×
Ad

ಉಳ್ಳಾಲ: ಎಸ್‌ಬಿಐ ವತಿಯಿಂದ ಸಾರ್ವಜನಿಕ ಶೌಚಗೃಹ ನಿರ್ಮಾಣ

Update: 2018-05-29 21:12 IST

ಉಳ್ಳಾಲ, ಮೇ 29: ಸಮಾಜದಲ್ಲಿರುವ ಕಟ್ಟಕಡೆಯ ವ್ಯಕ್ತಿಗೂ ಮೂಲಸೌಕರ್ಯ ಸಿಗಬೇಕು ಎನ್ನುವ ನೆಲೆಯಲ್ಲಿ ಬ್ಯಾಂಕ್ ವಿವಿಧ ಯೋಜನೆಗಳನ್ನು ಹಮ್ಮಿಕೊಂಡಿದ್ದು, ಜನರು ಬ್ಯಾಂಕ್ ಜೊತೆ ಕೈಜೋಡಿಸಿ ದೇಶದ ಅಭಿವೃದ್ಧಿಗೆ ಕೊಡುಗೆ ನೀಡಬೇಕು ಎಂದು ಎಸ್‌ಬಿಐ ಬೆಂಗಳೂರಿನ ಡಿಜಿಎಂ ಸುಕುಮಾರ್ ವಿ.ಕೆ. ಹೇಳಿದರು.

ಪ್ರಧಾನ ಮಂತ್ರಿ ಸ್ವಚ್ಛ ಭಾರತ ಯೋಜನೆಯಡಿ ಬೆಂಗಳೂರಿನ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ವತಿಯಿಂದ ಉಳ್ಳಾಲ ಸಯ್ಯಿದ್ ಮದನಿ ದರ್ಗಾ ಆವರಣದಲ್ಲಿ ಸಾರ್ವಜನಿಕರ ಉಪಯೋಗಕ್ಕಾಗಿ ನಿರ್ಮಾಣವಾಗು ಶೌಚಗೃಹಕ್ಕೆ 15 ಲಕ್ಷದ ಚೆಕ್ ಹಸ್ತಾಂತರಿಸಿ ಮಾತನಾಡಿದರು.

ಪ್ರಸ್ತುತ ದಿನಗಳಲ್ಲಿ ಸ್ವಚ್ಛ ಭಾರತ ಅಭಿಯಾನ ಚಾಲ್ತಿಯಲ್ಲಿದೆ, ಈ ನಿಟ್ಟಿನಲ್ಲಿ ಸಾರ್ವಜನಿಕ ಹಿತಾಸಕ್ತಿಯಡಿ ಇತಿಹಾಸ ಪ್ರಸಿದ್ಧ ಉಳ್ಳಾಲ ದರ್ಗಾಕ್ಕೆ ಆಗಮಿಸುವ ಪ್ರವಾಸಿಗರ ಅನುಕೂಲಕ್ಕಾಗಿ ಶೌಚಗೃಹ ನಿರ್ಮಿಸುವ ನಿಟ್ಟಿನಲ್ಲಿ 15 ಲಕ್ಷ ಅನುದಾನ ನೀಡಲಾಗುತ್ತಿದೆ ಎಂದು ತಿಳಿಸಿದರು.

ಎಜಿಎಂ ಕಿಶೋರ್ ಕುಮಾರ್ ಬಂಟ್ವಾಳ್ ಮಾತನಾಡಿ, ಸ್ವಚ್ಛ ಭಾರತ ಕಲ್ಪನೆ ಎನ್ನುವುದು ಮನೆಯಲ್ಲೇ ಆರಂಭಗೊಳ್ಳಬೇಕಿದೆ. 2005ರಲ್ಲಿ ಸ್ವಚ್ಛ ನಗರ ಯೋಜನೆಯಡಿ ಆಗಿನ ದ.ಕ.ಜಿಲ್ಲಾಧಿಕಾರಿ ಭರತ್‌ಲಾಲ್ ಮೀನಾ ಅವರ ಯೋಜನೆಯಂತೆ ಮಂಗಳೂರು ಸಹಿತ ವಿವಿಧ ಭಾಗಗಳಲ್ಲಿ ಸ್ವಚ್ಛತಾ ಕಾರ್ಯಕ್ರಮ ನಡೆಸಿ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲಾಗಿತ್ತು ಎಂದರು.

