್‌ಗಳನ್ನು ಪತ್ತೆ ಹಚ್ಚುವುದು ಕಷ್ಟದ ಕೆಲಸವಾಗಿದ್ದು, ಪ್ರತಿ ಕಂಬವನ್ನು ಪರಿಶೀಲಿಸಿ ಬದಲೀ ವ್ಯವಸ್ಥೆ ಮಾಡ ಬೇಕಾಗಿದೆ. ಯಥಾಸ್ಥಿತಿಗೆ ಮರಳು ಸಮಯ ತೆಗೆದುಕೊಳ್ಳತ್ತದೆ ಎಂದು ಅಧಿಕಾರಿ ವಿವರಿಸಿದರು.

ಜಿಲ್ಲೆಯಲ್ಲಿ 34.3ಮಿ.ಮೀ. ಮಳೆ
ಉಡುಪಿ ಜಿಲ್ಲೆಯಲ್ಲಿ ಕಳೆದ 24 ಗಂಟೆಗಳ ಅವಧಿಯಲ್ಲಿ ಸರಾಸರಿ 34.3 ಮಿ.ಮೀ ಮಳೆ ಸುರಿದ ಬಗ್ಗೆ ವರದಿಯಾಗಿದೆ. ಉಡುಪಿಯಲ್ಲಿ ಅತ್ಯಧಿಕ 42.7ಮಿ.ಮೀ. ಮಳೆಯಾದರೆ, ಕಾರ್ಕಳದಲ್ಲಿ 33.5ಮಿ.ಮೀ. ಹಾಗೂ ಕುಂದಾಪುರದಲ್ಲಿ 26.8ಮಿ.ಮೀ. ಮಳೆ ಸುರಿದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News