ಬಜರಂಗದಳದ ಕಾರ್ಯಕರ್ತರಿಂದ ಹತ್ಯೆ ಆರೋಪಿಸಿ ಕುಟುಂಬಸ್ಥರಿಂದ ದೂರು- ಪೊಲೀಸ್ ಅಧೀಕ್ಷಕ ಲಕ್ಷಣ್ ನಿಂಬರಗಿ
ಉಡುಪಿ, ಮೇ 30: ದನದ ವ್ಯಾಪಾರಿಯೋರ್ವರು ಸಂಶಯಾಸ್ಪದವಾಗಿ ಮೃತಪಟ್ಟ ಘಟನೆ ಉಡುಪಿಯ ಪೆರ್ಡೂರು ಸಮೀಪದ ಕಾಫಿ ತೋಟದಲ್ಲಿ ಇಂದು ನಡೆದಿದೆ. ಘಟನೆಗೆ ಬಜರಂಗದಳದ ಕಾರ್ಯಕರ್ತರು ಕಾರಣ ಎಂದು ಮೃತರ ಸಂಬಂಧಿಕರು ದೂರು ನೀಡಿರುವುದಾಗಿ ಉಡುಪಿ ಪೊಲೀಸ್ ಅಧೀಕ್ಷಕ ಲಕ್ಷಣ್ ನಿಂಬರಗಿ ತಿಳಿಸಿದ್ದಾರೆ.
ಘಟನೆಗೆ ಸಂಬಂಧಿಸಿ ಮಾತನಾಡಿದ ಅವರು ಇಂದು ಬೆಳಗ್ಗೆ ನಮ್ಮ ಪಿಎಸ್ಐ ಅವರಿಗೆ ಕರೆಯೊಂದು ಬಂದಿದ್ದು, ಜಾನುವಾರು ಕಳ್ಳತನ ನಡೆಯುತ್ತಿದೆ ಎಂದು ಹೇಳಲಾಗಿತ್ತು. ಪಿಎಸ್ಐ ಅವರು ಮೂವರು ಸಿಬ್ಬಂದಿಗಳೊಂದಿಗೆ ಘಟನಾ ಸ್ಥಳಕ್ಕೆ ಹೋಗಿದ್ದಾರೆ. ಈ ಸಂದರ್ಭ ಅಲ್ಲಿ ಒಂದು ವಾಹನವಿದ್ದು, ಅದರಲ್ಲಿದ್ದವರು ಪರಾರಿಯಾಗಿದ್ದರು. ದನ ಕಳ್ಳತಕ್ಕೆ ಸಂಬಂಧಿಸಿ ಪೊಲೀಸ್ ಠಾಣೆಯಲ್ಲಿ ಒಂದು ದೂರು ದಾಖಲಾಗಿದೆ.
ನಂತರ ಸುಮಾರು 11 ಗಂಟೆಗೆ ಮತ್ತೊಂದು ಕರೆ ಬಂದಿದ್ದು, ಒಂದು ಮೃತದೇಹ ಸಿಕ್ಕಿರುವುದಾಗಿ ಮಾಹಿತಿ ದೊರಕಿದ್ದು, ಅದಕ್ಕೆ ಸಂಬಂಧಪಟ್ಟಂತೆ ಮಂಗಳೂರಿನವರು ದೂರು ನೀಡಿದ್ದಾರೆ. ಮೃತರ ಸಂಬಂಧಿಕರು ಹೇಳುವಂತೆ ಸ್ಕಾರ್ಪಿಯೋದಲ್ಲಿ ಮೂರು ಜನ ಹೋಗುತ್ತಿರುವ ವೇಳೆ ಗುಂಪೊಂದು ಅಡ್ಡಗಟ್ಟಿದ್ದು, ಈ ಸಂದರ್ಭ ಯುವಕರು ಸ್ಕಾರ್ಪಿಯೋದಿಂದ ಓಡಿ ಹೋಗಿದ್ದು, ವಯಸ್ಸಾದ ಹಸನಬ್ಬ ಅವರು ಓಡಿ ಹೋಗಲು ಸಾಧ್ಯವಾಗದೆ ಕುಸಿದುಬಿದ್ದು ಮೃತಪಟ್ಟಿದ್ದಾರೆ ಈ ಬಗ್ಗೆ ಅವರ ಸಂಬಂಧಿಕರು ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಎರಡು ಪ್ರತ್ಯೇಕ ದೂರು ದಾಖಲಾಗಿರುವುದಾಗಿ ಲಕ್ಷಣ್ ನಿಂಬರಗಿ ತಿಳಿಸಿದ್ದಾರೆ.
ಘಟನಾ ಸ್ಥಳದಲ್ಲಿ ಸುಮಾರು 12 ದನಗಳಿದ್ದು, ಎರಡು ದನಗಳು ಸತ್ತಿವೆ. ಈ ಬಗ್ಗೆಯೂ ಕೇಸು ದಾಖಲಾಗಿದೆ ಎಂದು ಅವರು ಹೇಳಿದರು. ಮೃತರ ಸಂಬಂಧಿಕರು ಹತ್ಯೆಯಾಗಿರುವ ಬಗ್ಗೆ ಸಂಶಯ ವ್ಯಕ್ತಪಡಿಸಿ, ಬಜರಂಗದಳದ ಕಾರ್ಯಕರ್ತರಾದ ಸೂರ್ಯ ಹಾಗು ಇನ್ನಿತರರ ವಿರುದ್ಧ ದೂರು ನೀಡಿದ್ದಾರೆ. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿ ತಪ್ಪಿತಸ್ಥರನ್ನು ಬಂಧಿಸಲಾಗುವುದು ಎಂದು ಅವರು ಮಾಹಿತಿ ನೀಡಿದ್ದಾರೆ. ಮರಣೋತ್ತರ ಪರೀಕ್ಷೆ ನಡೆಯುತ್ತಿದ್ದು, ಘಟನೆಗೆ ಸ್ಪಷ್ಟ ಕಾರಣ ದೊರೆತ ನಂತರ ತನಿಖೆ ನಡೆಸುವುದಾಗಿ ಪೊಲೀಸ್ ಅಧಿಕಾರಿ ಲಕ್ಷಣ್ ನಿಂಬರಗಿ ಹೇಳಿದ್ದಾರೆ.