ದನದ ವ್ಯಾಪಾರಿಯ ಅಸಹಜ ಸಾವು: ಸಮಗ್ರ ತನಿಖೆಗೆ ಡಿವೈಎಫ್ಐ ಆಗ್ರಹ
ಮಂಗಳೂರು, ಮೇ 30: ಉಡುಪಿಯ ಹಿರಿಯಡ್ಕದಲ್ಲಿ ನಡೆದಿರುವ ದನದ ವ್ಯಾಪಾರಿ ಹುಸೈನ್ ಅಸಹಜ ಸಾವು ಕೊಲೆ ಎಂಬ ಅನುಮಾನ ಮೇಲ್ನೋಟಕ್ಕೆ ವ್ಯಕ್ತವಾಗುತ್ತಿದ್ದು, ಕರಾವಳಿಯ ಚುನಾವಣಾ ಫಲಿತಾಂಶದಿಂದ ಪ್ರೇರಿತಗೊಂಡ ಮತೀಯ ಗೂಂಡಾಗಳ ದಾಳಿಯಿಂದ ಸಾವು ಸಂಭವಿಸಿರುವ ಸಾಧ್ಯತೆಯಿದ್ದು ಈ ಕುರಿತು ಮುಖ್ಯಮಂತ್ರಿ ಕುಮಾರಸ್ವಾಮಿ ಸಮಗ್ರ ತನಿಖೆಗೆ ಕ್ರಮ ಕೈಗೊಳ್ಳಬೇಕು ಹಾಗೂ ಅಲ್ಪಸಂಖ್ಯಾತರ ಮೇಲಿನ ದಾಳಿಗಳ ವಿರುದ್ಧ ಸೂಕ್ತ ಕ್ರಮಗಳ ಮೂಲಕ ಅಲ್ಪಸಂಖ್ಯಾತ ಸಮುದಾಯಗಳಿಗೆ ಧೈರ್ಯ ತುಂಬಬೇಕು ಎಂದು ಡಿವೈಎಫ್‌ಐ ಆಗ್ರಹಿಸುತ್ತದೆ ಎಂದು ಡಿವೈಎಫ್‌ಐ ರಾಜ್ಯಾಧ್ಯಕ್ಷ ಮುನೀರ್ ಕಾಟಿಪಳ್ಳ ತಿಳಿಸಿದ್ದಾರೆ.
ಉಡುಪಿ ಜಿಲ್ಲೆಯಲ್ಲಿ ಈ ಹಿಂದೆಯು ಗೋರಕ್ಷಕರೆಂದು ಕರೆಸಲ್ಪಡುವ ಶಕ್ತಿಗಳಿಂದ ಕೆಂಜೂರು ಪ್ರವೀಣ್ ಪೂಜಾರಿ, ಪಾಟಾಳಿ ಕೃಷ್ಣಯ್ಯ ಸಹಿತ ಕೆಲವು ಹತ್ಯೆಗಳು, ಹಾಜಬ್ಬ ಹಸನಬ್ವ ಬೆತ್ತಲೆ ಪ್ರಕರಣಗಳು ನಡೆದಿವೆ. ಮೇಲ್ನೋಟಕ್ಕೆ ಹಿರಿಯಡ್ಕದ ದನದ ವ್ಯಾಪಾರಿಯ ಅಸಹಜ ಸಾವು ಗೋರಕ್ಷಕರಿಂದ ನಡೆದ ಕೃತ್ಯದಂತೆ ಗೋಚರಿಸುತ್ತದೆ. ದನದ ವ್ಯಾಪಾರಿಗಳು ಸಂಚರಿಸುತ್ತಿದ್ದ ಸ್ಕಾರ್ಪಿಯೊ ವಾಹನಕ್ಕೆ ಹಾನಿಯುಂಟಾಗಿರುವುದು ದಾಳಿ ಸಾಧ್ಯತೆಯನ್ನು ಎತ್ತಿಹಿಡಿಯುತ್ತದೆ. ವಿಧಾನಸಭಾ ಚುನಾವಣೆಯಲ್ಲಿ ಈ ಭಾಗದಲ್ಲಿ ಬಿಜೆಪಿಗೆ ದೊರಕಿರುವ ದೊಡ್ಡ ಗೆಲುವು ಇಂತಹ ಶಕ್ತಿಗಳ ಬಲವನ್ನು ಹೆಚ್ಚಿಸಿದೆ.
ಚುನಾವಣಾ ಫಲಿತಾಂಶದ ಬೆಳವಣಿಗೆಯಿಂದ ಹಿರಿಯಡ್ಕ ದಾಳಿ ನಡೆದಿರುವ ಅನುಮಾನ ಸಾರ್ವಜನಿಕರಿಂದ ವ್ಯಕ್ತವಾಗುತ್ತಿದೆ. ಮುಖ್ಯಮಂತ್ರಿ ಕುಮಾರ ಸ್ವಾಮಿಯವರು ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಬೇಕು, ಸಮಗ್ರ ತನಿಖೆ ನಡೆಸಿ ಬಲಿಯಾದ ಹುಸೈನ್ ಕುಟುಂಬಕ್ಕೆ ನ್ಯಾಯ ಒದಗಿಸಬೇಕು. ಕರಾವಳಿಯಲ್ಲಿ ಪರ್ಯಾಯ ಸರಕಾರ ನಡೆಸಲು ಯತ್ನಿಸುತ್ತಿರುವ ಕೋಮುಶಕ್ತಿಗಳ ಯತ್ನವನ್ನು ಆರಂಭದಲ್ಲೆ ಮಟ್ಟಹಾಕಬೇಕು ಎಂದು ಮುನೀರ್ ಕಾಟಿಪಳ್ಳ ಮುಖ್ಯಮಂತ್ರಿಯನ್ನು ಒತ್ತಾಯಿಸಿದ್ದಾರೆ.