ರಾಜಕಾಲುವೆಗಳ ಒತ್ತುವರಿ ತೆರವಿಗೆ ಜಿಲ್ಲಾಧಿಕಾರಿ ಸಮಿತಿ ರಚನೆ: ಐವನ್ ಡಿಸೋಜಾ

Update: 2018-05-30 09:03 GMT

ಮಂಗಳೂರು, ಮೇ 30: ನಗರದಲ್ಲಿ ಮಂಗಳವಾರ ಸುರಿದ ಭಾರೀ ಮಳೆಯಿಂದಾಗಿ ವಿವಿಧ ಕಡೆಗಳಲ್ಲಿ ಕೃತಕ ನೆರೆ ಸಂಭವಿಸಲು ಕಾರಣವಾಗಿರುವ ರಾಜಕಾಲುವೆಗಳ ಒತ್ತುವರಿಯನ್ನು ತೆರವುಗೊಳಿಸುವ ಸಲುವಾಗಿ ಜಿಲ್ಲಾಧಿಕಾರಿ ಸಮಿತಿ ರಚಿಸಿದ್ದು, ಮೂರು ದಿನಗಳೊಳಗೆ ಸಮಿತಿ ವರದಿ ನೀಡಲಿದೆ ಎಂದು ವಿಧಾನ ಪರಿಷತ್‌ನ ಪ್ರಭಾರ ಮುಖ್ಯ ಸಚೇತಕ ಐವನ್ ಡಿಸೋಜಾ ತಿಳಿಸಿದ್ದಾರೆ.

ಮಂಗಳೂರು ಮಹಾನಗರ ಪಾಲಿಕೆಯ ತಮ್ಮ ಕಚೇರಿಯಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹಲವು ಕಡೆ ರಾಜಕಾಲುವೆಗಳನ್ನು ಮುಚ್ಚಿ ಕಟ್ಟಡ, ಮನೆಗಳನ್ನು ನಿರ್ಮಾಣ ಮಾಡಿರುವುದು ಗಮನಕ್ಕೆ ಬಂದಿದೆ. ಈ ಅಡೆತಡೆಗಳನ್ನು ನಿವಾರಿಸಲು ಸಮಿತಿ  ನೀಡುವ ವರದಿ ಆಧಾರದಲ್ಲಿ ಕ್ರಮ ಕೈಗೊಳ್ಳುವುದಾಗಿ ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್ ತಮಗೆ ತಿಳಿಸಿರುವುದಾಗಿ ಹೇಳಿದರು.

ಮಂಗಳವಾರ ಭಾರೀ  ಪ್ರಮಾಣದಲ್ಲಿ  ಮಳೆಯಾದ ಪರಿಣಾಮ ನಗರದ ಗುರುಪುರದ ಫಲ್ಗುಣಿ ಮತ್ತು ನೇತ್ರಾವತಿ ನದಿಯಲ್ಲಿ ನೀರಿನ ಜಲಮಟ್ಟ ತೀವ್ರಗೊಂಡಿದ್ದ ಕಾರಣ ಮಳೆ ನೀರು ನದಿಗಳಿಗೆ ಸೇರದೆ ತಗ್ಗು ಪ್ರದೇಶಗಳಲ್ಲಿ ಕೃತಕ ನೆರೆ ಸಂಭವಿಸಲು ಕಾರಣವಾಗಿದೆ ಎಂಬುದಾಗಿ ಜಿಲ್ಲಾಧಿಕಾರಿ ಮಾಹಿತಿ ನೀಡಿದ್ದಾರೆ. ಸದ್ಯ ನೀರಿನ ಮಟ್ಟ ತಗ್ಗಿದ್ದು, ಜಪ್ಪಿನಮೊಗರು ಪ್ರದೇಶದಲ್ಲಿ ಸ್ವಲ್ಪ ಮಟ್ಟಿನ ನೀರು ನಿಂತಿದ್ದು, ಅದನ್ನು ತೆರವುಗೊಳಿಸುವ ಕಾರ್ಯ ನಡೆಸಲಾಗುತ್ತಿದೆ. ಉಳಿದಂತೆ ಹಾನಿಗೊಳಗಾದವರಿಗೆ, ಮೃತಪಟ್ಟ ಕುಟುಂಬಗಳಿಗೆ ಪರಿಹಾರ ನೀಡುವ ಕಾರ್ಯ ತುರ್ತಾಗಿ ನಡೆಸಲಾಗುತ್ತಿದೆ ಎಂದು ಐವನ್ ಡಿಸೋಜಾ ಹೇಳಿದರು.

