×
Ad

‘ಕಾನೂನು ಬಾಹಿರ ಚಟುವಟಿಕೆಗಳಿಗೆ ದುಶ್ಚಟಗಳೇ ಕಾರಣ’

Update: 2018-05-31 20:03 IST

ಉಡುಪಿ, ಮೇ 31: ಸಮಾಜದಲ್ಲಿ ನಡೆಯುವ ಕಾನೂನು ಬಾಹಿರ ಚಟುವಟಿಕೆಗಳಿಗೆ ವ್ಯಕ್ತಿ ದುಶ್ಚಟಗಳಿಗೆ ಬಲಿಯಾಗಿರುವುದೇ ಪ್ರಮುಖ ಕಾರಣ ಎಂದು ಉಡುಪಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ವೆಂಕಟೇಶ್ ನಾಯ್ಕಾ ಟಿ. ಹೇಳಿದ್ದಾರೆ.

ಜಿಲ್ಲಾಡಳಿತ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ತಂಬಾಕು ನಿಯಂತ್ರಣ ಘಟಕ ಮತ್ತು ನಿಷೇಧ ಕೋಶ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಉಡುಪಿ ಹಾಗೂ ಜಿಲ್ಲಾ ಪೊಲೀಸ್ ಇಲಾಖೆ ಗಳ ಸಂಯುಕ್ತ ಆಶ್ರಯದಲ್ಲಿ ಗುರುವಾರ ಉದ್ಯಾವರದ ಟ್ರಿನಿಟಿ ಕೈಗಾರಿಕಾ ಸಂಸ್ಥೆ ಯಲ್ಲಿ ನಡೆದ ಜಿಲ್ಲಾ ಮಟ್ಟದ ವಿಶ್ವ ತಂಬಾಕು ರಹಿತ ದಿನ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡುತಿದ್ದರು.

ಜಗತ್ತಿನಲ್ಲಿ ಸಂಭವಿಸುವ ಮಾನವನ ಮರಣ ಪ್ರಮಾಣಕ್ಕೆ ಧೂಮಪಾನವು 2ನೇ ದೊಡ್ಡ ಕಾರಣವಾಗಿದೆ. ಧೂಮಪಾನದಿಂದ ವ್ಯಕ್ತಿಯಲ್ಲಿ ಉಸಿರಾಟದ ತೊಂದರೆ, ಕ್ಯಾನ್ಸರ್, ಹೃದಯಾಘಾತ ಸೇರಿದಂತೆ ಹಲವು ಕಾಯಿಲೆಗಳು ಕಾಣಿಸಿಕೊಳ್ಳಲಿದೆ. ಧೂಮಪಾನದ ದುಷ್ಪರಿಣಾಗಳ ಕುರಿತು ಸಮಾಜದಲ್ಲಿ ಅರಿವು ಮೂಡಿಸುವ ಕಾಯಕ್ರಮಗಳು ಹೆಚ್ಚಿನ ಸಂಖ್ಯೆಯಲ್ಲಿ ನಡೆಯಬೇಕು. ಪ್ರತಿಯೊಬ್ಬ ವ್ಯಕ್ತಿ ಸಹ ಉತ್ತಮ ಹವ್ಯಾಸಗಳನ್ನು ರೂಢಿಸಿಕೊಳ್ಳಬೇಕು ಹಾಗೂ ರಚನಾತ್ಮಕ ಚಟುವಟಿಕೆಯಲ್ಲಿ ತೊಡಗಿಕೊಳ್ಳಬೇಕು ಎಂದು ಜಿಲ್ಲಾ ನ್ಯಾಯಾಧೀಶರು ಕಿವಿಮಾತು ಹೇಳಿದರು.

