×
Ad

ನೆತ್ತಿಲಪವಿನಲ್ಲಿ ಮನೆಯ ಮಾಡು ಕುಸಿತ, ಕಡಿದು ಬಿದ್ದ ವಿದ್ಯುತ್ ತಂತಿ, ಬಿರುಸುಗೊಂಡ ಸಮುದ್ರ

Update: 2018-05-29 21:08 IST

ಉಳ್ಳಾಲ, ಮೇ 29: ಕಳೆದ ಎರಡು ದಿನಗಳಿಂದ ಸುರಿಯುತ್ತಿರುವ ಭಾರೀ ಗಾಳಿ ಮಳೆಗೆ ಉಳ್ಳಾಲದಾದ್ಯಂತ ಅಲ್ಲಲ್ಲಿ ಹಾನಿ ಸಂಭವಿಸಿದೆ ಹಾಗೂ ಕೆಲವೆಡೆ ವಾಹನ ಸಂಚಾರಕ್ಕೆ ತೊಡಕುಂಟಾಗಿದೆ.

ಮನೆಯ ಮಾಡು ಕುಸಿತ:

ನರಿಂಗಾನ ಸಮೀಪದ ನೆತ್ತಿಲಪದವು ನವಗ್ರಾಮ ಸೈಟ್‌ನ ಮನೆಯೊಂದರ ಮಾಡು ಕುಸಿದು ಮನೆ ಜಖಂಗೊಂಡಿರುವ ಘಟನೆ ನಡೆದಿದೆ. ನವಗ್ರಾಮ ಸೈಟ್‌ನ ಸೆಫಿಯಾ ಎಂಬವರ ಮನೆಯ ಮಾಡು ಸೋಮವಾರ ರಾತ್ರಿ ಕುಸಿದು ಬಿದ್ದಿದ್ದು ಮನೆಮಂದಿಅದೃಷ್ಟವಶಾತ್ ಪಾರಾಗಿದ್ದಾರೆ. ಮಾಡು ಕುಸಿತದಿಂದ ಸುಮಾರು 50 ಸಾವಿರ ನಷ್ಟ ಸಂಭವಿಸಿದೆ ಎಂದು ಅಂದಾಜಿಸಲಾಗಿದೆ.

ಕಡಿದು ಬಿದ್ದ ವಿದ್ಯುತ್ ತಂತಿ:

ನೆತ್ತಿಲಪದವು ಸಮೀಪದ ನೆತ್ತಿಲಕೋಡಿ ಹಾಗೂ ಕೊಲ್ಲರಕೋಡಿ ಶಾಲೆಯ ಬಳಿ ಮಂಗಳವಾರದಂದು ಸುರಿದ ಗಾಳಿ ಮಳೆಗೆ ಮರದ ಕೊಂಬೆ ಮುರಿದು ಬಿದ್ದು ವಿದ್ಯುತ್ ತಂತಿ ಕಡಿದು ಬಿದ್ದ ಘಟನೆ ನಡೆದಿದ್ದು, ಬಳಿಕ ಸ್ಥಳೀಯರು ಕೂಡಲೇ ಮೆಸ್ಕಾಂಗೆ ಮಾಹಿತಿ ನೀಡಿದ್ದು ನಂತರ ಮೆಸ್ಕಾರ ಸಿಬ್ಬಂದಿಗಳು ಬಂದು ತಂತಿಯನ್ನು ಜೋಡಿಸುವ ಕೆಲಸ ಮಾಡುತಿದ್ದಾರೆ.

ಅಂಬ್ಲಮೊಗರು ಗ್ರಾಮದ ಮದಕ ಬಳಿ ನೂತನ ಸೇತುವೆ ಕಾಮಗಾರಿ ನಡೆಯುತ್ತಿದ್ದು ಈ ಪ್ರದೇಶದಲ್ಲಿ ನೀರು ತುಂಬಿದ ಪರಿಣಾಮ ವಾಹನ ಸಂಚಾರಕ್ಕೆ ತೊಡಕುಂಟಾಯಿತು. ಅಲ್ಲದೆ ಬೆಳ್ಮ ರೆಂಜಾಡಿ ಬಳಿಯಲ್ಲಿ ಬಳಿ ಮನೆಯೊಂದಕ್ಕೆ ರಸ್ತೆ ಕಾಮಗಾರಿಯ ಸಮಸ್ಯೆಯಿಂದಾಗಿ ರಸ್ತೆಯ ನೀರು ಮನೆಯೊಳಗೆ ನುಗ್ಗಿ ಸಮಸ್ಯೆಯುಂಟಾದ ಘಟನೆಯೂ ನಡೆದಿದೆ.

ಆವರಣ ಗೋಡೆ ಕುಸಿತ: ಅಂಬಿಕಾರೋಡ್ ಪಿಲಾರಿನ ನಿವಾಸಿ ಕೃಷ್ಣ ಶೆಟ್ಟಿಯವರ ಮನೆಯ ಆವರಣ ಗೋಡೆಯು ಕುಸಿದ ಪರಿಣಾಮ ಆವರಣದೊಳಗಿದ್ದ ಹಲಸಿನ ಮರವೊಂದು ವಿದ್ಯುತ್ ಕಂಬದ ತಂತಿಯ ಮೇಲರಗಿ ಬಿದ್ದಿದೆ, ಬಳಿಕ ಮೆಸ್ಕಾಂ ಸಿಬ್ಬಂದಿಗಳು ಸ್ಥಳಕ್ಕಾಗಮಿಸಿ ಮರವನ್ನು ತೆರವು ಗೊಳಿಸಿ ರಸ್ತೆಯ ಸುಗಮಸಂಚಾರಕ್ಕೆ ಅವಕಾಶ ಮಾಡಿಕೊಟ್ಟರು.

