ದಡ್ಡಲಕಾಡು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವಿನೂತನ "ಶಾಲಾ ಆರಂಭೋತ್ಸವ"
ಬಂಟ್ವಾಳ, ಮೇ 29: "ಎಲ್ಲರೂ ಕಲಿಯೋಣ, ಎಲ್ಲರೂ ಬೆಳೆಯೋಣ", "ಒಂದೇ ದೇಶ-ಒಂದೇ ಶಿಕ್ಷಣ", "ಜೀವನವೇ ಪುಸ್ತಕ-ಕಾಲವೇ ಶಿಕ್ಷಕ-ಜ್ಞಾನವೇ ರಕ್ಷಕ", "ಶಿಕ್ಷಣಕ್ಕೆ ಕರೆ-ನೀನಾಗು ದೊರೆ", "ಶಿಕ್ಷಣವೇ ಶಕ್ತಿ" ಎಂಬಿತ್ಯಾದಿ ಶಿಕ್ಷಣದ ಮಹತ್ವ ಸಾರುವ ಪ್ಲೇಕಾರ್ಡ್‌ಗಳು ಹಾಗೂ ಘೋಷಣೆಗಳು ದಡ್ಡಲಕಾಡು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆರಂಭೋತ್ಸವದಲ್ಲಿ ಕಂಡುಬಂತು.
ಮಂಗಳವಾರ ಬಂಟ್ವಾಳ ತಾಲೂಕುಮಟ್ಟದ ಶಾಲಾ ಆರಂಭೋತ್ಸವದ ಹಿನ್ನೆಲೆಯಲ್ಲಿ ದಡ್ಡಲಕಾಡು ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ಆರಂಭೋತ್ಸವ ವನ್ನು ಭಾರೀ ವಿಜೃಂಭನೆಯಿಂದ ವಿನೂತನ ರೀತಿಯಲ್ಲಿ ಆಚರಿಸಲಾಯಿತು. ಬೆಳಿಗ್ಗೆ ಇಲ್ಲಿನ ದೇವಿ ಸಾನಿಧ್ಯದಲ್ಲಿ ವಿಶೇಷ ಪೂಜೆ ಸಲ್ಲಿಸಿ ಬಳಿಕ ಎಸ್‌ಡಿಎಂಸಿ ಅಧ್ಯಕ್ಷ ರಾಮಚಂದ್ರ ಕರೆಂಕಿ ಅವರು ಕಲಶವನ್ನು ವಿದ್ಯಾರ್ಥಿಗೆ ಹಸ್ತಾಂತರಿಸುವ ಮೂಲಕ ಮೆರವಣಿಗೆಗೆ ಚಾಲನೆ ನೀಡಿದರು. ಕರೆಂಕಿ ಶ್ರೀ ದುರ್ಗಾಪರಮೇಶ್ವರೀ ದೇವಿ ದೇವಸ್ಥಾನದಿಂದ ಶಾಲೆಯವರೆಗೆ ವೈಭವದ ಮೆರವಣಿಗೆ ನಡೆಯಿತು.
ಗೊಂಬೆ ಕುಣಿತ ಹಾಗೂ ಬಣ್ಣ ಬಣ್ಣದ ರಾಜಛತ್ರಿಗಳನ್ನು ಹಿಡಿದು, ಮೇಲಿನ ಘೋಷಣೆಗಳನ್ನು ಕೂಗುತ್ತಾ ವಿದ್ಯಾರ್ಥಿಗಳು ಹೆಜ್ಜೆಹಾಕಿದರು.
ಶಾಲಾ ವಿದ್ಯಾರ್ಥಿಗಳು ಸೇರಿದಂತೆ ವಿದ್ಯಾರ್ಥಿಗಳ ಪೋಷಕರು, ದುರ್ಗಾ ಫ್ರೆಂಡ್ಸ್ ಕ್ಲಬ್ ಸದಸ್ಯರು, ಶಿಕ್ಷಕರು ಹಾಗೂ ಎಸ್‌ಡಿಎಂಸಿ ಸದಸ್ಯರು ಮೆರವಣಿಗೆಯಲ್ಲಿ ವಿದ್ಯಾರ್ಥಿಗಳೊಂದಿಗೆ ಸಾಥ್ ನೀಡಿದರು.
ನಂತರ ವಿದ್ಯಾರ್ಥಿಗಳ ಪೋಷಕರು ಶಾಲೆಗೆ ಹಸಿರು ಹೊರಕಾಣಿಕೆ ಸಮರ್ಪಿಸಿದರು. ಮೆರವಣಿಗೆಯಲ್ಲಿ ಸಾಗಿ ಬಂದ ವಿದ್ಯಾರ್ಥಿಗಳಿಗೆ ಸಿಹಿ ತಿನಿಸು ಕೊಟ್ಟು ಶಿಕ್ಷಣಾಧಿಕಾರಿ ಶಿವಪ್ರಕಾಶ್ ಶಾಲೆಗೆ ಸ್ವಾಗತಿಸಿಕೊಂಡರೆ, ಬಳಿಕ ಎಲ್ಲಾ ವಿದ್ಯಾರ್ಥಿಗಳಿಗೂ ಸಿಹಿ ಹಾಗೂ ಕಷಾಯ ನೀಡಲಾಯಿತು. ಸಭಾ ಕಾರ್ಯಕ್ರಮದ ಬಳಿಕ ಎಲ್ಲರೂ ಪಾಯಸದೂಟ ಸವಿದರು.
ಸಭಾ ಕಾರ್ಯಕ್ರಮದ ವೇದಿಕೆಯಲ್ಲಿ ಜಿಪಂ ಸದಸ್ಯ ತುಂಗಪ್ಪ ಬಂಗೇರ, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ರಾಮಚಂದ್ರ ಕರೆಂಕಿ, ಉಪಾಧ್ಯಕ್ಷೆ ಚಿತ್ರಾಕ್ಷಿ, ಪಂಜಿಕಲ್ಲು ಗ್ರಾಪಂ ಅಧ್ಯಕ್ಷೆ ಸುಮಿತ್ರಾ ಯೋಗೀಶ್ ಕುಲಾಲ್, ಶ್ರೀ.ಕ್ಷೇ.ಧ.ಗ್ರಾ.ಯೋ. ರಮೇಶ್, ಪಂಚಾಯತ್
ಸದಸ್ಯರಾದ ಪೂವಪ್ಪ ಮೆಂಡನ್, ರೂಪಾಶ್ರೀ, ಪತ್ರಕರ್ತ ಹರೀಶ್ ಮಾಂಬಾಡಿ ಹಾಜರಿದ್ದರು. ಮುಖ್ಯ ಶಿಕ್ಷಕ ಮೌರೀಸ್ ಸ್ವಾಗತಿಸಿ, ಶಿಕ್ಷಕಿ ಅನಿತಾ ವಂದಿಸಿದರು. ನಿರೂಪಿಸಿದರು. ಬಳಿಕ ವಿದ್ಯಾರ್ಥಿಗಳಿಗೆ ಪುಸ್ತಕಗಳನ್ನು ವಿತರಿಸಲಾಯಿತು.
ದಡ್ಡಲಕಾಡು ಶಾಲೆಯಲ್ಲಿ ಆದ ಪ್ರಯೋಗದ ಬಳಿಕ ತಾಲೂಕಿನ ಅನೇಕ ಸರಕಾರಿ ಶಾಲೆಗಳು ವರ್ಷದಿಂದ ವರ್ಷಕ್ಕೆ ಅಭಿವೃದ್ಧಿಯಾಗುತ್ತಿದೆ. ದಡ್ಡಲಕಾಡು ಶಾಲೆಗೆ ದೈಹಿಕ ಶಿಕ್ಷಕರ ಹುದ್ದೆಯನ್ನು ಮಂಜೂರುಗೊಳಿಸಲಾಗಿದ್ದು, ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚುತ್ತಿದ್ದಂತೆಯೇ ಶಿಕ್ಷಕರನ್ನು ಸರಕಾರ ನೇಮಿಸುತ್ತದೆ.
- ಶಿವಪ್ರಕಾಶ್, ಕ್ಷೇತ್ರ ಶಿಕ್ಷಾಣಾಧಿಕಾರಿ
ಶಾಲೆ ಎನ್ನುವುದು ಸರ್ವಧರ್ಮದ ದೇಗುಲ. ಶಾಲೆ ಅಭಿವೃದ್ಧಿ ಆಗಬೇಕಾದರೆ ಊರಿನ ಜನರ ಸಹಕಾರ ಅಗತ್ಯ. ಇದರಿಂದ ದಡ್ಡಲಕಾಡು ಶಾಲೆಯು ಪ್ರಾಯೋಗಿಕವಾಗಿ ಅಭಿವೃದ್ಧಿ ಹೊಂದಿದ್ದು, ಇತರ ಸರಕಾರಿ ಶಾಲೆಗಳಿಗೆ ಮಾದರಿಯಾಗಲಿಚ್ವ.
- ಪ್ರಕಾಶ್‌ಅಂಚನ್, ಅಧ್ಯಕ್ಷರು , ದುರ್ಗಾ ಫ್ರೆಂಡ್ಸ್ ಕ್ಲಬ್