ಮಳೆಗೆ ಹಾನಿಗೀಡಾದ ಪ್ರದೇಶಗಳಿಗೆ ಶಾಸಕ ರಾಜೇಶ್ ನಾಯ್ಕ ಭೇಟಿ-ಪರಿಶೀಲನೆ
ಬಂಟ್ವಾಳ, ಮೇ 30: ವಾಯುಭಾರ ಕುಸಿತದ ಹಿನ್ನೆಲೆಯಲ್ಲಿ ಮಂಗಳವಾರ ಸುರಿದ ಭಾರೀ ಮಳೆಗೆ ಹಾನಿಗೀಡಾದ ಪ್ರದೇಶಗಳಿಗೆ ಬಂಟ್ವಾಳ ಶಾಸಕ ರಾಜೇಶ್ ನಾಯ್ಕಾ ಅವರು ಬುಧವಾರ ಭೇಟಿ ನೀಡಿ ಪರಿಶೀಲನೆ ನಡೆಸಿದರಲ್ಲದೆ ಈ ಬಗ್ಗೆ ತುರ್ತು ಕ್ರಮಕ್ಕೆ ಸ್ಥಳದಿಂದಲೇ ಅಧಿಕಾರಿಗಳಿಗೆ ಸೂಚಿಸಿದರು.
ತಾಲೂಕಿನಾದ್ಯಂತ ಮಂಗಳವಾರ ಸುರಿದ ಮಳೆಗೆ ವ್ಯಾಪಕ ಹಾನಿಯಾಗಿದ್ದು, ಅವುಗಳಲ್ಲಿ ನರಿಕೊಂಬು, ಆಲಾಡಿ, ಮಾರ್ನಬೈಲು, ಮಂಚಿ ಪ್ರದೇಶಗಳಿಗೆ ಬಂಟ್ವಾಳ ಶಾಸಕ ರಾಜೇಶ್ ನಾಕ್ ಉಳಿಪ್ಪಾಡಿ ಅವರು ಬುಧವಾರ ಭೇಟಿ ನೀಡಿದರು. ಸ್ಥಳದಿಂದಲೇ ಅಧಿಕಾರಿಗಳೊಂದಿಗೆ ದೂರವಾಣಿ ಮೂಲಕ ಮಾತ ನಾಡಿದ ಅವರು, ತುರ್ತು ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದರು.
ನರಿಕೊಂಬು ಗ್ರಾಮದಲ್ಲಿ ವಿಶ್ವನಾಥ ಹಾಗೂ ಬಾಬು ಎಂಬವರ ಮನೆ ಗೋಡೆ ಕುಸಿದು ಹಾನಿಯಾಗಿದ್ದರೆ, ಎರಿಮಲೆ ಕಾಡೆದಿ ದೇವಸ್ಥಾನದ ಮುಂಭಾಗದಲ್ಲಿ ಮಣ್ಣು ಕುಸಿದಿದ್ದು, ಈ ಬಗ್ಗೆ ನಷ್ಟದ ಕುರಿತು ಅಂದಾಜಿಸುವಂತೆ ಸೂಚಿಸಿದರು.
ಸಜೀಪ ಮುನ್ನೂರು ಗ್ರಾಮದ ಮಾರ್ನಬೈಲ್ ಸಂಬಾರಗುರಿ ಎಂಬಲ್ಲಿ ಸುಮಾರು 4.50 ಎಕ್ರೆ ಪ್ರದೇಶದ ಅಡಕೆ ತೋಟದಲ್ಲಿ ನೀರು ತುಂಬಿದೆ. ಇಲ್ಲಿನ ಸುನೀತಾ ಚಂದ್ರಶೇಖರ್ ಎಂಬವರಿಗೆ ಸೇರಿದ 3.50 ಎಕ್ರೆ ಅಡಕೆ ತೋಟದಲ್ಲಿ ನೀರು ನಿಂತಿದ್ದಲ್ಲದೆ ಗಾಳಿಗೆ ಸುಮಾರು 20 ಕ್ಕೂ ಹೆಚ್ಚು ಫಲಭರಿತ ಅಡಕೆ ಗಿಡಗಳು ಧರಾಶಾಯಿಯಾಗಿದ್ದನ್ನು ಶಾಸಕ ವೀಕ್ಷಿಸಿದರು.
