ಬಿಜೆಪಿ- ಶಿವಸೇನೆಯ ಮೈತ್ರಿ ಮುಂದುವರಿಯಲಿ: ಗಡ್ಕರಿ

Update: 2018-05-29 16:44 GMT

ಮುಂಬೈ, ಮೇ 29: ಬಿಜೆಪಿ ಹಾಗೂ ಶಿವಸೇನೆಯ ಮಧ್ಯೆ ಕೆಲವು ಭಿನ್ನಾಭಿಪ್ರಾಯಗಳು ಇರಬಹುದು. ಆದರೆ ಈ ಎರಡೂ ಪಕ್ಷಗಳು ಪರಸ್ಪರರ ಜೊತೆಯಿಲ್ಲದೆ ಕಾರ್ಯ ನಿರ್ವಹಿಸಲು ಆಗದು. ಆದ್ದರಿಂದ ಎರಡೂ ಪಕ್ಷಗಳ ಮೈತ್ರಿ ಮುಂದುವರಿಯಬೇಕು ಎಂದು ಆಶಿಸುವುದಾಗಿ ಕೇಂದ್ರ ಸಚಿವ ನಿತಿನ್ ಗಡ್ಕರಿ ತಿಳಿಸಿದ್ದಾರೆ.

ರಾಜಕೀಯದಲ್ಲಿ ಶಾಶ್ವತ ಶತ್ರುಗಳಾಗಲೀ ಮಿತ್ರರಾಗಲೀ ಇರುವುದಿಲ್ಲ ಎಂದ ಗಡ್ಕರಿ, ಎರಡೂ ಪಕ್ಷಗಳ ಮಧ್ಯೆ ಯಾವುದೇ ಸೈದ್ಧಾಂತಿಕ ವ್ಯತ್ಯಾಸಗಳಿಲ್ಲ. ದಿವಂಗತ ಬಾಳ ಠಾಕ್ರೆ ಹಾಗೂ ದಿವಂಗತ ಪ್ರಮೋದ್ ಮಹಾಜನ್ ಅವರು ಹಿಂದುತ್ವದ ವಿಷಯವನ್ನು ಆಧಾರವಾಗಿರಿಸಿಕೊಂಡು ಮಾಡಿರುವ ಒಕ್ಕೂಟ ಇದಾಗಿದೆ. ಎರಡೂ ಪಕ್ಷಗಳ ಮಧ್ಯೆ ಯಾವುದೇ ಸೈದ್ಧಾಂತಿಕ ಭಿನ್ನಾಭಿಪ್ರಾಯಗಳಿಲ್ಲ. ಆದ್ದರಿಂದ ಈ ಒಕ್ಕೂಟ ಮುಂದುವರಿಯಬೇಕು ಎಂಬುದು ತನ್ನ ಆಶಯವಾಗಿದೆ ಎಂದು ಗಡ್ಕರಿ ತಿಳಿಸಿದ್ದಾರೆ.

ಕಳೆದ ನಾಲ್ಕು ವರ್ಷಗಳಲ್ಲಿ ಮೋದಿ ಸರಕಾರದ ಸಾಧನೆಯನ್ನು ವಿವರಿಸಲು ಆಯೋಜಿಸಿದ ಸುದ್ದಿಗೋಷ್ಟಿಯಲ್ಲಿ ಗಡ್ಕರಿ ಮಾತನಾಡುತ್ತಿದ್ದರು. ಮುಂದಿನ ವರ್ಷ ನಡೆಯಲಿರುವ ಮಹಾರಾಷ್ಟ್ರ ವಿಧಾನಸಭೆ ಹಾಗೂ ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಎರಡೂ ಪಕ್ಷಗಳ ಮೈತ್ರಿ ಮರುಸ್ಥಾಪಿಸಲು ಮಧ್ಯಸ್ಥಿಕೆ ವಹಿಸುವ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಗಡ್ಕರಿ, ತಾನು ಸಚಿವಾಲಯದ ಕಾರ್ಯದಲ್ಲಿ ನಿರತನಾಗಿದ್ದೇನೆ. ಅಲ್ಲದೆ ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಹಾಗೂ ಬಿಜೆಪಿ ಮುಖಂಡ ರಾವ್‌ಸಾಹೇಬ್ ದಾನ್ವೆ ಪರಿಸ್ಥಿತಿಯನ್ನು ನಿಭಾಯಿಸಲು ಶಕ್ತರು ಎಂದರು.

ಒಂದು ವೇಳೆ ಪಕ್ಷ ಹೇಳಿದರೆ ತಾನು ಮಧ್ಯಸ್ಥಿಕೆ ವಹಿಸುತ್ತೇನೆ. ರಾಜಕೀಯದಲ್ಲಿ ಏನು ಬೇಕಾದರೂ ಸಾಧ್ಯವಾಗಬಹುದು. ಇಲ್ಲಿ ಯಾರೂ ಶಾಶ್ವತ ಶತ್ರುಗಳೂ ಅಲ್ಲ, ಶಾಶ್ವತ ಮಿತ್ರರೂ ಅಲ್ಲ ಎಂದು ಅವರು ತಿಳಿಸಿದರು. ನಾಗಪುರದಲ್ಲಿ ಆರೆಸ್ಸೆಸ್ ಆಯೋಜಿಸಿರುವ ಕಾರ್ಯಕ್ರಮದಲ್ಲಿ ಮಾಜಿ ರಾಷ್ಟ್ರಪತಿ ಪ್ರಣವ್ ಮುಖರ್ಜಿ ಭಾಗವಹಿಸಿ ಭಾಷಣ ಮಾಡಲು ಒಪ್ಪಿರುವ ಕುರಿತು ಪ್ರತಿಕ್ರಿಯಿಸಿದ ಅವರು, ಆರೆಸ್ಸೆಸ್ ಪಾಕಿಸ್ತಾನದ ಐಎಸ್‌ಐ ಅಲ್ಲ. ಆರೆಸ್ಸೆಸ್ ರಾಷ್ಟ್ರೀಯವಾದಿಗಳ ಒಂದು ಸಂಘಟನೆಯಾಗಿದೆ ಎಂದರು. ಮುಖರ್ಜಿ ಹೊಸ ಆರಂಭಕ್ಕೆ ಮುನ್ನುಡಿ ಬರೆದಿದ್ದಾರೆ. ರಾಜಕೀಯ ಅಸ್ಪ್ರಶ್ಯತೆ ಸರಿಯಲ್ಲ ಎಂದವರು ಹೇಳಿದರು. ರಾಜ್ಯ ರಾಜಕೀಯಕ್ಕೆ ಬರಲು ತನಗೆ ಇಚ್ಚೆಯಿಲ್ಲ ಎಂದೂ ಅವರು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News