ಆಳ್ವಾಸ್ ಹೆಲ್ತ್ ಸೆಂಟರ್‌ನಲ್ಲಿ ಸೆಂಟ್ರಲ್ ಗ್ಯಾಸ್, ಮೊಬೈಲ್ ಅಪ್ಲಿಕೇಶನ್, ಕೆಫೆಟೇರಿಯಾ ಉದ್ಘಾಟನೆ
ಮೂಡುಬಿದಿರೆ, ಮೇ 31: ಗ್ರಾಮೀಣ, ಬಡ ಮಧ್ಯಮ ವರ್ಗದ ಜನರಿಗೆ ಉತ್ತಮ ಆರೋಗ್ಯ ಸೇವೆಯನ್ನು ಆಳ್ವಾಸ್ ಆಸ್ಪತ್ರೆಯು ನೀಡುತ್ತಾ ಬಂದಿದೆ. ಕಾಲದ ಅವಶ್ಯಕತೆಗನುಗುಣವಾಗಿ ಹೊಸ ಹೊಸ ತಾಂತ್ರಿಕತೆಯನ್ನು ಅಳವಡಿಸಿಕೊಳ್ಳುವ ಮೂಲಕ ಜನರಿಗೆ ಉತ್ತಮ ಆರೋಗ್ಯ ಸೇವೆಯನ್ನು ಒದಗಿಸಲು ಸಾಧ್ಯ ಎಂದು ಹಿರಿಯ ವೈದ್ಯ ಡಾ.ರತ್ನಾಕರ ಶೆಟ್ಟಿ ಹೇಳಿದರು.
ಅವರು ಆಳ್ವಾಸ್ ಹೆಲ್ತ್ ಸೆಂಟರ್‌ನಲ್ಲಿ ಗುರುವಾರ ಸೆಂಟ್ರಲ್ ಗ್ಯಾಸ್, ಮೊಬೈಲ್ ಅಪ್ಲಿಕೇಶನ್‌ನ್ನು ಉದ್ಘಾಟಿಸಿ ಮಾತನಾಡಿದರು. ಹಿರಿಯ ದಂತವೈದ್ಯ ಡಾ. ವಿನಯಕುಮಾರ್ ಹೆಗ್ಡೆ ಅವರು ಕೆಫೆಟೇರಿಯಾವನ್ನು ಉದ್ಘಾಟಿಸಿ ಮಾತನಾಡಿ ಆಳ್ವಾಸ್ ಆಸ್ಪತ್ರೆಯು ಬಡಜನರಿಗೆ ಕೈಗೆಟಕುವ ದರದಲ್ಲಿ ಆರೋಗ್ಯ ಸೇವೆಯನ್ನು ನೀಡಿದೆ. ಬಡಜನರಲ್ಲಿ ಮಾನವೀಯ ಕಾಳಜಿಯನ್ನು ತೋರಿದೆ. ಎಲ್ಲದರಲ್ಲೂ ಗುಣ ಮಟ್ಟವನ್ನು ಕಾಯ್ದುಕೊಂಡು ಬಂದಿರುವುದೇ ಸಂಸ್ಥೆಯು ಉನ್ನತಿ ಸಾಧಿಸಲು ಸಾಧ್ಯವಾಗಿದೆ ಎಂದರು.
ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ.ಮೋಹನ ಆಳ್ವ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿ ಆಳ್ವಾಸ್ ಆಸ್ಪತ್ರೆಯಲ್ಲಿ ಸೇವಾ ಮನೋಭಾವನೆಯಿಂದ ಚಿಕಿತ್ಸೆ ನೀಡಲಾಗುತ್ತಿದೆಯೇ ಹೊರತು ವ್ಯಾಪಾರೀಕರಣಕ್ಕೆ ಒತ್ತು ನೀಡಿಲ್ಲ. ಈ ಮನೋಧರ್ಮದಲ್ಲೇ ಸಂಸ್ಥೆಯು ಮನ್ನಡೆಯುತ್ತಿದೆ. ಈಗ ಎಲ್ಲಾ ಕ್ಷೇತ್ರಗಳಲ್ಲಿ ಸವಾಲುಗಳಿದ್ದು ಅಂತಹ ಸವಾಲುಗಳನ್ನು ಎದುರಿಸಿ ಮುನ್ನಡೆಸುವುದರಲ್ಲೇ ನಮ್ಮ ಶಕ್ತಿ, ಸಾಮರ್ಥ್ಯ ಅಡಗಿದೆ ಎಂದರು.
ಇದೇ ಸಂದರ್ಭದಲ್ಲಿ ಮೋಹನ ಆಳ್ವ ಅವರ 67ನೇ ಹುಟ್ಟು ಹಬ್ಬದ ಹಿನ್ನಲೆಯಲ್ಲಿ ಪುತ್ರನಾದ ವಿವೇಕ್ ಆಳ್ವ, ಡಾ.ವಿನಯ ಆಳ್ವ, ಸೊಸೆ ಡಾ.ಹಾನಾ ಶೆಟ್ಟಿ ಗೌರವಿಸಿದರು. ಆಸ್ಪತ್ರೆಯ ಹೃದಯರೋಗ ತಜ್ಞ ಡಾ. ಸದಾನಂದ ನಾಯಕ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಆಸ್ಪತ್ರೆಯ ಹಿರಿಯ ವೈದ್ಯ ಡಾ.ಹರೀಶ್ ನಾಯಕ್ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಡಾ.ಮಮತ ವಂದಿಸಿದರು. ವೇಣುಗೋಪಾಲ್ ಶೆಟ್ಟಿ ಕಾರ್ಯಕ್ರಮ ನಿರ್ವಹಿಸಿದರು.