ಕೇರಳ: ಮರ್ಯಾದಾ ಹತ್ಯೆ ವಿರೋಧಿಸಿ ಕೊಟ್ಟಾಯಂನಲ್ಲಿ ಪ್ರತಿಭಟನೆ

Update: 2018-05-29 15:50 GMT

ಕೊಟ್ಟಾಯಂ, ಮೇ 29: ವ್ಯಕ್ತಿಯೊಬ್ಬರ ಮರ್ಯಾದಾ ಹತ್ಯೆಯನ್ನು ಖಂಡಿಸಿ ವಿವಿಧ ರಾಜಕೀಯ ಪಕ್ಷಗಳು ಹಾಗೂ ದಲಿತ ಸಂಘಟನೆಗಳು ಕೊಟ್ಟಾಯಂ ಜಿಲ್ಲೆಯಲ್ಲಿ ಮಂಗಳವಾರ ಹಮ್ಮಿಕೊಂಡ ‘ಮುಂಜಾನೆಯಿಂದ ಮುಸ್ಸಂಜೆ’ವರೆಗಿನ ಹರತಾಳದಿಂದ ಜಿಲ್ಲೆಯಲ್ಲಿ ದೈನಂದಿನ ಜನಜೀವನ ಅಸ್ತವ್ಯಸ್ತವಾಗಿದೆ.

ದಲಿತ ಕ್ರಿಶ್ಚಿಯನ್ ಸಮುದಾಯದ ಕೆವಿನ್ ಪಿ.ಜೋಸೆಫ್ ಎಂಬವರು ಯುವತಿಯೊಬ್ಬಳನ್ನು ಪೀತಿಸುತ್ತಿದ್ದು ಇದಕ್ಕೆ ವಿರೋಧ ಸೂಚಿಸಿದ್ದ ಯುವತಿಯ ಸಂಬಂಧಿಕರು ಸುಪಾರಿ ನೀಡಿ ಕೆವಿನ್‌ರನ್ನು ಅಪಹರಿಸಿ ಕೊಲೆಗೈದಿದ್ದಾರೆ ಎಂದು ಆರೋಪಿಸಲಾಗಿದೆ. ಈ ಘಟನೆಯನ್ನು ವಿರೋಧಿಸಿ ವಿವಿಧ ದಲಿತ ಸಂಘಟನೆಗಳು ಹಾಗೂ ಕಾಂಗ್ರೆಸ್, ಬಿಜೆಪಿ ಸೇರಿದಂತೆ ಹಲವು ಪಕ್ಷಗಳು ಪ್ರತಿಭಟನೆ ಹಮ್ಮಿಕೊಂಡಿದ್ದವು. ಜಿಲ್ಲೆಯ ವಿವಿಧೆಡೆ ಅಂಗಡಿಗಳು, ಮಾರುಕಟ್ಟೆ ಹಾಗೂ ವ್ಯಾಪಾರ ಸಂಸ್ಥೆಗಳು ವ್ಯವಹಾರ ನಡೆಸಲಿಲ್ಲ. ಖಾಸಗಿ ಬಸ್ಸು ನಿಲ್ದಾಣಗಳು ಬಸ್ಸುಗಳ ಸಂಚಾರವಿಲ್ಲದೆ ಬಿಕೊ ಅನ್ನುತ್ತಿತ್ತು. ಕೇರಳ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್ಸುಗಳು ದೂರದ ಊರಿನ ಸಂಚಾರವನ್ನು ಎಂದಿನಂತೆಯೇ ಮುಂದುವರಿಸಿದ್ದವು. ಕೆವಿನ್ ಜೋಸೆಫ್ ಹಾಗೂ ಅವರ ಪ್ರಿಯತಮೆ ಮದುವೆಯಾಗಲು ಸಿದ್ಧತೆ ನಡೆಸಿದ್ದು ಕೊಟ್ಟಾಯಂ ಸಮೀಪದ ಉಪನೋಂದಣಾಧಿಕಾರಿ ಕಚೇರಿಯಲ್ಲಿ ವಿವಾಹದ ನೋಂದಣಿ ನಡೆಸಲು ಜಂಟಿಯಾಗಿ ಅರ್ಜಿ ಸಲ್ಲಿಸಿದ್ದರು. ಆದರೆ ಹುಡುಗಿಯ ಸಂಬಂಧಿಕರಿಗೆ ಈ ವಿವಾಹ ಇಷ್ಟವಿರಲಿಲ್ಲ ಎನ್ನಲಾಗಿದೆ.