ಭಾರತೀಯರು ಎಲ್ಲಾ ವಿಷಯದಲ್ಲಿ ಮುಂದಿದ್ದರೂ ಸ್ವಚ್ಛತೆಯಲ್ಲಿ 195 ದೇಶಗಳ ಪೈಕಿ ನಮ್ಮ ದೇಶ 129ನೇ ಸ್ಥಾನದಲ್ಲಿರುವುದು ದುರಂತ, ದರ್ಗಾ ಮುಖಾಂತರ ಉಳ್ಳಾಲದಲ್ಲಿ ಸ್ವಚ್ಛತೆ ಬಗ್ಗೆ ಪರಿಣಾಮಕಾರಿಯಾಗಿ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಎಸ್‌ಬಿಐ ಯೋಜನೆ ಶ್ಲಾಘನೀಯ ನಗರಸಭಾ ಪೌರಾಯುಕ್ತ ಗೋಪಾಲಕೃಷ್ಣ ಶೆಟ್ಟಿ ಹೇಳಿದರು.

ಸಯ್ಯಿದ್ ಮದನಿ ದರ್ಗಾ ಅಧ್ಯಕ್ಷ ಅಬ್ದುಲ್ ರಶೀದ್ ಅಧ್ಯಕ್ಷತೆ ವಹಿಸಿದ್ದರು. ನಗರಸಭಾಧ್ಯಕ್ಷ ಹುಸೈನ್ ಕುಂಞಿಮೋನು, ನಗರಸಭಾ ಪೌರಾಯಕ್ತ ಗೋಪಾಲಕೃಷ್ಣ ಶೆಟ್ಟಿ ಮುಖ್ಯ ಅತಿಥಿಗಳಾಗಿದ್ದರು. ಎಸ್‌ಬಿಐ ಎಜಿಎಂ ಹರೀಶ್ ಎಂ, ಪ್ರಧಾನ ವ್ಯವಸ್ಥಾಪಕ ಜನಾರ್ದನ್ ನಾಯ್ಕ, ಸಹಾಯಕ ವ್ಯವಸ್ಥಾಪಕ ರಹ್ಮತ್ ಎಸ್.ಎ, ಉಳ್ಳಾಲ ವಲಯ ವ್ಯವಸ್ಥಾಪಕ ವಿವೇಕ್ ಎಂ.ಗಾಣಿಗ, ದರ್ಗಾ ಉಪಾಧ್ಯಕ್ಷ ಯು.ಕೆ.ಮೋನು ಇಸ್ಮಾಯಿಲ್, ಅರೆಬಿಕ್ ಟ್ರಸ್ಟ್ ಉಪಾಧ್ಯಕ್ಷ ಯು.ಕೆ.ಇಬ್ರಾಹಿಂ, ಕಾರ್ಯದರ್ಶಿ ಆಸಿಫ್ ಅಬ್ದುಲ್ಲಾ, ಎ.ಕೆ. ಮೊಯಿದ್ದೀನ್, ಸದಸ್ಯರಾದ ಮೊಯಿದ್ದಿನಬ್ಬ ಉಳ್ಳಾಲಬೈಲ್, ಇಬ್ರಾಹಿಂ ಉಳ್ಳಾಲಬೈಲ್, ಅಬೂಬಕ್ಕರ್ ಆಲಿನಗರ, ದರ್ಗಾ ವ್ಯವಸ್ಥಾಪಕ ಯು.ಎಂ.ಯೂಸುಫ್ ಇನ್ನಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News