×
Ad

ಅಂತಾರಾಷ್ಟ್ರೀಯ ಖಗೋಳ ವಿಜ್ಞಾನ ಒಲಿಂಪಿಯಾಡ್‌ಗೆ ಪ್ರತ್ಯುಷ್ ಪೊದುವಾಳ್ ಆಯ್ಕೆ

Update: 2018-05-30 15:34 IST

ಮಂಗಳೂರು, ಮೇ 30: ಅಂತಾರಾಷ್ಟ್ರೀಯ ಖಗೋಳಶಾಸ್ತ್ರ ಮತ್ತು ಖಗೋಳ ವಿಜ್ಞಾನ ಒಲಿಂಪಿಯಾಡ್ (ಐಒಎಎ) 2018ರಲ್ಲಿ ಭಾಗವಹಿಸಲು ಆಯ್ಕೆಯಾದ ಐದು ಭಾರತೀಯರಲ್ಲಿ ಸಿಎಫ್‌ಎಎಲ್‌ನ ವಿದ್ಯಾರ್ಥಿ ಪ್ರತ್ಯುಷ್ ಪೊದುವಾಳ್ ಕೂಡಾ ಒಬ್ಬರಾಗಿದ್ದಾರೆ. ದಕ್ಷಿಣ ಭಾರತದಿಂದ ಆಯ್ಕೆಯಾದ ಏಕೈಕ ವಿದ್ಯಾರ್ಥಿ ಇವರು ಎಂದು ಸಿಎಫ್‌ಎಎಲ್‌ನ ಕಾರ್ಯಕ್ರಮ ಸಂಜಕಿ ಸೆವರಿನ್ ರೊಸಾರಿಯೊ ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿಂದು ಈ ಬಗ್ಗೆ ಮಾಹಿತಿ ನೀಡಿದ ಅವರು, ಐಒಎಎ ನವೆಂಬರ್ 2018ರಲ್ಲಿ ಚೀನಾದ ಬೀಜಿಂಗ್‌ನಲ್ಲಿ ನಡೆಯಲಿದೆ. 45 ದೇಶಗಳ 200ಕ್ಕೂ ಅಧಿಕ ವಿದ್ಯಾರ್ಥಿಗಳು ಈ ಒಲಿಂಪಿಯಾಡ್‌ನಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಅವರು ಹೇಳಿದರು.

ಪ್ರಶಾಂತ್ ಪೊದುವಾಳ್ ಹಾಗೂ ಸುನೀತಾ ಪೊದುವಾಳ್ ಪುತ್ರರಾದ ಪ್ರತ್ಯುಷ್ ಪೊದುವಾಳ್ 10ನೆ ತರಗತಿವರೆಗೆ ಪಣಂಬೂರಿನ ದೆಲ್ಲಿ ಪಬ್ಲಿಕ್ ಸ್ಕೂಲ್‌ನಲ್ಲಿ ವಿದ್ಯಾಭ್ಯಾಸ ಮಾಡಿದ್ದು, ಪಿಯುಸಿಯನ್ನು ಕೆನರಾ ಕಾಲೇಜಿನಲ್ಲಿ ಅಭ್ಯಸಿಸಿದ್ದಾರೆ. ಸಿಎಫ್‌ಎಎಲ್ ನಲ್ಲಿ ಅಡ್ವಾನ್ಸ್‌ಡ್ ಸಾಯನ್ಸ್ ಮತ್ತು ಗಣಿತಶಾಸ್ತ್ರವನ್ನು ಅಭ್ಯಸ ಮಾಡುತ್ತಿದ್ದು, ಬೆಂಗಳೂರಿನ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಸೈನ್ಸ್‌ನಲ್ಲಿ ಪ್ರವೇಶ ಪಡೆದಿರುವ ಪ್ರತ್ಯುಷ್ 2017-18ರ ಕೆವಿಪಿವೈ ಪರೀಕ್ಷೆಯಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದಿದ್ದಾರೆ. ಇಂಟರ್‌ನ್ಯಾಷನಲ್ ಫಿಸಿಕ್ಸ್ ಒಲಿಂಪಿಯಾಡ್‌ನ ಮೊದಲದ ಹಂತದ ಪರೀಕ್ಷೆಯಲ್ಲಿಯೂ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದಿದ್ದಾರೆ ಎಂದು ಅವರು ವಿವರ ನೀಡಿದರು.

ಮೂಲ ವಿಜ್ಞಾನದಲ್ಲಿ ಆಸಕ್ತಿ ಇರುವುದರಿಂದ ತಾನು ಸಿಇಟಿ ಪರೀಕ್ಷೆಯನ್ನು ಬದಿಗೊತ್ತಿ, ಕೆವಿಪಿವೈ ಪರೀಕ್ಷೆಯಲ್ಲಿ ಶ್ರಮ ವಹಿಸಿದ್ದೆ. ಇದೀಗ ಒಲಿಂಪಿಯಾಡ್‌ಗೆ ಆಯ್ಕೆಯಾಗುವಲ್ಲಿ ಸಿಎಫ್‌ಎಲ್‌ನಲ್ಲಿ ಪಡೆದ ತರಬೇತು ಅವಕಾಶ ಕಲ್ಪಿಸಿದೆ ಎಂದು ಪ್ರತ್ಯುಷ್ ಪೊದುವಾಳ್ ತಿಳಿಸಿದರು.

ಗೋಷ್ಠಿಯಲ್ಲಿ ಸಿಎಪ್‌ಎಎಲ್‌ನ ಕಾರ್ಯಕ್ರಮ ಸಂಯೋಜಕ ವಿಜಯ್ ಮೊರಾಸ್, ಪ್ರತ್ಯುಷ್ ಪೋಷಕರಾದ ಪ್ರಶಾಂತ್ ಪೊದುವಾಳ್ ಹಾಗೂ ಸುನಿತಾ ಪೊದುವಾಳ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News