ಕೋಟೆಪುರದಲ್ಲಿ 2018-19ನೇ ಶಾಲಾ ಪ್ರಾರಂಭೋತ್ಸವ

Update: 2018-05-30 12:42 GMT

ಕೋಟೆಪುರ, ಮೇ. 29: ಸುದೀರ್ಘ ರಜೆ ಮುಗಿದ ಬಳಿಕ ವಿದ್ಯಾರ್ಥಿಗಳು ಮರಳಿ ಶಾಲೆಯ ಅಂಗಳದತ್ತ ಹೆಜ್ಜೆ ಹಾಕಿದ್ದಾರೆ. ಶಾಲಾ ಆವರಣದಲ್ಲಿ ಮಕ್ಕಳ ಕಲರವ ಅತ್ತಿಂದಿತ್ತ ಓಡಾಟವನ್ನು ಗಮನಿಸಿದಾಗ ಈ ಶಾಲಾ ಪರಿಸರದಲ್ಲಿ ಹಬ್ಬದ ವಾತಾವರಣ ಎದ್ದು ಕಾಣುತ್ತಿದೆ. ಶಿಕ್ಷಣವನ್ನು ಪ್ರೀತಿಯಿಂದ ಸ್ವೀಕರಿಸಿ ನಿಮ್ಮ ಉಜ್ವಲ ಭವಿಷ್ಯವನ್ನು ರೂಪಿಸಿಕೊಳ್ಳಿ ಎಂದು ಸಯ್ಯಿದ್ ಮದನಿ ಚಾರಿಟೇಬಲ್ ಟ್ರಸ್ಟ್(ರಿ) ಉಳ್ಳಾಲ ಇದರ ಜತೆ ಕಾರ್ಯದರ್ಶಿಯಾದ ಹಾಜಿ ಎ.ಕೆ ಮೊಹಿಯುದ್ದೀನ್‍ರವರು ಅನುದಾನಿತ ಟಿಪ್ಪು ಸುಲ್ತಾನ್ ಶಿಕ್ಷಣ ಸಂಸ್ಥೆಯಲ್ಲಿ ನಡೆದ 2018-19ರ ಶೈಕ್ಷಣಿಕ ವರ್ಷದ ಶಾಲಾ ಪ್ರಾರಂಬೋತ್ಸವದ ಕಾರ್ಯಕ್ರಮವನ್ನು ಉದ್ಘಾಟಿಸುತ್ತಾ ಮಾತಾಡಿದರು. ಈ ಶೈಕ್ಷಣಿಕ ವರ್ಷವು ಪವಿತ್ರ ತಿಂಗಳಾದ ರಂಝಾನ್ ಉಪವಾಸವನ್ನು ಆಚರಿಸುವ ಸಂದರ್ಭದಲ್ಲಿ ಪ್ರಾರಂಭಗೊಂಡಿದ್ದು ನಿಮಗೆಲ್ಲರಿಗೂ ಅಲ್ಲಾಹು ಒಳಿತನ್ನು ನೀಡಲಿ ಶುಭ ಹಾರೈಸಿದರು.

ಶಿಕ್ಷಣಕ್ಕಾಗಿ ಸರಕಾರದಿಂದ ಸಿಗುವ ಸವಲತ್ತನ್ನು ಸದ್ಬಳಕೆ ಮಾಡಿಕೊಳ್ಳಿ ಎಂದು ಅಧ್ಯಕ್ಷ ಸ್ಥಾನದಿಂದ      ಸಯ್ಯಿದ್ ಮದನಿ ಚಾರಿಟೇಬಲ್ ಟ್ರಸ್ಟ್ (ರಿ) ಉಳ್ಳಾಲ ಇದರ ಉಪಾಧ್ಯಕ್ಷರಾದ ಜನಾಬ್ ಹಾಜಿ ಇಬ್ರಾಹಿಂರವರು ಕರೆ ನೀಡಿದರು. ಶ್ರದ್ದೆ,ಭಯ,ಭಕ್ತಿಯು ಮನುಷ್ಯನನ್ನು ಯಶಸ್ವಿಗೆ ಕೊಂಡುಯ್ಯುತ್ತದೆ. ವಿದ್ಯಾರ್ಥಿಗಳಾದ ನೀವೆಲ್ಲರೂ ವಿದ್ಯಾರ್ಥಿ ಜೀವನದಲ್ಲಿ ಅದನ್ನು ಅಳವಡಿಸಿಕೊಳ್ಳಿ ಎಂದು ಸಯ್ಯಿದ್ ಮದನಿ ಚಾರಿಟೇಬಲ್ ಟ್ರಸ್ಟ್ (ರಿ) ಉಳ್ಳಾಲ ಇದರ ಆಡಳಿತಾಧಿಕಾರಿಯಾದ ಜನಾಬ್ ಅಬ್ದುಲ್ ಲತೀಫ್ ರವರು ಮುಖ್ಯಅತಿಥಿ ಸ್ಥಾನದಿಂದ ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು. 

