×
Ad

ಮುದ್ರಾ ಯೋಜನೆಯಡಿ 6 ಲಕ್ಷ ಕೋಟಿ ರೂ. ಸಾಲ ವಿತರಣೆ: ಪ್ರಧಾನಿ ಮೋದಿ

Update: 2018-05-29 21:19 IST

ಹೊಸದಿಲ್ಲಿ, ಮೇ 29: ಪ್ರಧಾನಮಂತ್ರಿ ಮುದ್ರಾ ಯೋಜನೆ(ಪಿಎಂಎಂವೈ) 12 ಕೋಟಿ ಫಲಾನುಭವಿಗಳಿಗೆ 6 ಲಕ್ಷ ಕೋಟಿ ರೂ. ಮೊತ್ತದ ಸಾಲ ವಿತರಿಸಲಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ತಿಳಿಸಿದ್ದಾರೆ. ದೇಶದ್ಯಂತ ಮುದ್ರಾ ಯೋಜನೆಯ ಫಲಾನುಭವಿಗಳ ಜೊತೆ ವೀಡಿಯೊ ಕಾನ್ಫರೆನ್ಸಿಂಗ್ ಮೂಲಕ ಸಂವಹನ ನಡೆಸಿದ ಪ್ರಧಾನಿಯವರು, ಈ ಹಿಂದಿನ ಸರಕಾರಗಳು ನಡೆಸುತ್ತಿದ್ದ ಸಾಲಮೇಳಗಳಿಗಿಂತ ವಿಭಿನ್ನ ಯೋಜನೆಯಾದ ಮುದ್ರಾ ಯೋಜನೆಯು ಜನರನ್ನು ಅಸಾಂಪ್ರದಾಯಿಕ ಮಾರ್ಗದಲ್ಲಿ ಮುನ್ನಡೆದು, ತಮ್ಮ ಕನಸನ್ನು ನನಸಾಗಿಸುವುದರ ಜೊತೆಗೆ ಇತರರಿಗೂ ಉದ್ಯೋಗಾವಕಾಶ ಒದಗಿಸಲು ಪ್ರೋತ್ಸಾಹ ನೀಡಿದೆ ಎಂದು ಹೇಳಿದರು. 12 ಕೋಟಿ ಫಲಾನುಭವಿಗಳಲ್ಲಿ ಶೇ.28ರಷ್ಟು ಮಂದಿ ಅಥವಾ 3.25 ಕೋಟಿ ಜನತೆ ಪ್ರಥಮ ಬಾರಿಗೆ ಉದ್ಯಮ ಆರಂಭಿಸುವ ಸಾಹಸಕ್ಕೆ ಮುಂದಾಗಿದ್ದಾರೆ. 12 ಕೋಟಿ ಫಲಾನುಭವಿಗಳಲ್ಲಿ ಶೇ.74 (9 ಕೋಟಿ) ರಷ್ಟು ಮಹಿಳೆಯರು, ಶೇ.55ರಷ್ಟು ಎಸ್‌ಸಿ/ಎಸ್‌ಟಿ ಮತ್ತು ಒಬಿಸಿ ವರ್ಗದವರಾಗಿದ್ದಾರೆ ಎಂದವರು ವಿವರಿಸಿದರು.

