ಖಾಸಗಿ ವಾಹನದಲ್ಲಿ ಇವಿಎಂ ಸಾಗಾಟ; ದೂರು ದಾಖಲು

Update: 2018-05-29 15:02 GMT
ಸಾಂದರ್ಭಿಕ ಚಿತ್ರ

ಪಾಲ್ಗಡ್, ಮೇ 29: ಸೋಮವಾರದಂದು ಪಾಲ್ಗಡ್ ಲೋಕಸಭಾ ಉಪಚುನಾವಣೆಗೆ ಮತದಾನ ಕೊನೆಯಾದ ನಂತರ ಚುನಾವಣಾ ಅಧಿಕಾರಿಯೊಬ್ಬರು ಕೆಲವು ಇವಿಎಂ ಯಂತ್ರಗಳನ್ನು ಖಾಸಗಿ ವಾಹನಗಳಲ್ಲಿ ಮತ ಎಣಿಕೆ ಕೇಂದ್ರಗಳಿಗೆ ಸಾಗಿಸಿದ್ದಾರೆ ಎಂದು ಅಧಿಕಾರಿಯೊಬ್ಬರು ಆರೋಪಿಸಿದ್ದಾರೆ.

ಆರೋಪಿ ಅಧಿಕಾರಿಯ ವಿರುದ್ಧ ಎಫ್‌ಐಆರ್ ದಾಖಲಿಸಿರುವುದಾಗಿ ಪಾಲ್ಗಡ್‌ನ ಜಿಲ್ಲಾಯುಕ್ತ ಪ್ರಶಾಂತ್ ನರ್ನವರೆ ತಿಳಿಸಿದ್ದಾರೆ. ನಿಯಮದ ಪ್ರಕಾರ ಮತದಾನ ಮುಗಿದ ನಂತರ ಸರಕಾರಿ ವಾಹನದಲ್ಲಿ ಇವಿಎಂ ಯಂತ್ರಗಳನ್ನು ಮತ ಎಣಿಕೆ ಕೇಂದ್ರಗಳಿಗೆ ಸಾಗಿಸಬೇಕು. ದಹನು ತೆಹ್ಸಿಲ್‌ನ ಚಿಂಚನಿ ಮತದಾನ ಕೇಂದ್ರದ ಬೂತ್ ಸಂಖ್ಯೆ 17ರ ಇವಿಎಂ ಯಂತ್ರಗಳನ್ನು ಇಬ್ಬರು ಅಧಿಕಾರಿಗಳು ಸರಕಾರಿ ವಾಹನಗಳ ಬದಲು ಖಾಸಗಿ ಕಾರಿನಲ್ಲಿ ಮತ ಎಣಿಕೆ ಕೇಂದ್ರಕ್ಕೆ ಸಾಗಿಸಿದ್ದಾರೆ ಎಂದು ದೂರಲಾಗಿದೆ.

ಕೆಲವು ಗ್ರಾಮಸ್ಥರು ಕಾರನ್ನು ತಡೆದು ಅಧಿಕಾರಿಗಳನ್ನು ಪ್ರಶ್ನಿಸಿದ್ದಾರೆ. ನಂತರ ಪೊಲೀಸರನ್ನು ಸ್ಥಳಕ್ಕೆ ಕರೆಸಲಾಗಿದ್ದು ಅವರು ಚುನಾವಣಾ ಸಿಬ್ಬಂದಿಯನ್ನು ಹಾಗೂ ಇವಿಎಂ ಯಂತ್ರಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ ಎಂದು ವರದಿಗಳು ತಿಳಿಸಿವೆ. ಈ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News