ರಾಷ್ಟ್ರಪತಿಗೆ ದೇವಸ್ಥಾನ ಪ್ರವೇಶ ನಿರಾಕರಿಸಿದ ಆರೋಪದಲ್ಲಿ ಅರ್ಚಕನಿಗೆ ಹಲ್ಲೆ

Update: 2018-05-29 15:55 GMT

ಜೈಪುರ, ಮೇ 29: ರಾಜಸ್ತಾನದ ಪುಷ್ಕರ್ ಜಿಲ್ಲೆಯ ಬ್ರಹ್ಮ ದೇವಸ್ಥಾನಕ್ಕೆ ಇತ್ತೀಚೆಗೆ ಆಗಮಿಸಿದ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಹಾಗೂ ಅವರ ಪತ್ನಿಗೆ ದೇವಸ್ಥಾನದ ಗರ್ಭಗುಡಿಗೆ ಪ್ರವೇಶಿಸಲು ಅರ್ಚಕರು ಅವಕಾಶ ನಿರಾಕರಿಸಿದ್ದರು ಎಂದು ಆಕ್ರೋಶಗೊಂಡಿದ್ದ ವ್ಯಕ್ತಿಯೊಬ್ಬ ಅರ್ಚಕನ ಮೇಲೆ ಹಲ್ಲೆ ನಡೆಸಿದ ಘಟನೆ ನಡೆದಿದೆ.

ಭಕ್ತನ ಸೋಗಿನಲ್ಲಿ ದೇವರ ದರ್ಶನಕ್ಕೆ ಸರತಿ ಸಾಲಿನಲ್ಲಿ ನಿಂತಿದ್ದ ಅಶೋಕ್ ಮೇಘವಾಲ್ ಎಂಬ ವ್ಯಕ್ತಿ, ತನ್ನ ಸರದಿ ಬಂದಾಗ ಅರ್ಚಕನ ಮೇಲೆ ಹಲ್ಲೆ ನಡೆಸಿದ್ದಾನೆ . ತಾನೊಬ್ಬ ಡಾಕ್ಟರ್ ಎಂದು ಹೇಳಿಕೊಂಡಿರುವ ಮೇಘವಾಲ್ ಮಾನಸಿಕ ಅಸ್ವಸ್ಥನಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಹಲ್ಲೆ ನಡೆಸಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು ಈ ದೃಶ್ಯ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಹಲ್ಲೆ ನಡೆಸಿದ ಬಳಿಕ ತನ್ನಲ್ಲಿದ್ದ ಹರಿತವಾದ ಆಯುಧವೊಂದನ್ನು ಜನಸಮೂಹದತ್ತ ಝಳಪಿಸಿದ್ದ ಮೇಘವಾಲ್, ಹತ್ತಿರ ಬಂದವರನ್ನು ಕತ್ತರಿಸಿ ಬಿಡುವುದಾಗಿ ಎಚ್ಚರಿಸಿದ್ದ. ಈ ದೇವಸ್ಥಾನದ ಪ್ರವೇಶದ್ವಾರದ ಬಳಿ ಲೋಹಶೋಧಕ ವ್ಯವಸ್ಥೆಯಿದ್ದರೂ ಮೇಘವಾಲ್ ಆಯುಧವನ್ನು ಕೊಂಡೊಯ್ದಿರುವುದು ಇಲ್ಲಿಯ ಭದ್ರತಾ ವ್ಯವಸ್ಥೆಯಲ್ಲಿರುವ ಲೋಪಕ್ಕೆ ಒಂದು ನಿದರ್ಶನವಾಗಿದೆ ಎಂದು ಭಕ್ತರು ಆತಂಕ ವ್ಯಕ್ತಪಡಿಸಿದ್ದಾರೆ.

ಇತ್ತೀಚೆಗೆ ಈ ದೇವಸ್ಥಾನಕ್ಕೆ ರಾಷ್ಟ್ರಪತಿ ರಾಮಾನಾಥ್ ಕೋವಿಂದ್ ಭೇಟಿ ನೀಡಿದ್ದರು. ಅವರ ಪತ್ನಿಗೆ ಮೊಣಕಾಲಿನ ಸಮಸ್ಯೆ ಇದ್ದ ಕಾರಣ ಅವರು ದೇವಸ್ಥಾನದ ಹೊರಗಿನಿಂದಲೇ ಪ್ರಾರ್ಥನೆ ಸಲ್ಲಿಸಿ ವಾಪಾಸು ತೆರಳಿದ್ದರು. ಆದರೆ ಈ ದೃಶ್ಯವನ್ನು ಚಿತ್ರೀಕರಿಸಿಕೊಂಡಿದ್ದ ಕೆಲವು ಕಿಡಿಗೇಡಿಗಳು, ರಾಷ್ಟ್ರಪತಿ ಮತ್ತವರ ಪತ್ನಿಗೆ ಅರ್ಚಕರು ದೇವಸ್ಥಾನಕ್ಕೆ ಪ್ರವೇಶ ನಿರಾಕರಿಸಿದ್ದಾರೆ ಎಂದು ಗಾಳಿಸುದ್ದಿಯನ್ನು ವೀಡಿಯೊ ಸಹಿತ ತೇಲಿಬಿಟ್ಟಿದ್ದು ಈ ವೀಡಿಯೊ ದೃಶ್ಯ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News