 ರಾಜಕೀಯ ಲಾಭದ ಉದ್ದೇಶವಿದ್ದ ಸಾಲಮೇಳದಡಿ ರಾಜಕಾರಣಿಗಳಿಗೆ ನಿಕಟವಾಗಿದ್ದವರಿಗೆ ಸಾಲ ಒದಗಿಸಲಾಗುತ್ತಿತ್ತು ಮತ್ತು ಇದನ್ನು ಮರುಪಾವತಿಸುವ ಬಯಕೆ ಯಾರಲ್ಲಿಯೂ ಇರಲಿಲ್ಲ ಎಂದ ಅವರು ಹೇಳಿದರು. ಆಗ ಗಣ್ಯರ ಶಿಫಾರಸ್ಸಿನ ಆಧಾರದಲ್ಲಿ ಶ್ರೀಮಂತ ಜನರಿಗೆ ಮಾತ್ರ ಸಾಲ ದೊರೆಯುತ್ತಿತ್ತು. ಆದರೆ ಯಾವುದೇ ಬೆಂಬಲವಿಲ್ಲದ ಬಡ ಜನರು ಸಾಲ ವ್ಯವಸ್ಥೆಯಿಂದ ವಂಚಿತರಾಗುತ್ತಿದ್ದರು. ಹೀಗೆ ಬಡವರು ಅನಿವಾರ್ಯವಾಗಿ ಅಧಿಕ ಬಡ್ಡಿದರ ವಿಧಿಸುವ ಲೇವಾದೇವಿಗಾರರಿಂದ ಸಾಲ ಪಡೆಯಬೇಕಿತ್ತು. ಆದರೆ ಮುದ್ರಾ ಯೋಜನೆಯು ಈ ವ್ಯವಸ್ಥೆಗೆ ತಡೆಯೊಡ್ಡಿದೆ. ಯುವಕರನ್ನು ಲೇವಾದೇವಿಗಾರರ ಕಪಿಮುಷ್ಟಿಯಿಂದ ರಕ್ಷಿಸಿದೆ. ಈ ಹಿಂದೆ ಉನ್ನತ ಸಂಸ್ಥೆಗಳಿಗೆ ಸಾಲ ಒದಗಿಸಿಕೊಡಲು ವಿತ್ತ ಸಚಿವರು ಸಾಧ್ಯವಾದ ಕ್ರಮಗಳನ್ನೆಲ್ಲಾ ಕೈಗೊಳ್ಳುತ್ತಿದ್ದರು. ಇದೇ ವೇಳೆ ಲೇವಾದೇವಿಗಾರರಿಂದ ಶೇ.40ರಷ್ಟು ಬಡ್ಡಿದರದಲ್ಲಿ ಸಾಲ ಪಡೆಯುತ್ತಿದ್ದ ಸಣ್ಣ ಉದ್ಯಮಿಗಳಿಗೆ ಅವರ ಬಿಗಿಮುಷ್ಟಿಯಿಂದ ಹೊರಬರಲು ಅಸಾಧ್ಯವಾಗುತ್ತಿತ್ತು. ಈ ದೇಶದ ಜನರು ಈ ಹಿಂದೆ ಬಡತನ ನಿರ್ಮೂಲನೆಯ ಘೋಷಣೆ ಕೇಳಿ ಖುಷಿಯಾಗಿದ್ದರು. ಆದರೆ ವಾಸ್ತವವಾಗಿ ಏನೂ ಸಂಭವಿಸಲೇ ಇಲ್ಲ ಎಂದು ಪ್ರಧಾನಿ ಹೇಳಿದರು.

ಆದರೆ ಎನ್‌ಡಿಎ ಸರಕಾರ ಸಾಲಮೇಳ ನಡೆಸುತ್ತಿಲ್ಲ. ಅಲ್ಲದೆ ಇಲ್ಲಿ ಮಧ್ಯವರ್ತಿಗಳಿಗೆ ಜಾಗವಿಲ್ಲ. ಈ ಸರಕಾರಕ್ಕೆ ದೇಶದ ಯುವಜನತೆಯ , ಮಹಿಳೆಯರ ಮೇಲೆ ವಿಶ್ವಾಸವಿದೆ. ಇವರು ಬ್ಯಾಂಕಿನಿಂದ ನೇರವಾಗಿ ಸಾಲ ಪಡೆದು ತಮ್ಮ ಸ್ವಂತ ಸಣ್ಣ ಉದ್ಯಮವನ್ನು ಆರಂಭಿಸಬಹುದಾಗಿದೆ. ಇಲ್ಲಿ ಬಡಜನರಿಗೆ ಬ್ಯಾಂಕಿನಿಂದ ಸಾಲ ಪಡೆಯಲು ಅಥವಾ ತಮ್ಮ ಉದ್ಯಮವನ್ನು ವಿಸ್ತರಿಸಲು ಸಾಲ ಪಡೆಯಲು ಯಾವುದೇ ಪೂರಕ ಭದ್ರತೆ ಒದಗಿಸುವ ಅಗತ್ಯವಿಲ್ಲ ಎಂದರು. 2015ರ ಎಪ್ರಿಲ್ 8ರಂದು ಪ್ರಧಾನಿ ಮೋದಿಯವರು ಚಾಲನೆ ನೀಡಿರುವ ಮುದ್ರಾ ಯೋಜನೆಯಡಿ ಕಾರ್ಪೋರೇಟ್ ರಹಿತ , ಕೃಷಿಯೇತರ ಸಣ್ಣ ಮತ್ತು ಅತೀ ಸಣ್ಣ ಉದ್ದಿಮೆಗಳಿಗೆ ಸಾಲ ವಿತರಿಸಲಾಗುತ್ತದೆ. ಕಳೆದ ಮೂರು ವರ್ಷಗಳಲ್ಲಿ ಮುದ್ರಾ ಯೋಜನೆಯಡಿ 5.73 ಲಕ್ಷ ಕೋಟಿ ರೂ.ಮೊತ್ತದ ಸಾಲ ವಿತರಿಸಲಾಗಿದ್ದರೆ ಕಳೆದ ಆರ್ಥಿಕ ವರ್ಷದಲ್ಲಿ 2.53 ಲಕ್ಷ ಕೋಟಿ ರೂ. ಮೊತ್ತದ ಸಾಲ ವಿತರಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News