ಗಡಿಪ್ರದೇಶಗಳಲ್ಲಿ ಒಎಫ್‌ಸಿ ಅಳವಡಿಸಲು ಯೋಜನೆ: ನಿರ್ಮಲಾ ಸೀತಾರಾಮನ್

Update: 2018-05-29 16:41 GMT

ಹೊಸದಿಲ್ಲಿ, ಮೇ 29: ಗಡಿ ಪ್ರದೇಶಗಳಲ್ಲಿ ಪೌರರು ಹಾಗೂ ಯೋಧರು ಎದುರಿಸುತ್ತಿರುವ ಸಂಪರ್ಕ ಸಮಸ್ಯೆಯನ್ನು ನಿವಾರಿಸುವ ನಿಟ್ಟಿನಲ್ಲಿ ಒಎಫ್‌ಸಿ (ಆಪ್ಟಿಕಲ್ ಫೈಬರ್ ಕೇಬಲ್) ಅಳವಡಿಸಲು ಕೇಂದ್ರ ಸರಕಾರ ಯೋಜಿಸಿದೆ ಎಂದು ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ತಿಳಿಸಿದ್ದಾರೆ.

 ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರದ ನಾಲ್ಕು ವರ್ಷಗಳ ಸಾಧನೆ ಕುರಿತು ಪತ್ರಿಕಾಗೋಷ್ಟಿಯಲ್ಲಿ ಮಾತನಾಡುತ್ತಿದ್ದ ಅವರು, ಗಡಿಪ್ರದೇಶಗಳಲ್ಲಿ ಒಎಫ್‌ಸಿ ಅಳವಡಿಸುವ ವಿಷಯವನ್ನು ಸಂಪುಟ ಸಭೆಯಲ್ಲಿ ಚರ್ಚಿಸಲಾಗಿದ್ದು ಇದಕ್ಕೆ ಅಗತ್ಯವಿರುವ ಹೆಚ್ಚುವರಿ ಹಣವನ್ನು ಹತ್ತು ದಿನದ ಹಿಂದೆಯೇ ಬಿಡುಗಡೆಗೊಳಿಸಲಾಗಿದೆ ಎಂದು ತಿಳಿಸಿದ್ದಾರೆ. ಭಾರತ-ಚೀನಾ ಗಡಿಭಾಗದ ಪ್ರದೇಶದಲ್ಲಿ ಒಎಫ್‌ಸಿ ಅಳವಡಿಸುವ ಕಾರ್ಯಕ್ಕೆ ಶೀಘ್ರ ಚಾಲನೆ ದೊರಕಲಿದೆ. ಇದರಿಂದ ಗಡಿಪ್ರದೇಶದಲ್ಲಿ ಮೊಬೈಲ್ ಹಾಗೂ ರೇಡಿಯೋ ಸಂಪರ್ಕದ ಸಮಸ್ಯೆ ನಿವಾರಣೆಯಾಗಲಿದೆ ಎಂದು ಸಚಿವೆ ತಿಳಿಸಿದರು. ರಕ್ಷಣಾ ಪಡೆಯಲ್ಲಿ ಮಹಿಳೆಯರು ಈಗಾಗಲೇ ಯುದ್ಧವಿಮಾನದ ಪೈಲಟ್‌ಗಳಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಇನ್ನಿತರ ವಿಭಾಗಗಳಲ್ಲೂ ಮಹಿಳೆಯರನ್ನು ನೇಮಕ ಮಾಡಿಕೊಳ್ಳಲು ಸರಕಾರ ಪ್ರಯತ್ನಿಸುತ್ತಿದೆ ಎಂದರು. ಅರುಣಾಚಲ ಭೂಪ್ರದೇಶದಲ್ಲಿ ಚೀನಾ ಗಣಿಗಾರಿಕೆ ನಡೆಸುತ್ತಿದೆ ಎಂಬ ಮಾಧ್ಯಮಗಳ ವರದಿಯ ಬಗ್ಗೆ ಪ್ರತಿಕ್ರಿಯಿಸಿದ ಅವರು, ಈ ಬಗ್ಗೆ ವರದಿಯನ್ನು ಮಾಧ್ಯಮದಲ್ಲಿ ಗಮನಿಸಿದ್ದೇನೆ. ಆದರೆ ಮಾಧ್ಯಮದ ವರದಿಯ ಆಧಾರದಲ್ಲಿ ಯಾವುದೇ ಪ್ರತಿಕ್ರಿಯೆ ನೀಡಲಾಗದು. ವಾಸ್ತವಿಕ ಸ್ಥಿತಿಯನ್ನು ಅರಿಯಬೇಕಿದೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News