ಪ್ರತಿಭಟನೆಯ ಸಂಕೇತವಾಗಿ ರಸ್ತೆಗಳಲ್ಲಿ ತ್ಯಾಜ್ಯ ಎಸೆತ: ತೀವ್ರ ಅಸಮಾಧಾನ ವ್ಯಕ್ತಪಡಿಸಿದ ದಿಲ್ಲಿ ಹೈಕೋರ್ಟ್

Update: 2018-05-29 15:15 GMT

ಹೊಸದಿಲ್ಲಿ,ಮೇ 29: ಪ್ರತಿಭಟನೆಯ ಅಂಗವಾಗಿ ರಸ್ತೆಯಲ್ಲಿ ತ್ಯಾಜ್ಯವನ್ನು ರಾಶಿ ಹಾಕುವ ಕೆಟ್ಟ ಚಾಳಿಯ ಬಗ್ಗೆ ತೀವ್ರ ಅಸಮಾಧಾನವನ್ನು ವ್ಯಕ್ತಪಡಿಸಿರುವ ದಿಲ್ಲಿ ಉಚ್ಚ ನ್ಯಾಯಾಲಯವು,ಇದು ಸಂಪೂರ್ಣವಾಗಿ ಅಸಹನೀಯವಾಗಿದೆ ಎಂದು ಹೇಳಿದೆ.

ತಮ್ಮ ಉದ್ಯೋಗಗಳ ಖಾಯಮಾತಿ ಮತ್ತು ಹೆಚ್ಚಿನ ವೇತನದ ಬೇಡಿಕೆಯನ್ನು ಮುಂದಿರಿಸಿಕೊಂಡು ಪ್ರಮುಖ ಕಟ್ಟಡಗಳ ಎದುರು ತ್ಯಾಜ್ಯಗಳನ್ನು ರಾಶಿ ಹಾಕಿದ್ದ ಹೊಸದಿಲ್ಲಿ ನಗರಸಭೆ(ಎನ್‌ಡಿಎಮ್‌ಸಿ)ಯ ಸ್ವಚ್ಛತಾ ಸಿಬ್ಬಂದಿಗಳ ಇತ್ತೀಚಿನ ಪ್ರತಿಭಟನೆಯನ್ನು ಪ್ರಸ್ತಾಪಿಸಿದ ಪ್ರಭಾರ ಮುಖ್ಯ ನ್ಯಾಯಮೂರ್ತಿ ಗೀತಾ ಮಿತ್ತಲ್ ಮತ್ತು ನ್ಯಾ.ಸಿ.ಹರಿಶಂಕರ ಅವರ ಪೀಠವು,ಇದು ಪ್ರತಿಭಟಿಸುವ ರೀತಿಯಲ್ಲ. ಇದು ಸಂಪೂರ್ಣವಾಗಿ ಅಸಹನೀಯವಾಗಿದೆ. ಅಲ್ಲದೆ ಇದು ಸಾರ್ವಜನಿಕ ಆರೋಗ್ಯದ ವಿಷಯವೂ ಆಗಿದೆ ಎಂದು ಹೇಳಿತು.

ಮುಷ್ಕರದ ಸಂದರ್ಭದಲ್ಲಿ ಕಾರ್ಮಿಕರು ಹಾಕಿದ್ದ ತ್ಯಾಜ್ಯದ ರಾಶಿಗಳಿಂದ ಕೆಲವು ಪ್ರದೇಶಗಳಲ್ಲಿ ವಾಹನಗಳ ಸಂಚಾರಕ್ಕೆ ವ್ಯತ್ಯಯವುಂಟಾಗಿತ್ತು.

ನಗರಸಭೆಯ ಸಿಬ್ಬಂದಿ ಈ ರೀತಿಯಲ್ಲಿ ಪ್ರತಿಭಟನೆ ನಡೆಸಿದ್ದು, ಇದೇ ಮೊದಲ ಬಾರಿಯೇನಲ್ಲ. ಕೆಲವು ವರ್ಷಗಳ ಹಿಂದೆ ತಮ್ಮ ಹಲವಾರು ಬೇಡಿಕೆಗಳನ್ನು ಮುಂದಿರಿಸಿಕೊಂಡು ಪ್ರತಿಭಟನೆಗಿಳಿದಿದ್ದ ಪೂರ್ವ ದಿಲ್ಲಿ ಮಹಾನಗರ ಪಾಲಿಕೆಯ ಸ್ವಚ್ಛತಾ ಸಿಬ್ಬಂದಿಗಳು ಇದೇ ರೀತಿಯಲ್ಲಿ ತ್ಯಾಜ್ಯಗಳನ್ನು ರಸ್ತೆಗಳಲ್ಲಿ ಸುರಿದಿದ್ದರು. ಮಹಾನಗರ ಪಾಲಿಕೆಯು ತಾತ್ಕಾಲಿಕವಾಗಿ ನೇಮಿಸಿಕೊಂಡಿದ್ದ ಸ್ವಚ್ಛತಾ ಸಿಬ್ಬಂದಿ ಕಾರ್ಯಕ್ಕೂ ಅವರು ತಡೆಯೊಡ್ಡಿದ್ದರು. ಈ ಪ್ರದೇಶಗಳಲ್ಲಿ ಸ್ವಚ್ಛತೆಯನ್ನು ಕಾಯ್ದುಕೊಳ್ಳಲು ದಿಲ್ಲಿ ಉಚ್ಚ ನ್ಯಾಯಾಲಯವು ಹಸ್ತಕ್ಷೇಪ ಮಾಡಬೇಕಾಗಿ ಬಂದಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News