ಮಕ್ಕಳ ಕಳ್ಳರೆಂದು ಶಂಕಿಸಿ 15 ಮಂದಿಗೆ ಹಲ್ಲೆ
ಭುವನೇಶ್ವರ, ಮೇ 30: ಕಳೆದ ಮೂರು ದಿನಗಳಿಂದ ರಾಜ್ಯದಾದ್ಯಂತ ಮಕ್ಕಳ ಅಪಹರಣಕಾರರು ಎಂಬ ಶಂಕೆಯಿಂದ ವಿವಿಧ ಘಟನೆಗಳಲ್ಲಿ ಒಟ್ಟು 15 ಜನರ ಮೇಲೆ ಹಲ್ಲೆ ನಡೆಸಲಾಗಿದೆ.
ಫೇಸ್ ಬುಕ್ ಹಾಗೂ ವ್ಯಾಟ್ಸ್ ಆ್ಯಪ್‌ನಂತಹ ಸಾಮಾಜಿಕ ಜಾಲತಾಣಗಳಲ್ಲಿ ಮಕ್ಕಳ ಅಪಹರಣದ ಬಗ್ಗೆ ವದಂತಿ ಹರಡಿದ ಹಿನ್ನೆಲೆಯಲ್ಲಿ ಈ ಹಲವು ಘಟನೆಗಳು ನಡೆದಿವೆ.
ಒಡಿಶಾದ ಕೊರಾಪುಟ್‌ನಲ್ಲಿ ಸೋಮವಾರ ಸಂಜೆ ಗ್ರಾಮಸ್ಥರ ಗುಂಪೊಂದು ಮಕ್ಕಳ ಅಪಹರಣಕಾರರೆಂದು ಶಂಕಿಸಿ ಇಬ್ಬರಿಗೆ ಥಳಿಸಿದೆ ಹಾಗೂ ವಾಹನವೊಂದಕ್ಕೆ ಬೆಂಕಿ ಹಚ್ಚಿದೆ. ಇದೇ ರೀತಿಯ ಇನ್ನೊಂದು ಘಟನೆ ಗಂಜಾಮ್‌ನ ಅಸ್ಕಾ ಬ್ಲಾಕ್‌ನಿಂದ ಮಂಗಳವಾರ ವರದಿಯಾಗಿದೆ. ಮಕ್ಕಳ ಅಪಹರಣಕಾರರೆಂದು ಶಂಕಿಸಿ ಇಬ್ಬರು ವ್ಯಕ್ತಿಗಳಿಗೆ ಗುಂಪೊಂದು ಥಳಿಸಿದೆ. ಇದಲ್ಲದೆ ಸೋರೋ-ಅನಂತಪುರ ರಸ್ತೆಯಲ್ಲಿ ಇದೇ ಶಂಕೆಯಲ್ಲಿ ಓರ್ವ ಮಹಿಳೆಯ ಮೇಲೆ ಹಲ್ಲೆ ಎಸಗಲಾಗಿದೆ.
ಬಾಲಸೂರಿನ ಖೈರಾ ಬ್ಲಾಕ್‌ನಲ್ಲಿ ಇದೇ ಕಾರಣಕ್ಕೆ ಸ್ಥಳೀಯ ನಿವಾಸಿಗಳು ಬಿಕ್ಷುಕನೊಬ್ಬನಿಗೆ ಥಳಿಸಿದ್ದಾರೆ. ಸೋಮವಾರ ಬೆಳಗ್ಗೆ ಗಂಜಾಮ್ ಜಿಲ್ಲೆಯ ಕುಸದೀಪ ಗ್ರಾಮದಲ್ಲಿ 25 ವರ್ಷ ವಯಸ್ಸಿನ ವ್ಯಕ್ತಿಗೆ ಗುಂಪೊಂದು ಹಲ್ಲೆ ನಡೆಸಿದೆ. ನಯಾಗಢದ ಬಸಂತಪುರದಲ್ಲಿ ಮಕ್ಕಳ ಗುಂಪಿನೊಂದಿಗೆ ಮಾತನಾಡುತ್ತಿದ್ದ ಕೌಶಲ ಅಭಿವೃದ್ಧಿ ತರಬೇತುದಾರನನ್ನು ಸ್ಥಳೀಯರು ಹೊರಗೆಳೆದು ಥಳಿಸಿದ್ದಾರೆ.
ಬೆಹ್ರಾಮ್‌ಪುರ ಪಟ್ಟಣದಲ್ಲಿ ಮಕ್ಕಳ ಅಪಹರಣಕಾರರು ಎಂದು ಶಂಕಿಸಿ ತಮಿಳುನಾಡಿನ ಏಳು ಮಂದಿ ಯುವಕರನ್ನು ಥಳಿಸಿದ ಘಟನೆ ಶನಿವಾರ ನಡೆದಿದೆ.
‘‘ಮಕ್ಕಳನ್ನು ಅಪಹರಿಸಿದ ಪ್ರಕರಣಗಳಾಗಲಿ, ಅಂತಹ ಗ್ಯಾಂಗ್ ಆಗಲಿ ಇಲ್ಲ. ಆದುದರಿಂದ ಜನರು ಫೇಸ್‌ಬುಕ್ ಹಾಗೂ ವ್ಯಾಟ್ಸ್ ಆ್ಯಪ್‌ನ ದೃಡೀಕರಿಸದ ವರದಿ ನಂಬಬಾರದು. ಅದು ಕೇವಲ ವದಂತಿ ಮಾತ್ರ.’’ ಎಂದು ಈ ಹಿಂದೆ ಡಿಜಿಪಿ ಆರ್.ಪಿ. ಶರ್ಮಾ ಸಲಹೆ ನೀಡಿದ್ದರು.