ತೋಟಗಳಿಗೆ ನುಗ್ಗಿದ ನೀರು:
ಮಂಗಳೂರಿಗೆ ಕುಡಿಯುವ ನೀರು ಪೂರೈಕೆಗಾಗಿ ತುಂಬೆ ವೆಂಟೆಡ್ ಡ್ಯಾಂನಲ್ಲಿ ನೀರು ಸಂಗ್ರಹಕ್ಕೆ ಆರು ಮೀಟರ್‌ಗೆ ಹಾಕಲಾದ ಹಲಗೆಯನ್ನು ತೆರವು ಗೊಳಿಸದಿರುವುದರಿಂದ ಸಾಂಬಾರಗುರಿ ಪ್ರದೇಶದಲ್ಲಿ ತೋಟಗಳಿಗೆ ನೀರು ನುಗ್ಗಿ ಮುಳುಗಡೆಯಾಗಿದ್ದು, ಅಡಕೆ ತೋಟಕ್ಕೆ ಅಪಾರ ನಷ್ಟವುಂಟಾಗುವ ಆತಂಕ ಕೃಷಿಕರನ್ನು ಕಾಡಿದೆ. ಇದನ್ನು ಪರಿಶೀಲಿಸಿದ ಶಾಸಕ ರಾಜೇಶ್ ನಾಯ್ಕೆ ತಾಲೂಕು ತೋಟಗಾರಿಕಾ ಇಲಾಖಾಧಿಕಾರಿಯವರನ್ನು ದೂರವಾಣಿ ಮೂಲಕ ಸಂಪರ್ಕಿಸಿ ನಷ್ಟದ ಬಗ್ಗೆ ಪರಿಶೀಲಿಸುವಂತೆ ಸೂಚಿಸಿದರು.
ಡ್ಯಾಂನಿಂದ ನೀರು ನಿಲುಗಡೆಗೊಳಿಸುವ ಸಂದರ್ಭ ಮುಳುಗಡೆಯಾಗುವ ಕೃಷಿ ಭೂಮಿಯ ಸಂತ್ರಸ್ತ ರೈತರಿಗೆ ಪರಿಹಾರ ನೀಡದ ಕುರಿತು ಶೀಘ್ರವೇ ಜಿಲ್ಲಾಧಿಕಾರಿಯವರೊಂದಿಗೆ ಮಾತುಕತೆ ನಡೆಸುವುದಾಗಿ ಶಾಸಕ ರಾಜೇಶ್ ನಾಯ್ಕಾ ಈ ಸಂದರ್ಭ ಸಂತ್ರಸ್ತರಿಗೆ ಭರವಸೆ ನೀಡಿದರು.
ಸಜೀಪ ಮುನ್ನೂರುಗ್ರಾಮದ ಅಲಾಡಿ ಜುಮಾದಿ ದೈವಸ್ಥಾನದ ತಡೆಗೋಡೆ ಸಂಪೂರ್ಣ ಕುಸಿದಿದ್ದು, ನಷ್ಟದ ಬಗ್ಗೆ ಅಂದಾಜಿಸುವಂತೆ ಸಂಬಂಧಪಟ್ಟವರಿಗೆ ಸೂಚಿಸಿದರು.
