10ನೇ ತರಗತಿ ಪರೀಕ್ಷೆಯಲ್ಲಿ ಶೇ 99.31 ಅಂಕ ಗಳಿಸಿದ ಆಟೋ ಚಾಲಕನ ಪುತ್ರಿ
ಅಹ್ಮದಾಬಾದ್, ಮೇ 30: ಗುಜರಾತ್ ಮಾಧ್ಯಮಿಕ ಮತ್ತು ಹಿರಿಯ ಮಾಧ್ಯಮಿಕ ಶಿಕ್ಷಣ ಮಂಡಳಿಯ ಹತ್ತನೇ ತರಗತಿ ಪರೀಕ್ಷೆಯಲ್ಲಿ ಆಟೋರಿಕ್ಷಾ ಚಾಲಕರೊಬ್ಬರ ಪುತ್ರಿ ಶೇ.99.31ರಷ್ಟು ಅಂಕಗಳನ್ನು ಗಳಿಸಿ ಉತ್ತೀರ್ಣಳಾಗಿ ಸಾಧನೆ ಮಾಡಿದ್ದಾಳೆ.
ಎಫ್‍ಡಿ ಹೈಸ್ಕೂಲ್ ವಿದ್ಯಾರ್ಥಿನಿಯಾಗಿರುವ 16 ವರ್ಷದ ಅಫ್ರೀನ್ ಶೇಖ್ ಗೆ ಮುಂದೆ ವೈದ್ಯಕೀಯ ಶಿಕ್ಷಣ ಪಡೆದು ವೈದ್ಯೆಯಾಗುವ ಕನಸಿದೆ.
ಅಫ್ರೀನ್ ತಂದೆ ಶೇಖ್ ಮುಹಮ್ಮದ್ ಹಂಝರಿಗೆ ತಮ್ಮ ಪುತ್ರಿಯ ಶೈಕ್ಷಣಿಕ ಸಾಧನೆ ಅಪಾರ ಸಂತಸ ತಂದಿದೆ. ಅವರ ಸೀಮಿತ ಆದಾಯದಿಂದ ಪುತ್ರಿಯ ಶಿಕ್ಷಣಕ್ಕೆ ಹಣ ಹೊಂದಿಸಲು ಅವರು ವಸ್ತುಶಃ ಕಷ್ಟ ಪಡುತ್ತಿದ್ದಾರೆ. ನಾಲ್ಕು ಮಂದಿಯ ಕುಟುಂಬವನ್ನು ಸಲಹುತ್ತಿರುವ ಹಂಝ ತಮ್ಮ ಪುತ್ರಿಯ ವೈದ್ಯೆಯಾಗಬೇಕೆಂಬ ಕನಸನ್ನು ಈಡೇರಿಸಲು ಸಕಲ ಯತ್ನ ನಡೆಸುವುದಾಗಿ ತಿಳಿಸಿದ್ದಾರೆ.
ಗಂಡು ಮಕ್ಕಳು ಹಾಗೂ ಹೆಣ್ಣು ಮಕ್ಕಳ ನಡುವೆ ತಾವು ಯಾವುದೇ ಬೇಧಭಾವ ಮಾಡಿಲ್ಲ ಎಂದು ಹೇಳುವ ಅವರು, ಆಕೆ ಉತ್ತಮ ಶಿಕ್ಷಣ ಪಡೆದು ಜೀವನದಲ್ಲಿ ಸ್ವಾವಲಂಬಿಯಾದರೆ ಅದಕ್ಕಿಂತ ಹೆಚ್ಚಿನ ಸಂತೋಷ ಬೇರಿಲ್ಲ ಎಂದು ಹೇಳುತ್ತಾರೆ.