ಪ್ರಸ್ತಾವನೆಯಲ್ಲಿ ಮಾತನಾಡಿದ ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ. ವಾಸುದೇವ್, ತಂಬಾಕು ಸೇವನೆಯ ದುಷ್ಪರಿಣಾಮಗಳ ಕುರಿತು ಜಿಲ್ಲೆಯ ಎಲ್ಲಾ ಶಾಲೆಗಳಲ್ಲಿ ಅರಿವು ಮೂಡಿಸುವ ಕಾರ್ಯಕ್ರಮಗಳನ್ನು ಏರ್ಪಡಿಸ ಲಾಗುತ್ತಿದೆ. ಸಾರ್ವಜನಿಕ ಸ್ಥಳದಲ್ಲಿ ದೂಮಪಾನ ನಿಷೇಧ ಹಾಗೂ ಶಾಲಾ ಆವರಣದಲ್ಲಿ ತಂಬಾಕು ವಸ್ತುಗಳ ಮಾರಾಟ ನಿಷೇಧಿಸಲಾಗಿದ್ದು, ಈ ಕುರಿತು ಪರಿಶೀಲಿಸಲು ಜಿಲ್ಲೆಯಾದ್ಯಂತ 5 ತಂಡಗಳನ್ನು ರಚಿಸಲಾಗಿದೆ. ಈ ತಂಡಗಳು ದಿಢೀರ್ ದಾಳಿ ನಡೆಸುವ ಮೂಲಕ ತಂಬಾಕು ವಸ್ತುಗಳನ್ನು ವಶಪಡಿಸಿಕೊಂಡು ದಂಡ ವಸೂಲಿ ಮಾಡಲಾಗುತ್ತಿದೆ ಎಂದರು.

ಉಡುಪಿ ಜಿಲ್ಲಾ ಆಸ್ಪತ್ರೆಯಲ್ಲಿ ತಂಬಾಕು ವ್ಯಸನಿಗಳಿಗೆ ನಿಕೋಟಿನ್ ಥೆರಪಿ ಚಿಕಿತ್ಸೆ ನೀಡಲು ಡಿ ಅಡಿಕ್ಷನ್ ಸೆಂಟರ್ ತರೆಯಲಾಗಿದ್ದು, ತಂಬಾಕು ನಿಯಂತ್ರಣಕ್ಕೆ ಎಲ್ಲಾ ಅಗತ್ಯ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಡಾ.ವಾಸುದೇವ್ ತಿಳಿಸಿದರು. ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶೆ ಲತಾ ಮಾತನಾಡಿ, ಅಪ್ರಾಪ್ತ ಮಕ್ಕಳಿಗೆ ಧೂಮಪಾನ ಮಾಡುವ ಕುರಿತಂತೆ ಉತ್ತೇಜನ ನೀಡುವುದು, ಅವರಿಗೆ ತಂಬಾಕು ಉತ್ಪನ್ನಗಳ ಮಾರಾಟ ಮಾಡುವುದು ಶಿಕ್ಷಾರ್ಹ ಅಪರಾಧವಾಗಿದೆ, ವಿದ್ಯಾರ್ಥಿಗಳು ದುಶ್ಚಗಳಿಗೆ ಬಲಿಯಾಗದೇ ಸಮಾಜ ಮುಖಿ ಕಾರ್ಯಳಲ್ಲಿ ತೊಡಗುವಂತೆ ವಿವರಿಸಿದರು.

ಕಾರ್ಯಕ್ರಮದಲ್ಲಿ ಜಿಲ್ಲಾ ಸರ್ಜನ್ ಡಾ.ಮಧುಸೂಧನ್ ನಾಯಕ್, ಕೆಎಂಸಿ ಮಣಿಪಾಲ ಸಮುದಾಯಆರೋಗ್ಯ ವಿಭಾಗದ ಡಾ. ಮುರಳೀಧರ ಕುಲಕರ್ಣಿ ಉಪಸ್ಥಿತರಿದ್ದರು. ಟ್ರಿನಿಟಿ ಕೈಗಾರಿಕಾ ಸಂಸ್ಥೆಯ ಪ್ರಾಂಶುಪಾಲ ಜಾನ್ ಎಂ. ಡಿಸೋಜಾ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ರೋಹಿಣಿ ಸ್ವಾಗತಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News