×
Ad

ಕ್ಷೇತ್ರದಲ್ಲಿದ್ದುಕೊಂಡು ನೋವಿಗೆ ಸ್ಪಂಧಿಸುತ್ತೇನೆ: ಸೊರಕೆ

Update: 2018-05-31 17:36 IST

ಕಾಪು, ಮೇ 31: ವಿಧಾನಸಭಾ ಚುನಾವಣೆಯಲ್ಲಿ ಉಂಟಾದ ಸೋಲಿನಿಂದ ಕಂಗೆಡದೇ, ಕ್ಷೇತ್ರದಲ್ಲಿದ್ದುಕೊಂಡು ಕಾರ್ಯಕರ್ತರ ನೋವಿಗೆ ಧ್ವನಿಯಾಗಿ ಸ್ಪಂಧಿಸುತ್ತೇನೆ ಮಾಜಿ ಸಚಿವ ವಿನಯಕುಮಾರ್ ಸೊರಕೆ ಹೇಳಿದರು

ಕಾಪು ಬ್ಲಾಕ್ ಕಾಂಗ್ರೆಸ್‌ನ ವತಿಯಿಂದ ಬುಧವಾರ ಉಚ್ಚಿಲ - ಮೂಳೂರು ತುಂಬೆ ಕರ್ಕೇರ ಸಭಾಭವನದಲ್ಲಿ ಜರಗಿದ ಕಾಂಗ್ರೆಸ್ ಕಾರ್ಯಕರ್ತರ ಕೃತಜ್ಞತಾ ಸಭೆಯಲ್ಲಿ ಕಾರ್ಯಕರ್ತರಿಗೆ ಕೃತಜ್ಞತೆ ಸಲ್ಲಿಸಿ ಅವರು ಮಾತನಾಡಿದರು.

ಬಿಜೆಪಿ ನಡೆಸಿದ ಅಪಪ್ರಚಾರದಿಂದ ಚುನಾವಣೆಯಲ್ಲಿ ನಮಗೆ ಸೋಲಾಗಿದೆ. ಆದರೆ ಚುನಾವಣಾ ನಂತರದಲ್ಲಿ ಜಾತ್ಯಾತೀತ ಶಕ್ತಿಗಳ ಒಗ್ಗೂಡುವಿಕೆಗೆ ಸಹಕಾರಿಯಾಗಿದೆ. ರಾಜ್ಯದಲ್ಲಿ ನಮ್ಮದೇ ಸಮ್ಮಿಶ್ರ ಸರಕಾರ ಆಡಳಿತಕ್ಕೆ ಬಂದಿದ್ದು, ಕಾರ್ಯಕರ್ತರು ಯಾವುದೇ ಕಾರಣಕ್ಕೂ ಎದೆಗುಂದಬೇಕಿಲ್ಲ. ಕಾರ್ಯಕರ್ತರು ನಿರಾಶರಾಗದೆ, ಪಕ್ಷ ಸಂಘಟನೆಯಲ್ಲಿ ನಿರಂತರ ಕೈಜೋಡಿಸುವಂತೆ ಅವರು ವಿನಂತಿಸಿದರು. ಅವರು ಜನರ ಸೇವೆ ಮಾಡಲು ಅಧಿಕಾರವೇ ಮುಖ್ಯವಲ್ಲ ಎಂದರು.

ಕಾಂಗ್ರೆಸ್ ಜಿಲ್ಲಾಧ್ಯಕ್ಷ ಜನಾರ್ದನ ತೋನ್ಸೆ ಮಾತನಾಡಿ, ಪಕ್ಷಕ್ಕೆ ಆಗಿರುವ ಸೋಲು ವೈಯಕ್ತಿಕವಾಗಿ ನಮಗೆಲ್ಲರಿಗೂ ಆಗಿರುವ ಸೋಲಾಗಿದೆ. ಈ ಸೋಲಿನಿಂದ ನಾವು ಕಲಿಯಬೇಕಿರುವುದು ಬಹಳಷ್ಟಿದೆ. ಸೋಲಿನ ಬಗ್ಗೆ ನಿರಾಶೆಯಿಂದ ಕುಳಿತುಕೊಳ್ಳದೇ ನಮ್ಮಿಂದ ಆಗಿರುವ ತಪ್ಪುಗಳನ್ನು ಸರಿಪಡಿಸಿಕೊಂಡು, ಪಕ್ಷ ಸಂಘಟನೆಗೆ ಪೂರಕವಾಗಿ ನಾವೆಲ್ಲರೂ ಜೊತೆ ಸೇರಿ ಕೆಲಸ ಮಾಡಬೇಕಿದೆ ಎಂದರು.

ಎಐಸಿಸಿ ಸದಸ್ಯ ಅಮೃತ್ ಶೆಣೈ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎಂ.ಎ. ಗಫೂರ್, ಕೆಪಿಸಿಸಿ ಕಾರ್ಯದರ್ಶಿ ದೇವಿಪ್ರಸಾದ್ ಶೆಟ್ಟಿ, ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಕಾಪು ದಿವಾಕರ ಶೆಟ್ಟಿ, ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ದಿನೇಶ್ ಕೋಟ್ಯಾನ್, ಉಸ್ತುವಾರಿ ಅಶೋಕ್ ಕುಮಾರ್ ಕೊಡವೂರು, ಮಹಿಳಾ ಕಾಂಗ್ರೆಸ್ ಜಿಲ್ಲಾಧ್ಯಕ್ಷೆ ಗೀತಾ ವಾಗ್ಲೆ, ಇಂಟಕ್ ಜಿಲ್ಲಾಧ್ಯಕ್ಷ ಗಣೇಶ್ ಕೋಟ್ಯಾನ್, ಪುರಸಭಾ ಅಧ್ಯಕ್ಷೆ ಮಾಲಿನಿ, ಉಪಾಧ್ಯಕ್ಷ ಎಚ್. ಉಸ್ಮಾನ್, ಸ್ಥಾಯೀ ಸಮಿತಿ ಅಧ್ಯಕ್ಷೆ ಶಾಂತಲತಾ ಶೆಟ್ಟಿ, ಪ್ರಮುಖರಾದ ಇಗ್ನೇಷಿಯಸ್ ಡಿ. ಸೋಜ, ವಿನಯ ಬಲ್ಲಾಳ್, ದೀಪಕ್ ಕುಮಾರ್ ಎರ್ಮಾಳ್, ಎಚ್. ಅಬ್ದುಲ್ಲಾ, ಪ್ರಭಾವತಿ ಸಾಲ್ಯಾನ್, ಕಿಶೋರ್ ಕುಮಾರ್, ಮೆಲ್ವಿನ್ ಡಿ ಸೋಜ ಉಪಸ್ಥಿತರಿದ್ದರು.

ಅಧ್ಯಕ್ಷತೆ ವಹಿಸಿದ್ದ ಕಾಪು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ನವೀನ್‌ಚಂದ್ರ ಜೆ. ಶೆಟ್ಟಿ ಸ್ವಾಗತಿಸಿದರು. ಯುವ ಕಾಂಗ್ರೆಸ್ ರಾಜ್ಯ ಕಾರ್ಯದರ್ಶಿ ಅಬ್ದುಲ್ ಅಜೀಜ್ ವಂದಿಸಿದರು. ಕಾಪು ಬ್ಲಾಕ್ ಕಾಂಗ್ರೆಸ್ ಕಾರ್ಯದರ್ಶಿ ಅಮೀರ್ ಕಾಪು ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News