ಕಾಳಿ ವೇಷ ಧರಿಸಿದ ವ್ಯಕ್ತಿಯ ಹತ್ಯೆ: ಬಾಲಕ ಸಹಿತ ನಾಲ್ವರ ಬಂಧನ
ಹೊಸದಿಲ್ಲಿ, ಮೇ 30: ಕಾಳಿ ಉಡುಪು ಧರಿಸಿದ್ದ ವ್ಯಕ್ತಿಯ ತಮಾಷೆ ಮಾಡಿದ ದುಷ್ಕರ್ಮಿಗಳು ನಂತರ ಆತನನ್ನು ಇರಿದು ಹತೈಗೈದ ಘಟನೆಗೆ ಸಂಬಂಧಿಸಿ ನಾಲ್ವರನ್ನು ಬಂಧಿಸಲಾಗಿದೆ ಹಾಗೂ ಓರ್ವ ಬಾಲಕನನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಬಂಧಿತರನ್ನು ನವೀನ್ (20), ಅಮರ್ ಸಿಂಗ್ (20), ಮೋಹಿತ್ ಕುಮಾರ್ (25), ಸಜಲ್ ಕುಮಾರ್ ಮಹೇಶ್ವರಿ (19) ಎಂದು ಗುರುತಿಸಲಾಗಿದೆ. ಮೇ 22 ಹಾಗೂ 23ರ ನಡುವಿನ ರಾತ್ರಿ ಎನ್‌ಎಸ್‌ಐಸಿ ಕಾಡಿನಲ್ಲಿ ಎದೆ, ಮುಖ ಹಾಗೂ ತಲೆಗೆ ಹಲವು ಬಾರಿ ಇರಿತಕ್ಕೊಳಗಾಗಿ ಗಾಯಗೊಂಡ ವ್ಯಕ್ತಿಯ ಮೃತದೇಹವೊಂದು ಪತ್ತೆಯಾಗಿತ್ತು ಎಂದು ಅವರು ತಿಳಿಸಿದ್ದಾರೆ. ಮೃತಪಟ್ಟ ವ್ಯಕ್ತಿಯನ್ನು ಕಲು ಆಲಿಯಾಸ್ ಕಲುವಾ ಎಂದು ಗುರುತಿಸಲಾಗಿತ್ತು.
ಮರಣೋತ್ತರ ಪರೀಕ್ಷೆಯ ಬಳಿಕ ಮೃತದೇಹವನ್ನು ಆತನ ಸಹೋದರನಿಗೆ ಹಸ್ತಾಂತರಿಸಲಾಗಿತ್ತು. ಅನಾಥನಾಗಿದ್ದ ಕಲು ಕಲ್ಕಾಜಿ ಮಂದಿರದ ಸಮೀಪ ಧರ್ಮಶಾಲೆ ನಡೆಸುತ್ತಿದ್ದ. ಆತ ತೃತೀಯ ಲಿಂಗಿಗಳೊಂದಿಗೆ ಕಾಲ ಕಳೆಯುತ್ತಿದ್ದ. ಮಹಾ ಕಾಳಿಯನ್ನು ಆರಾಧಿಸುತ್ತಿದ್ದ. ಮಂಗಳವಾರ ಹಾಗೂ ಶನಿವಾರ ಆತ ಕಪ್ಪು ಸಲ್ವಾರ್ ಸೂಟ್, ಕೆಂಪು ದುಪ್ಪಟ್ಟ ಹಾಗೂ ಕಾಲಂದಿಗೆ ಧರಿಸಿ ಮಹಾಕಾಳಿಯಂತೆ ಬಿಂಬಿಸಿಕೊಳ್ಳುತ್ತಿದ್ದ ಎಂದು ಉಪ ಪೊಲೀಸ್ ಆಯುಕ್ತ (ಆಗ್ನೇಯ) ಚಿನ್ಮಯಿ ಬಿಸ್ವಾಸ್ ಹೇಳಿದ್ದಾರೆ.