ಸ್ಟರ್ಲೈಟ್ ಘಟಕ ವಿಸ್ತರಣೆಗೆ ಭೂಮಿ ಮಂಜೂರು ರದ್ದುಗೊಳಿಸಿದ ರಾಜ್ಯ ಕೈಗಾರಿಕೆ ಉತ್ತೇಜನ ಮಂಡಳಿ
ಚೆನ್ನೈ, ಮೇ 30: ಸಾರ್ವಜನಿಕ ಹಿತಾಸಕ್ತಿ ಹಿನ್ನೆಲೆಯಲ್ಲಿ ವೇದಾಂತ ಗುಂಪಿನ ತೂತುಕುಡಿಯಲ್ಲಿರುವ ಸರ್ಲೈಟ್ ತಾಮ್ರ ಘಟಕದ ಪ್ರಸ್ತಾಪಿತ ವಿಸ್ತರಣೆಗೆ ಮಂಜೂರಾಗಿದ್ದ ಭೂಮಿಯನ್ನು ತಮಿಳುನಾಡಿನ ರಾಜ್ಯ ಕೈಗಾರಿಕೆ ಉತ್ತೇಜನ ಮಂಡಳಿ ಮಂಗಳವಾರ ರದ್ದುಗೊಳಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
‘‘ಸಾರ್ವಜನಿಕ ಹಿತಾಸಕ್ತಿ ಹಿನ್ನಲೆಯಲ್ಲಿ ಘಟಕದ ಪ್ರಸ್ತಾಪಿತ ವಿಸ್ತರಣೆಗೆ ಮಂಜೂರು ಮಾಡಲಾಗಿದ್ದ ಭೂಮಿಯನ್ನು ರಾಜ್ಯ ಕೈಗಾರಿಕೆ ಉತ್ತೇಜನ ಮಂಡಳಿ ರದ್ದುಗೊಳಿಸಿದೆ ’’ ಎಂದು ವೇದಾಂತ ಗುಂಪಿಗೆ ರವಾನಿಸಿದ ಪತ್ರದಲ್ಲಿ ರಾಜ್ಯ ಕೈಗಾರಿಕೆ ಉತ್ತೇಜನ ಮಂಡಳಿ ಹೇಳಿದೆ. ಭೂಮಿಗಾಗಿ ಪಡೆದುಕೊಳ್ಳಲಾದ ಮೊತ್ತವನ್ನು ರಾಜ್ಯ ಕೈಗಾರಿಕೆ ಉತ್ತೇಜನ ಮಂಡಳಿ ನಿಯಮದಂತೆ ಹಿಂದಿರುಗಿಸಲಾಗುವುದು ಎಂದು ಅದು ಹೇಳಿದೆ.
ಘಟಕದಿಂದ ಪರಿಸರ ಮಾಲಿನ್ಯ ಉಂಟಾಗುತ್ತಿದೆ ಎಂದು ಸಾರ್ವಜನಿಕರು ದೀರ್ಘಾವಧಿಯಿಂದ ಪ್ರತಿಭಟನೆ ನಡೆಸಿರುವುದು ತೂತುಕುಡಿಯಲ್ಲಿರುವ ಪ್ರಸ್ತಾಪಿತ ಘಟಕಕ್ಕೆ ಭೂಮಿ ಮಂಜೂರು ರದ್ದುಗೊಳಿಸಲು ಕಾರಣ ಎಂದು ಅದು ಹೇಳಿದೆ. ಮುಖ್ಯಮಂತ್ರಿ ರಾಜೀನಾಮೆಗೆ ಡಿಎಂಕೆ ಆಗ್ರಹ ಈ ನಡುವೆ ಡಿಎಂಕೆಯ ಕಾರ್ಯಕಾರಿ ಅಧ್ಯಕ್ಷ ಎಂ.ಕೆ. ಸ್ಟಾಲಿನ್ ಗುರುವಾರ, ತಮಿಳುನಾಡು ಮುಖ್ಯಮಂತ್ರಿ ಎಡಪಳ್ಳಿ ಕೆ. ಪಳನಿಸ್ವಾಮಿ ರಾಜೀನಾಮೆ ನೀಡುವಂತೆ ಆಗ್ರಹಿಸಿದ್ದಾರೆ.
ಮುಖ್ಯಮಂತ್ರಿ ಅವರು ರಾಜೀನಾಮೆ ನೀಡಬೇಕು ಎಂದು ಪ್ರತಿಪಕ್ಷಗಳ ಪರವಾಗಿ ಆಗ್ರಹಿಸುತ್ತೇನೆ. ಇದು ಜನರು ಬಯಕೆ ಎಂದು ಸ್ಟಾಲಿನ್ ಹೇಳಿದ್ದಾರೆ. ಪ್ರತಿಭಟನಕಾರರ ಮೇಲೆ ಪೊಲೀಸರು ಗುಂಡಿನ ದಾಳಿ ನಡೆಸಿರುವುದನ್ನು ವಿರೋಧಿಸಿ ಸ್ಟಾಲಿನ್ ಹಾಗೂ ಡಿಎಂಕೆಯ ಇತರ ಸದಸ್ಯರು ಬೆಳಗ್ಗೆ ವಿಧಾನ ಸಭೆಯಲ್ಲಿ ಕಪ್ಪು ಶರ್ಟ್ ಧರಿಸಿ ಪಾಲ್ಗೊಂಡರು.