ಸಂಸ್ಥೆಯ ಮುಖ್ಯ ಗುರುಗಳಾದ ಎಮ್.ಹೆಚ್ ಮಲಾರ್‍ರವರು ಪ್ರಾಸ್ತವಿಕವಾಗಿ ಮಾತಾಡಿದರು. ಕಳೆದ ಶೈಕ್ಷಣಿಕ ವರ್ಷದ ಫಲಿತಾಂಶದ ವಿವರವನ್ನು ನೀಡಿದರು. ಪ್ರೌಢ ಶಾಲಾ ವಿಭಾಗದ ಪ್ರಭಾರ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಗೀತಾ.ಡಿ ಯವರು ಸ್ವಾಗತಿಸಿದರು. ಚಿತ್ರಕಲಾ ಶಿಕ್ಷಕ ಬಿ.ಎಂ ರಫೀಕ್ ತುಂಬೆಯವರು ಕಾರ್ಯಕ್ರಮವನ್ನು ನಿರೂಪಿಸಿದರು. ಸಹ ಶಿಕ್ಷಕ ಅಖಿಲ್‍ರವರು ವಂದಿಸಿದರು. ಕಾರ್ಯಕ್ರಮ ಪ್ರಾರಂಭದಲ್ಲಿ ಶಾಲಾ ವಿದ್ಯಾರ್ಥಿಗಳು ಹಾಗೂ ಹೆತ್ತವರೊಂದಿಗೆ “ವಿಶೇಷ ದಾಖಲಾತಿ ಆಂದೋಲನ”ದ ಬಗ್ಗೆ ಅತಿಥಿಗಳ ಜತೆಯಾಗಿ ಜಾಥವನ್ನು ಏರ್ಪಡಿಸಿ ಒಂದನೇ ತರಗತಿಗೆ ದಾಖಲಾತಿಯನ್ನು ಬಯಸಿದ ಮಕ್ಕಳನ್ನು ಸ್ವಾಗತದೊಂದಿಗೆ ಶಾಲೆಗೆ ಕರೆತರಲಾಯಿತು. ಈ ಸಂದರ್ಭ ಮಕ್ಕಳ ರಕ್ಷಣೆ ಶಿಕ್ಷಣ ಬಲವರ್ದನೆ ನಮ್ಮೆಲರ ಹೊಣೆ ಎಂಬ ಶೈಕ್ಷಣಿಕ ಧ್ಯೇಯ ವಾಕ್ಯ ಘೋಷಣೆಯನ್ನು ಮೊಳಗಿಸಲಾಯಿತು. ಕಾರ್ಯಕ್ರಮದಲ್ಲಿ ಶೈಕ್ಷಣಿಕ ವರ್ಷದ 1ನೇ ತರಗತಿಗೆ ದಾಖಲಾತಿಯನ್ನು ಮಾಡಿಸಲಾಯಿತು. ಪ್ರಾಥಮಿಕ ಮತ್ತು ಪ್ರೌಢ ಶಾಲಾ ವಿದ್ಯಾರ್ಥಿಗಳಿಗೆ ಪುಸ್ತಕವನ್ನು ವಿತರಿಸಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News