ಶಾಸಕರ ಜೊತೆಗೆ ತಾಪಂ ಸದಸ್ಯ ಪ್ರಭಾಕರ ಪ್ರಭು, ಕ್ಷೇತ್ರ ಬಿಜೆಪಿ ಸಮಿತಿ ಪ್ರಧಾನ ಕಾರ್ಯದರ್ಶಿ ರಾಮದಾಸ ಬಂಟ್ವಾಳ್, ಎಪಿಎಂಸಿ ಸದಸ್ಯ ಪುರುಷೋತ್ತಮ ಶೆಟ್ಟಿ, ಪ್ರಮುಖರಾದ ಗಣೇಶ್ ರೈ ಮಾಣಿ, ರಮಾನಾಥ ರಾಯಿ, ದಿನೇಶ್ ಅಮ್ಟೂರು, ನರಿಕೊಂಬು ಪಂಚಾಯತ್ ಅಧ್ಯಕ್ಷ ಯಶೋಧರ ಕರ್ಬೆಟ್ಟು, ಮಾಜಿ ತಾಪಂ ಸದಸ್ಯ ಆನಂದ ಶಂಭೂರು, ಪುರುಷೋತ್ತಮ ಟೈಲರ್, ಪ್ರವೀಣ ಗಟ್ಟಿ, ಅರವಿಂದ ಭಟ್, ರಮೇಶ್ ರಾವ್ ಸಂತೋಷ ಗುಂಡಿಮಜಲು ಮೊದಲಾದವರಿದ್ದರು.
ಸುಮಾರು 5 ಲಕ್ಷಕ್ಕೂ ಅಧಿಕ ರೂ. ಆಸ್ತಿ ಹಾನಿ:
ಮಳೆಯಿಂದಾಗಿ ಬಂಟ್ವಾಳ ತಾಲೂಕಿನ ವಿವಿಧೆಡೆಗಳಲ್ಲಿ ಸಾರ್ವಜನಿಕರ ಅಪಾರ ಸೊತ್ತುಗಳಿಗೆ ಹಾನಿಯಾಗಿದೆ. ಇವುಗಳ ಮೌಲ್ಯ ಸುಮಾರು 5 ಲಕ್ಷಕ್ಕೂ ರೂ. ಅಧಿಕ ಎಂದು ಅಂದಾಜಿಸಲಾಗಿದೆ.
ಬಿ.ಮೂಡ ಗ್ರಾಮದ ಕಡವೆಕರಿಯ ಎಂಬಲ್ಲಿ ಭಾಸ್ಕರ ಎಂಬವರ ಮನೆ ಆವರಣ ಗೋಡೆ ಕುಸಿತ, ಪುದು ಗ್ರಾಮದ ಸುಜೀರು ಎಂಬಲ್ಲಿ ಮನೆ ಕಂಪೌಂಡ್ ಕುಸಿದು ಹಾನಿ, ಬಿ.ಮೂಡ ಗ್ರಾಮದ ನಂದರಬೆಟ್ಟು ಎಂಬಲ್ಲಿ ಅಬ್ದುಲ್ ಲತೀಫ್ ಎಂಬವರ ಮನೆಗೆ ಹಾನಿ, ಬಿ.ಮೂಡ ಗ್ರಾಮದ ಪಲ್ಲಮಜಲು ಎಂಬಲ್ಲಿ ಸಾಧು ಎಂಬವರ ಮನೆಗೆ ಕಂಪೌಂಡ್ ಕುಸಿದು ಹಾನಿ, ಮಂಚಿ ಗ್ರಾಮದ ಕುಕ್ಕಾಜೆಬೈಲು ಎಂಬಲ್ಲಿ ಸತೀಶ ಎಂಬವರ ಮನೆ ಗೋಡೆ ಕುಸಿದು ಆಂಶಿಕ ಹಾನಿ, ಅಮ್ಮುಂಜೆ ಗ್ರಾಮದ ರೋಲ್ಫಿ ಫರ್ನಾಂಡೀಸ್ ಅವರಮನೆ ಗೋಡೆ ಮಣ್ಣು ಕುಸಿದು ಮನೆಯೊಳಗೆ ನೀರು ಬಿದ್ದಿರುವುದು, ಹೊಸಮಾರು ಎಂಬಲ್ಲಿ ಜನಾರ್ದನ ಎಂಬವರ ಮನೆ ಕಂಪೌಂಡ್‌ಗೆ ಹಾನಿ, ಹೊಸಮಾರು ಎಂಬಲ್ಲಿ ದಯಾನಂದ ಅವರ ಕಂಪೌಂಡ್ ಕುಸಿದು ಹಾನಿ, ನಂದರಬೆಟ್ಟು ಎಂಬಲ್ಲಿ ರಜಾಕ್ ಮನೆಕಂಪೌಂಡ್ ಬಿದ್ದು ಹಾನಿ, ನರಿಕೊಂಬು ಗ್ರಾಮದ ವಿಶ್ವನಾಥ ಎಂಬವರ ಮನೆಗೆ ಹಾನಿ, ನರಿಕೊಂಬು ಗ್ರಾಮದ ಬಾಬು ಎಂಬವರ ಮನೆಯ ಗೋಡೆ ಕುಸಿದು ಹಾನಿ, ಅಮ್ಮುಂಜೆ ಗ್ರಾಮದ ಕಲಾಯಿ ಆದಂ ಎಂಬವರ ಮನೆ ಗೋಡೆ ಕುಸಿತ, ಬಾರೆಕಾಡು ಎಂಬಲ್ಲಿ ವಸಂತ ಎಂಬವರ ಮನೆ ಮೇಲೆ ಮರ ಬಿದ್ದು ತೀವ್ರ ಹಾನಿ, ಬಾರೆಕಾಡು ದರ್ಣಪ್ಪ ಪೂಜಾರಿ ಅವರ ಮನೆ ಮೇಲೆ ಮರ ಬಿದ್ದು ಹಾನಿ, ನಿತ್ಯಾನಂದನಗರದಲ್ಲಿ ಶೇಖ್ ಅಬ್ದುಲ್ಲ ಹನೀಫ್ ಮನೆ ಕಂಪೌಂಡ್ ಕುಸಿದು ಹಾನಿ, ವಿಟ್ಲಮೂಡ್ನೂರು ಗ್ರಾಮದಲ್ಲಿ ಪಂಚಾಯತ್ ಕಂಪೌಂಡ್‌ಗೆ ಹಾನಿ, ಅಮ್ಮುಂಜೆ ಗ್ರಾಮದ ಬೆಂಜನಪದವು ಭದ್ರಕಾಳಿ ದೇವಸ್ಥಾನದ ಹತ್ತಿರ ಹೊಂಡದ ನೀರು ತುಂಬಿ ಮನೆಯೊಳಗೆ ಹೋಗುವ ಸಮಸ್ಯೆ, ಕಳ್ಳಿಗೆ ಜಾರಂದಗುಡ್ಡೆ ಎಂಬಲ್ಲಿ ಹೇಮಾವತಿ ಅವರ ಮನೆಯ ಕಂಪೌಂಡ್ ಕುಸಿತ, ತುಂಬೆ ಗ್ರಾಮದ ಅರಬನಗುಡ್ಡೆ ಪರಿಸರದಲ್ಲಿ ಕಂಪೌಂಡ್ ಕುಸಿತ, ಪೆರ್ಲಬೈಲು ಉಮೇಶ್ ಪೂಜಾರಿ ಮನೆ ಕಂಪೌಂಡ್ ಕುಸಿತ, ಕೊಡಿಹಡ್ಯ ಎಂಬಲ್ಲಿ ಕಂಪೌಂಡ್ ಕುಸಿತ, ಬಡಗಬೆಳ್ಳೂರು ಗ್ರಾಮದಲ್ಲಿ ಕಂಪೌಂಡ್ ಕುಸಿತದ ಕುರಿತು ವರದಿಗಳು ದಾಖಲಾಗಿವೆ.