ರವಿವಾರ ಬೆಳಿಗ್ಗೆ ಕೆವಿನ್ ಮತ್ತವರ ಸಂಬಂಧಿ ಅನೀಶ್ ಎಂಬವರ ಮನೆಗೆ ಮೂರು ವಾಹನಗಳಲ್ಲಿ ಆಗಮಿಸಿದ ದುಷ್ಕರ್ಮಿಗಳು ಅವರನ್ನು ಅಪಹರಿಸಿದ್ದರು. ಅನೀಶ್ ಮೇಲೆ ಕ್ರೂರವಾಗಿ ಹಲ್ಲೆ ನಡೆಸಿದ ಬಳಿಕ ಆತನನ್ನು ರಸ್ತೆ ಪಕ್ಕ ಎಸೆದಿದ್ದು ,ಗಂಭೀರ ಗಾಯಗೊಂಡ ಅನೀಶ್‌ನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಕೆವಿನ್‌ನನ್ನು ಗುಂಪು ಅಪಹರಿಸಿತ್ತು. ಕೆವಿನ್ ಮೃತದೇಹ ಸೋಮವಾರ ಕೊಲ್ಲಂನ ನದಿಯೊಂದರಲ್ಲಿ ಪತ್ತೆಯಾಗಿತ್ತು.  

ಯುವತಿಯ ಸಹೋದರ ಸುಪಾರಿ ಕೊಟ್ಟು ಈ ಕೃತ್ಯ ನಡೆಸಿರುವುದಾಗಿ ಆರೋಪಿಸಲಾಗಿದೆ. ಈ ಮಧ್ಯೆ, ತಾನು ಕೆವಿನ್‌ನನ್ನು ವಿವಾಹವಾಗಿದ್ದು ತನ್ನ ಪತಿಯನ್ನು ಗುಂಪೊಂದು ಅಪಹರಿಸಿದೆ ಎಂದು ಯುವತಿ ಗಾಂಧೀನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಳು. ಆದರೆ ಪೊಲೀಸರು ನಿರ್ಲಕ್ಷ ವಹಿಸಿದ್ದಾರೆ ಎಂದು ಆಕೆ ದೂರಿದ್ದಾಳೆ. ಮೃತದೇಹದ ಮರಣೋತ್ತರ ಪರೀಕ್ಷೆಯ ಬಳಿಕ ಕೆವಿನ್ ಸಾವಿನ ಕಾರಣ ಸ್ಪಷ್ಟವಾಗಲಿದೆ ಎಂದು ಮೂಲಗಳು ತಿಳಿಸಿವೆ. ಪ್ರಕರಣಕ್ಕೆ ಸಂಬಂಧಿಸಿ ಯುವತಿಯ ಸಹೋದರ ಸೇರಿದಂತೆ 10 ಮಂದಿಯ ವಿರುದ್ಧ ಪ್ರಕರಣ ದಾಖಲಾಗಿದೆ. ಇದೊಂದು ಮರ್ಯಾದಾ ಹತ್ಯೆಯ ಘಟನೆಯಾಗಿದೆ ಎಂದು ಸಂಶಯ ವ್ಯಕ್ತಪಡಿಸಿರುವ ಕೇರಳ ಮಾನವಹಕ್ಕು ಆಯೋಗ, ಮೂರು ವಾರದೊಳಗೆ ವರದಿ ಸಲ್ಲಿಸುವಂತೆ ರಾಜ್ಯದ ಪೊಲೀಸ್ ಮುಖ್ಯಸ್ಥರಿಗೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News