ಪರಿಹಾರ ವಿತರಣೆಗೆ ಹಣದ ಕೊರತೆ ಇಲ್ಲ
ಪ್ರಾಕೃತಿಕ ವಿಕೋಪಕ್ಕೆ ಸಂಬಂಧಿಸಿ ಪರಿಹಾರ ವಿತರಣೆಗೆ ಜಿಲ್ಲಾಡಳಿತಕ್ಕೆ ಈಗಾಗಲೇ ಸರಕಾರದಿಂದ 3 ಕೋಟಿ ರೂ. ಬಿಡುಗಡೆಯಾಗಿದೆ. ಹಾಗಾಗಿ ಪರಿಹಾರ ವಿತರಣೆಗೆ ಹಣದ ಕೊರತೆ ಇಲ್ಲ ಎಂದು ಜಿಲ್ಲಾಧಿಕಾರಿ ಈಗಾಗಲೇ ಸ್ಪಷ್ಟಪಡಿಸಿದ್ದಾರೆ ಎಂದು ಐವನ್ ಡಿಸೋಜಾ ಹೇಳಿದರು.

ಪ್ರಾಕೃತಿಕ ವಿಕೋಪಕ್ಕೆ ಬಲಿಯಾದವರಿಗೆ ಸರಕಾರದಿಂದ ತಲಾ 4 ಲಕ್ಷ ರೂ. ಪರಿಹಾರ ನೀಡಲಾಗುತ್ತದೆ. ಆದರೆ ಮುಖ್ಯಮಂತ್ರಿಗೆ ಮಾಡಲಾದ ವಿಶೇಷ ಮನವಿ ಮೇರೆಗೆ ಮಂಗಳೂರಿನಲ್ಲಿ ಮಂಗಳವಾರ ಸಾವಿಗೀಡಾದ ಇಬ್ಬರು ಮೃತರ ಕುಟುಂಬಗಳಿಗೆ ಇಂದು ಬೆಳಗ್ಗೆ ಜಿಲ್ಲಾಧಿಕಾರಿಯವರು ತಲಾ ಐದು ಲಕ್ಷ ರೂ.ಗಳ ಪರಿಹಾರ ಧನವನ್ನು ವಿತರಿಸಿದ್ದಾರೆ.

ಮಂಗಳೂರು ತಾಲೂಕಿನಲ್ಲಿ ಮಳೆಯಿಂದಾಗಿ 52 ಮನೆಗಳಿಗೆ ಹಾನಿಯಾಗಿದ್ದು, ಬಂಟ್ವಾಳದಲ್ಲಿ 16 ಮನೆಗಳಿಗೆ ಹಾನಿಯಾಗಿದೆ. ಉಳಿದಂತೆ ಇತರ ತಾಲೂಕುಗಳಲ್ಲಿ ನಿನ್ನೆ ತಡರಾತ್ರಿವರೆಗೆ ಮಳೆಯಿಂದ ಭಾರೀ ಹಾನಿ ಸಂಭವಿಸಿದ ಬಗ್ಗೆ ವರದಿಯಾಗಿಲ್ಲ. ಮೂಡುಬಿದಿರೆಯಲ್ಲಿ ಸಿಡಿಲು ಬಡಿತದಿಂದ ಮಹಿಳೆಯೊಬ್ಬರು ಮೃತಪಟ್ಟಿದ್ದಾರೆ. ಅವರ ಮರಣೋತ್ತರ ಪರೀಕ್ಷೆಯ ವರದಿಗಾಗಿ ಕಾಯಲಾಗುತ್ತಿದೆ. ಹಾನಿಗೊಳಗಾದ ಮನೆಗಳಿಗೆ ಪರಿಹಾರ ನೀಡುವಂತೆ ಜಿಲ್ಲಾಧಿಕಾರಿಗೆ ಸೂಚಿಸಲಾಗಿದೆ. ಜಿಲ್ಲಾಡಳಿತ ಹಾಗೂ ನಗರ ಪಾಲಿಕೆಯು ಇಂದು ಸಂಜೆಯಿಂದ ಈ ಬಗ್ಗೆ ತುರ್ತು ಕ್ರಮ ಕೈಗೊಳ್ಳುವುದಾಗಿ ತಿಳಿಸಿದೆ ಎಂದು ಐವನ್ ಡಿಸೋಜಾ ಹೇಳಿದರು.