ತೊಕ್ಕೊಟ್ಟು ಪ್ಲೈಓವರ್ ಬಳಿ ಅಂಗಡಿಗಳಿಗೆ ನುಗ್ಗಿದ ನೀರು

ರಾಷ್ಟ್ರೀಯ ಹೆದ್ದಾರಿ 66ರ ತೊಕ್ಕೊಟ್ಟು ಜಂಕ್ಷನ್‌ನಲ್ಲಿ ಫ್ಲೈಓವರ್ ಕಾಮಗಾರಿ ನಿಧಾನಗತಿಯಲ್ಲಿ ನಡೆಯುತ್ತಿದ್ದು, ಕಾಮಗಾರಿಗೆ ಸಂಬಂಧಪಟ್ಟಂತೆ ರಸ್ತೆ ಯನ್ನು ಅಗೆದಿದ್ದು, ಮಂಗಳವಾರ ಸುರಿದ ಭಾರೀ ಮಳೆಗೆ ಫ್ಲೈ ಓವರ್‌ಗೆ ತೆಗೆದಿದ್ದ ಹೊಂಡದಲ್ಲಿ ನೀರು ತುಂಬಿ ರಸ್ತೆ ಮತ್ತು ಪಕ್ಕದ ಮೂರು ಕಟ್ಟಡಗಳಲ್ಲಿರುವ ಅಂಗಡಿಗಳಿಗೆ ನೀರು ತುಂಬಿದೆ. ಹೆದ್ದಾರಿಯಲ್ಲಿ ನೀರು ನಿಂತ ಪರಿಣಾಮ ಮಂಗಳೂರಿನಿಂದ ತೊಕ್ಕೊಟ್ಟು ಕಡೆಗೆ ಸಂಚರಿಸುವ ವಾಹನಗಳಿಗೆ ಸಂಚಾರಕ್ಕೆ ತಡೆಯಾಯಿತು. ಘಟನೆಗೆ ಸಂಬಂಧಿಸಿದಂತೆ ಉಳ್ಳಾಲ ಮುಖ್ಯಾಕಾರಿಗಳು ಜನಪ್ರತಿನಿಧಿಗಳು ಭೇಟಿ ನೀಡಿದ್ದು, ಹೆದ್ದಾರಿ ಇಲಾಖೆಯ ವಿರುದ್ಧ ಜನರು ಆಕ್ರೋಶ ವ್ಯಕ್ತಪಡಿಸಿದರು. ರಾತ್ರಿ ವೇಳೆಯೂ ಅಂಗಡಿಗಳಿಗೆ ನೀರು ತುಂಬಿರುವುದನ್ನು ಅಂಗಡಿ ಮಾಲೀಕರುಇ ಸೇರಿದಂತೆ ನೌಕರರು ಶ್ರ,ಮಪಟ್ಟರು. ಕೃತಕ ನೆರೆಯಿಂದ ಲಕ್ಷಾಂತರ ನಷ್ಟ ಅಂದಾಜಿಸಲಾಗಿದೆ.

ಬಿರುಸುಗೊಂಡ ಸಮುದ್ರ

ಭಾರೀ ಮಳೆಯಾಗುತ್ತಿರುವಂತೆಯೇ ಉಳ್ಳಾಲ ಸೇರಿದಂತೆ ಸೋಮೇಶ್ವರ ಉಚ್ಚಿಲದಲ್ಲಿ ಸಮುದ್ರ ಬಿರುಸುಗೊಂಡಿದೆ. ಬೆಳಗ್ಗಿನಿಂದಲೇ ಮಳೆಯೊಂದಿಗೆ ಗಾಳಿ ಬೀಸುತ್ತಿದ್ದು ಯಾವುದೇ ಹಾನಿಯಾಗಿಲ್ಲ. ಸಂಜೆಯ ವೇಳೆಗೆ ದೊಡ್ಡ ಅಲೆಗಳು ದಡಕ್ಕೆ ಹೊಡೆಯುತ್ತಿದ್ದು ಜನರು ಆತಂಕ್ಕೀಡಾಗಿದ್ದಾರೆ.

ಕುತ್ತಾರ್ ಜಂಕ್ಷನ್ ಜಲಾವೃತ

ಕುತ್ತಾರ್ ಜಂಕ್ಷನ್‌ನಲ್ಲಿ ಮಳೆ ನೀರಿನಿಂದ ಜಲಾವೃತಗೊಂಡಿದ್ದು, ಕೃತಕ ನೆರೆಯಾಗಿದೆ. ರಸ್ತೆ ಚರಂಡಿ ಸಮರ್ಪಕವಾಗಿರದೆ ಹರಿಯುವ ನೀರು ತಗ್ಗು ಪ್ರದೇಶವಾದ ಕುತ್ತಾರ್ ಜಂಕ್ಷನ್‌ನಲ್ಲಿ ಶೇಖರಣೆಗೊಂಡಿದ್ದು, ರಸ್ತೆಯಲ್ಲಿ ನೀರು ತುಂಬಿದ್ದರಿಂದ ಸಂಚಾರಕ್ಕೆ ತಡೆಯಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News