ನಗರದಲ್ಲಿ ಏಳು ಗಂಜಿ ಕೇಂದ್ರಗಳನ್ನು ತೆರೆಯಲಾಗಿದೆ. ಈ ಕೇಂದ್ರಗಳಿಗೆ ಇಂದಿರಾ ಕ್ಯಾಂಟೀನ್ ಮೂಲಕವೂ ಆಹಾರ ವ್ಯವಸ್ಥೆಯನ್ನು ಮಾಡುವಂತೆ ಸೂಚಿಸಲಾಗಿದೆ. ನಗರ ಪಾಲಿಕೆಯ ಆಯುಕ್ತರ ಜತೆಯಲ್ಲೂ ಚರ್ಚಿಸಲಾಗಿದ್ದು, ಪಾಲಿಕೆಯಿಂದ ಸಾಧ್ಯವಾಗುವ ಎಲ್ಲಾ ರೀತಿಯ ಪರಿಹಾರ ಕ್ರಮಗಳನ್ನು ತುರ್ತಾಗಿ ಕೈಗೊಳ್ಳಲು ಸೂಚಿಸಲಾಗಿದೆ ಎಂದು ಅವರು ಹೇಳಿದರು.

ಅಪಾಯದ ಮುನ್ಸೂಚನೆ ಇದ್ದಲ್ಲಿ ಕಂಟ್ರೋಲ್ ರೂಂಗೆ ಕರೆ ಮಾಡಿ

ಮಳೆಯಿಂದಾಗಿ ಮನೆಗಳಲ್ಲಿ ಇರುವುದು ಸುರಕ್ಷಿತ ಅಲ್ಲವೆಂದು ಭಾವಿಸುವವರು ತಕ್ಷಣ ಜಿಲ್ಲಾಧಿಕಾರಿ ಕಚೇರಿ ಕಂಟ್ರೋಲ್ ರೂಂಗೆ ಕರೆ ಮಾಡಿದರೆ, ಸೂಕ್ತ ವ್ಯವಸ್ಥೆಯನ್ನು ಕಲ್ಪಿಸಲಾಗುತ್ತದೆ ಎಂದು ಐವನ್ ಡಿಸೋಜಾ ಸಾರ್ವಜನಿಕರಿಗೆ ಮನವಿ ಮಾಡಿದರು.

ಆರೋಗ್ಯ ಸಮಸ್ಯೆಗಳ ಬಗ್ಗೆ ಎಚ್ಚರಿಕೆ ವಹಿಸಲು ಸಲಹೆ
ಕೃತಕ ನೆರೆ ಸಂಭವಿಸಿದ ಪ್ರದೇಶಗಳಲ್ಲಿ ನೀರು ನಿಂತು ಸೊಳ್ಳೆಗಳ ಉತ್ಪತ್ತಿಗೆ ಕಾರಣವಾಗಿ ಮಲೇರಿಯಾದಂತಹ ಸಾಂಕ್ರಾಮಿಕ ರೋಗಗಳಿಗೆ ಕಾರಣವಾಗುವ ಸಾಧ್ಯತೆಗಳಿವೆ. ಈ ಬಗ್ಗೆ ಜಿಲ್ಲಾಧಿಕಾರಿ ವೈದ್ಯಾಧಿಕಾರಿಗಳ ಸಭೆ ನಡೆಸಿ ಕೃತಕ ನೆರೆ ಸಂಭವಿಸಿದ ಪ್ರದೇಶಗಳಲ್ಲಿ ಜನರ ರಕ್ತ ತಪಾಸಣೆಯನ್ನು ಉಚಿತವಾಗಿ ನಡೆಸಲು ಸರಕಾರ ಹಾಗೂ ಖಾಸಗಿ ಮೆಡಿಕಲ್ ಕಾಲೇಜುಗಳ ಸಹಕಾರ ಪಡೆಯುವಂತೆ ತಿಳಿಸಲಾಗಿದೆ.

ಮುಖ್ಯಮಂತ್ರಿ ಕುಮಾರಸ್ವಾಮಿಯವರು ನಿನ್ನೆಯ ಮಳೆಯ ಪರಿಸ್ಥಿತಿ ಬಗ್ಗೆ ತಿಳಿಯಲು ಮೂರು ಬಾರಿ ಕರೆ ಮಾಡಿ ವಿಚಾರಿಸಿರುವುದಾಗಿ ಜಿಲ್ಲಾಧಿಕಾರಿ ತಿಳಿಸಿದ್ದಾರೆ. ತಮಗೂ ಮುಖ್ಮಯಂತ್ರಿ ಹಾಗೂ ಉಪ ಮುಖ್ಯಮಂತ್ರಿ ಪರಮೇಶ್ವರ್ ಅವರು ಕೂಡಾ ಕರೆ ಮಾಡಿ ಇಲ್ಲಿನ ಪರಿಸ್ಥಿತಿಯನ್ನು ಅರಿತುಕೊಂಡಿದ್ದಾರೆ ಎಂದು ಐವನ್ ಡಿಸೋಜಾ ಹೇಳಿದರು.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News